ಬಾಂಗ್ಲಾ ನಟಿಯಿಂದ ತನ್ನ ಮೇಲೆ ಅತ್ಯಾಚಾರ, ಕೊಲೆ ಯತ್ನ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಆರೋಪಿಗಳು ಅರೆಸ್ಟ್
Tuesday, June 15, 2021
ಢಾಕಾ: ಬಾಂಗ್ಲಾದೇಶದ ಪೋರಿ ಮೋನಿ ಖ್ಯಾತಿಯ ನಟಿ ಶಮ್ಸುನ್ನಹಾರ್ ಸ್ಮೃತಿ ತನ್ನ ಮೇಲೆ ಅತ್ಯಾಚಾರ ಹಾಗೂ ಕೊಲೆ ಯತ್ನ ನಡೆದಿದೆ ಎಂದು ದೂರು ನೀಡಿರುವ ಬೆನ್ನಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಜತಿಯಾ ಪಕ್ಷದ ಸದಸ್ಯ ಸೇರಿದಂತೆ ಐವರನ್ನು ಬಾಂಗ್ಲಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಸಾವರ್ ಪೊಲೀಸರು ಢಾಕಾ ಮೆಟ್ರೋಪಾಲಿಟನ್ ಪೊಲೀಸರ (ಡಿಎನ್ಪಿ) ಬಳಿ ಸಹಾಯ ಕೋರಿದ ಬಳಿಕ ಪತ್ತೆದಾರಿ ತಂಡವೊಂದು ಢಾಕಾದ ಉತ್ತರ ಸೆಕ್ಟರ್-1ನೇ ಏರಿಯಾದಲ್ಲಿರುವ ಮನೆಯೊಂದರ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆಂದು ಡಿಎನ್ಪಿಯ ಪತ್ತೆದಾರಿ ವಿಭಾಗ ಜಂಟಿ ಆಯುಕ್ತ ರಶೀದ್ ಹೇಳಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಉದ್ಯಮಿ ಮತ್ತು ಉತ್ತರ ಕ್ಲಬ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ 65 ವರ್ಷದ ಆರೋಪಿ ನಾಸಿರ್ ಹಾಗೂ ಉದ್ಯಮಿ ತುಹಿನ್ ಸಿದ್ದಿಕ್ ಒಮಿ ಇಬ್ಬರೂ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದವರು. ಪ್ರಕರಣದಲ್ಲಿ ಈ ಇಬ್ಬರ ಹೆಸರು ಕೇಳಿಬಂದಿರುವುದರಿಂದ ಬಂಧಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿರುವ ಬಂಗಲೆ ಒಮಿ ಮತ್ತು ನಾಶಿರ್ ಇಬ್ಬರಿಗೂ ಸೇರಿದ್ದಾಗಿದೆ. ದಿ ಡೈಲಿ ಸ್ಟಾರ್ ಮಾಧ್ಯಮದೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಜತಿಯಾ ಪಕ್ಷದ ಅಧ್ಯಕ್ಷ ಮತ್ತು ಪ್ರತಿಪಕ್ಷದ ಉಪನಾಯಕ ಜಿಎಂ ಕ್ವಾಡರ್ ಅವರು ನಾಸಿರ್ ಯು ಮಹಮ್ಮದ್ ಅವರನ್ನು ತಪ್ಪಿತಸ್ಥರೆಂದು ಕಂಡುಕೊಂಡರೆ ಅವರನ್ನು ಪಕ್ಷದಿಂದ ಹೊರಹಾಕುವುದಾಗಿ ಹೇಳಿದ್ದಾರೆ. ಉಳಿದ ಮೂವರು ಆರೋಪಿಗಳು ಯುವತಿಯರಾಗಿದ್ದು, ಅವರು ಡಿಜೆ ಗ್ರೂಪ್ ಸದಸ್ಯೆಯರು ಎಂದು ತಿಳಿದುಬಂದಿದೆ. ಬಂಧನದ ವೇಳೆ ಬಂಗಲೆಯಲ್ಲಿ ಪಾರ್ಟಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಟಿ ಪೋರಿ ಮೋನಿ ಫೇಸ್ಬುಕ್ ಮೂಲಕ ತನ್ನ ಮೇಲೆ ಅತ್ಯಾಚಾರ ಮತ್ತು ಕೊಲೆ ಯತ್ನ ನಡೆದಿದೆ. ನ್ಯಾಯ ಕೊಡಿಸಿ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸ್ಸೀನಾ ಅವರಿಗೆ ಮನವಿ ಮಾಡಿದ್ದರು. ಪ್ರಧಾನಿಯನ್ನು ಅಮ್ಮ.. ಎಂದಿರುವ ಪೋರಿ ಮೋನಿ, ತಾನು ಅನುಭವಿಸಿದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಅಲ್ಲದೆ, ತಾನು ಎರಡೂವರೆ ವರ್ಷದ ಮಗು ಇದ್ದಾಗಲೇ ನನ್ನ ತಾಯಿ ತೀರಿಕೊಂಡರು, ಈ ಕ್ಷಣದಲ್ಲಿ ನನಗೆ ಅಮ್ಮ ಬೇಕು ಅಂದೆನ್ನಿಸುತ್ತಿದೆ ಎಂದೂ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ‘ಗೌರವಾನ್ವಿತ ಪ್ರಧಾನಿ ಅವರೇ, ನಾನು ಒಬ್ಬ ಹೆಣ್ಣು ಮಗಳು, ಈ ದೇಶದ ಪ್ರಜೆ. ನಾನು ಸಿನಿಮಾ ನಟಿ. ಮೇಲಾಗಿ ಒಬ್ಬ ಮನುಷ್ಯಳು. ನಾನು ದೈಹಿಕ ಕಿರುಕುಳಕ್ಕೆ ಬಲಿಯಾಗಿದ್ದೇನೆ. ನನ್ನ ಮೇಲೆ ಅತ್ಯಾಚಾರ ಮತ್ತು ಕೊಲೆಗೆ ಪ್ರಯತ್ನ ನಡೆದಿದೆ. ಇದಕ್ಕಾಗಿ ನನಗೆ ನ್ಯಾಯ ಬೇಕು. ಈ ನ್ಯಾಯವನ್ನು ನಾನು ಎಲ್ಲಿ ಪಡೆಯಲಿ? ಎಲ್ಲಿಗೆ ಹೋದರೆ ಸಿಗುತ್ತೆ? ಸೂಕ್ತ ನ್ಯಾಯವನ್ನು ಯಾರು ಕೊಡುತ್ತಾರೆ? ಕಳೆದ ನಾಲ್ಕು ದಿನದಿಂದ ಅಲೆದರೂ ನನಗೆ ಯಾರೊಬ್ಬರಿಂದರೂ ಸ್ಪಂದನೆ ಸಿಕ್ಕಿಲ್ಲ…’ ಎಂದು ಪೋರಿ ಮೋನಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.
ಅಲ್ಲದೆ ಸುದ್ದಿಗೋಷ್ಠಿ ನಡೆಸಿದ ಪೋರಿ ಮೋನಿ, ಉತ್ತರ ಕ್ಲಬ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ಮತ್ತು ಉದ್ಯಮಿ ನಾಸಿರ್ ಯು ಮಹ್ಮದ್ ನನ್ನ ಮೇಲೆ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ್ದ ಎಂದು ಆರೋಪಿ ಹೆಸರನ್ನು ಬಹಿರಂಗಗೊಳಿಸಿದ್ದರು. ನಾನು ಜೂ. 10 ರಂದು ಓಮಿ ಮತ್ತು ಮೇಕಪ್ಮನ್ ಜಿಮ್ಮಿ ಜತೆ ಕ್ಲಬ್ಗೆ ಹೋಗಿದ್ದೆ. ಅಲ್ಲಿ ನಾಸಿರ್ ಯು ಮಹ್ಮದ್ ಎಂಬಾತನ್ನು ಓಮಿ ಪರಿಚಯಿಸಿದ್ದ. ಮರುದಿನ ನಾಸಿರ್ ನನಗೆ ದೈಹಿಕ ಕಿರುಕುಕೊಟ್ಟು ಕೊಲ್ಲಲು ನೋಡಿದ. ಇದರಲ್ಲಿ ಓಮಿ ಕೂಡ ಭಾಗಿಯಾಗಿದ್ದ ಎಂದು ವಿವರಿಸಿದ್ದರು.