ಖಂಡಿತವಾಗಿಯೂ ಮುಂದೊಂದು ದಿನ ನಿಮ್ಮನ್ನು ಭೇಟಿಯಾಗುವೆ ಎಂದ ರಶ್ಮಿಕಾ ಮಂದಣ್ಣ....
Monday, June 28, 2021
ಬೆಂಗಳೂರು: ಸುಮಾರು 900 ಕಿಲೋ ಮೀಟರ್ ರಶ್ಮಿಕಾ ಮಂದಣ್ಣ ಅವರನ್ನು ಭೇಟಿ ಮಾಡಲು ಬಂದ ಅಭಿಮಾನಿಯೊಬ್ಬರು ಭೇಟಿಯಾಗಲು ಸಾಧ್ಯವಾಗದೆ ನಿರಾಸೆಯಿಂದ ವಾಪಸ್ ಹೋಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ ಆಕಾಶ್ ತ್ರಿಪಾಠಿ ಎಂಬ ಅಭಿಮಾನಿ ವಿರಾಜಪೇಟೆಗೆ ಕಳೆದ ವಾರ ಬಂದಿದ್ದ. ನಂತರ ರಶ್ಮಿಕಾ ಅವರ ಮನೆಯ ವಿಳಾಸ ತಿಳಿಯದೇ ಇಡೀ ರಾತ್ರಿ ಮನೆಗಾಗಿ ಹುಡುಕಾಡಿದ್ದ. ರಶ್ಮಿಕಾ ಮಂದಣ್ಣ ಅವರ ಮನೆಯಲ್ಲಿ ಎಂದು ಸ್ಥಳೀಯರನ್ನು ವಿಚಾರಿಸಿದಾಗ ಆತನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆತನಿಗೆ ಎಚ್ಚರಿಕೆ ನೀಡಿ ವಿರಾಜಪೇಟೆ ಪೊಲೀಸರು ವಾಪಸ್ ಕಳುಹಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಇದನ್ನು ನೋಡಿದ ರಶ್ಮಿಕಾ, ಟ್ವೀಟ್ ಮಾಡಿ, ಖಂಡಿತವಾಗಿಯೂ ಮುಂದೊಂದು ದಿನ ನಿಮ್ಮನ್ನು ಭೇಟಿಯಾಗುವೆ ಎಂದು ಭರವಸೆ ನೀಡಿದ್ದಾರೆ. ‘ಅಷ್ಟು ದೂರದಿಂದ ನನ್ನನ್ನು ಕಾಣಲು ಬಂದಿದ್ದೀರಿ. ಆದರೆ ನಿಮ್ಮನ್ನು ಭೇಟಿ ಆಗದಿರುವುದಕ್ಕೆ ವಿಷಾದಿಸುತ್ತೇನೆ. ಮುಂದೊಂದು ದಿನ ನಿಮ್ಮನ್ನು ಭೇಟಿಯಾಗುವೆ. ನನ್ನ ಮೇಲೆ ನಿಮ್ಮ ಪ್ರೀತಿ ಇದೆ ರೀತಿ ಇರಲಿ. ಆದರೆ, ಹೀಗೆ ದೂರದಿಂದ ಕಷ್ಟಪಟ್ಟು ನನ್ನನ್ನು ಭೇಟಿಯಾಗುವ ತೊಂದರೆ ತೆಗೆದುಕೊಳ್ಳಬೇಡಿ, ಒಮ್ಮೆ ಭೇಟಿಯಾಗುವ ಸಂದರ್ಭ ಬರಬಹುದು’ ಎಂದು ಅಭಿಮಾನಿಯನ್ನು ಸಂತೈಸಿದ್ದಾರೆ.