
ಯುವತಿಯರ ಹಿಂಭಾಗ ಸ್ಪರ್ಶಿಸಿ ವಿಕೃತ ಆನಂದ ಪಡೆಯುತ್ತಿದ್ದ ಆರೋಪಿ ಅರೆಸ್ಟ್!
Saturday, June 5, 2021
ಬೆಂಗಳೂರು: ರಾತ್ರಿವೇಳೆ ಬೈಕ್ನಲ್ಲಿ ಸಂಚರಿಸಿ ಮಹಿಳೆಯರ ಹಿಂಭಾಗವನ್ನು ಸ್ಪರ್ಶಿಸಿ ವಿಕೃತ ಆನಂದ ಪಡೆದು ಪರಾರಿಯಾಗುತ್ತಿದ್ದ ಸೈಕೋ ಅರುಣ್ ಕುಮಾರ್ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.
ಮೇ 31ರಂದು ರಾತ್ರಿ ಕೋರಮಂಗಲದಲ್ಲಿ ಸೈಕೋ ಅರುಣ್ ಕುಮಾರ್ ಉತ್ತರ ಭಾರತ ಮೂಲದ ಯುವತಿಯ ಹಿಂಭಾಗವನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ಯುವತಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದಳು. ಪ್ರಕರಣ ಕೋರಮಂಗಲ ಪೊಲೀಸ್ ಠಾಣೆಗೆ ಹಸ್ತಾಂತರವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು 40ಕ್ಕೂ ಹೆಚ್ಚು ಸಿಸಿ ಟಿವಿ ಹಾಗೂ 80 ಬೈಕ್ ಗಳ ತಪಾಸಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಅರುಣ್ ಕುಮಾರ್ ಕೆಜಿಎಫ್ನ ರಾರ್ಬಟ್ ಸನ್ಪೇಟೆಯ ನಿವಾಸಿ. 3 ತಿಂಗಳಿನಿಂದ ಮೇಸ್ತ್ರಿ ಪಾಳ್ಯದಲ್ಲಿ ವಾಸವಿದ್ದಾನೆ. ಈತ ತನ್ನ ಸಹೋದರನ ಜತೆ ಡಂಜೋ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.
ಸೈಕೋನಂತಿರುವ ಆರೋಪಿ ಅರುಣ್ ಕುಮಾರ್ ಕಳೆದ ಒಂದು ತಿಂಗಳಲ್ಲಿ ಮೂರು-ನಾಲ್ಕು ಯುವತಿಯರಿಗೆ ಇಂತಹ ನೀಚ ಕೃತ್ಯ ಎಸಗಿರುವುದು ಗೊತ್ತಾಗಿದೆ. ಮಹಿಳೆಯರ ಹಿಂಭಾಗವನ್ನು ಸ್ಪರ್ಶಿಸಿ ಮಾನಸಿಕವಾಗಿ ಸುಖಪಡೆಯುತ್ತಿದ್ದೆ ಎಂದು ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಘಟನೆ ನಡೆದ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿರುವ ಬಗ್ಗೆ ಯುವತಿ, ನಗರ ಪೊಲೀಸರ ಉತ್ತಮ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.