
MANGALORE-ಮಂಗಳಾದೇವಿಯಲ್ಲಿ ಲಾಕ್ಡೌನ್ ನಿಯಮ ಮೀರಿ ಮದುವೆ- ನಿಲ್ಲಿಸಿದ ಅಧಿಕಾರಿಗಳು! VIDEO
ಮಂಗಳೂರು: ಲಾಕೌ ಡೌನ್ ನಿಯಮ ಮೀರಿ ನಗರದ ಮಂಗಳಾದೇವಿ ದೇವಾಲಯದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು, ಮದುವೆ ತಡೆದ ಘಟನೆ ನಡೆದಿದೆ.
ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ, ಎಕ್ಕೂರಿನ ಭಾಸ್ಕರಚಂದ್ರ ಶೆಟ್ಟಿಯವರ ಪುತ್ರಿಯ ವಿವಾಹ ಸೇರಿದಂತೆ ನಾಲ್ಕು ಜೋಡಿಗಳ ಮದುವೆಯನ್ನು ನಿಮಯ ಬಾಹಿರವಾಗಿ ಏರ್ಪಡಿಸಲಾಗಿತ್ತು. ಮದುವೆಯ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂಭಾಗದಲ್ಲಿ 40ಕ್ಕೂ ಹೆಚ್ಚು ಕಾರುಗಳು ನಿಂತು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ಬೆಳಗ್ಗೆ ಹತ್ತೂವರೆ ಸುಮಾರಿಗೆ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಮತ್ತು ಮನಪಾ ಕಂದಾಯ ಇಲಾಖೆಯ ಉಪ ಆಯುಕ್ತ ಬಿನೋಯ್ ಸೇರಿದಂತೆ ಅಧಿಕಾರಿಗಳು ದಾಳಿ ನಡೆಸಿ, ಮದುವೆ ಸಮಾರಂಭವನ್ನು ನಿಲ್ಲಿಸಿದ್ದಾರೆ.
ಲಾಕ್ ಡೌನ್ ಮಧ್ಯೆ ಮನೆಯಲ್ಲಿ ಮದುವೆ ನಡೆಸಲು ಅನುಮತಿಯಿದ್ದರೂ, 25 ಜನರಿಗೆ ಮೀರದಂತೆ ಸರಳ ಸಮಾರಂಭ ನಡೆಸಲು ಮಾತ್ರ ಅನುಮತಿ ಇದೆ. ಆದರೆ, ಇಂದು ಕಾನೂನು ನಿಯಮ ಮೀರಿ ಅದ್ದೂರಿ ಮದುವೆ ಆಯೋಜಿಸಲಾಗಿತ್ತು.
ಸಮಾರಂಭದ ಆಯೋಜಕರು ಮತ್ತು ಮದುವೆಗೆ ಅವಕಾಶ ನೀಡಿರುವ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಮಂಗಳಾದೇವಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ್ದು, ಭಕ್ತರಿಗೆ ಪ್ರವೇಶ ಇಲ್ಲದಿರುವಾಗ ಮದುವೆಗೆ ಅವಕಾಶ ಕೊಟ್ಟಿದ್ದು ಹೇಗೆ ಎಂದು ದೇಗುಲದ ಆಡಳಿತಾಧಿಕಾರಿಯ ಬಗ್ಗೆ ಪಾಲಿಕೆ ಅಧಿಕಾರಿಗಳು ಗರಂ ಆಗಿದ್ದಾರೆ. ಅಲ್ಲದೆ ಅನುಮತಿ ಇರುವ ವಾಹನಗಳನ್ನುಳಿದು ಮಿಕ್ಕೆಲ್ಲಾ ವಾಹನಗಳನ್ನು ಸೀಸ್ ಮಾಡಲಾಗಿದೆ.