ಇವಳೆಂತ ಹೆಂಡತಿ; ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದು ಕಾಲುವೆಗೆ ಎಸೆದ ಪತ್ನಿ
Sunday, June 6, 2021
ಬೆಳಗಾವಿ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೋರ್ವಳು, ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದು ಕಾಲುವೆಗೆ ಎಸೆದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ.
ಮುಗಳಿಹಾಳ ಗ್ರಾಮದ ನಿವಾಸಿ ಲಕ್ಷ್ಮಣ ತಿಪ್ಪಣ್ಣಾ ಪುಂಜಿ (38) ಕೊಲೆಯಾಗಿರುವ ದುರ್ದೈವಿ.
ಲಕ್ಷ್ಮಣ ತಿಪ್ಪಣ್ಣಾ ಪುಂಜಿಯ ಪತ್ನಿ ಉದ್ದವ್ವ ಪುಂಜಿ ಎಂಬಾಕೆಗೆ ಅರ್ಜುನ್ ಆರೇರ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು. ಈ ಅಕ್ರಮ ಸಂಬಂಧಕ್ಕೆ ಗಂಡ ಲಕ್ಷ್ಮಣ ಅಡ್ಡಿಯೆನಿಸತೊಡಗಿದ್ದ. ಹಾಗಾಗಿ ಆತನನ್ನು ಇಲ್ಲವಾಗಿಸಲು ಪತ್ನಿ ಉದ್ದವ್ವ ಹಾಗೂ ಆಕೆಯ ಪ್ರಿಯಕರ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಜಮೀನಿನಲ್ಲಿದ್ದ ತಮ್ಮ ಮನೆಗೆ ಕಳೆದ ಬುಧವಾರ ಉದ್ದವ್ವ ತನ್ನ ಪ್ರಿಯಕರನನ್ನು ಬರಲು ಹೇಳಿದ್ದಾಳೆ. ಆತ ಬಂದ ಬಳಿಕ ಇಬ್ಬರೂ ಸೇರಿ ಲಕ್ಷ್ಮಣನ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾರೆ. ನಂತರ ಆತನ ಮೃತದೇಹವನ್ನು ಬೈಕ್ನಲ್ಲಿ ಎತ್ತಿಕೊಂಡು ಘಟಪ್ರಭಾ ಕಾಲುವೆ ಬಳಿಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಗಂಡನ ಮೃತದೇಹ ಮತ್ತು ಆತನ ಬೈಕ್ ಎರಡನ್ನೂ ಕಾಲುವೆಗೆ ಎಸೆದು ನೋಡುವವರ ಕಣ್ಣಿಗೆ ಇದೊಂದು ಅಪಘಾತ ಎನ್ನುವಂತೆ ಮಾಡುವ ಪ್ರಯತ್ನ ಮಾಡಿದ್ದಾರೆ. ಬಳಿಕ ಏನೂ ಗೊತ್ತಿಲ್ಲದವರಂತೆ ಸುಮ್ಮನಾಗಿದ್ದಾರೆ.
ಆದರೆ ಲಕ್ಷ್ಮಣ ಕಾಣದಿರುವ ಬಗ್ಗೆ ಆತನ ಅಣ್ಣ ಬಾಲಪ್ಪ ತಿಪ್ಪಣ್ಣ ಪುಂಜಿ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ನಡೆದ ನಿಜ ವಿಚಾರ ಬೆಳಕಿಗೆ ಬಂದಿದೆ.