ಊಟ ಮಾಡುತ್ತಿಲ್ಲವೆಂದು ಹೆತ್ತಮಗುವನ್ನೇ ಪ್ರಿಯಕರನೊಂದಿಗೆ ಸೇರಿ ಹೊಡೆದು ಕೊಂದ ಪಾಪಿತಾಯಿ
Thursday, June 10, 2021
ಹೈದರಾಬಾದ್: ಮೂರು ವರ್ಷದ ಮಗುವೊಂದು ಸರಿಯಾಗಿ ಊಟ ಮಾಡುತ್ತಿಲ್ಲವೆಂದು ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತತಾಯಿಯೋರ್ವಳು ವೈರ್ ನಿಂದ ಹೊಡೆದು ಕೊಂದ ಅಮಾನುಷ ಘಟನೆ ಜೀಡಿಮೆಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿತೆ ಉದಯ ಎಂಬಾಕೆಗೆ ಸುರೇಶ್ ಎಂಬವರೊಂದಿಗೆ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದು ಜಗದ್ಗಿರಿಗುಟ್ಟದಲ್ಲಿ ವಾಸಿಸುತ್ತಿದ್ದಾರೆ. ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಉದಯಗೆ ಭಾಸ್ಕರ್ ಎಂಬಾತನ ಪರಿಚಯವಾಗಿದೆ. ಬಳಿಕ ಉದಯ ಭಾಸ್ಕರ್ ನೊಂದಿಗೆ ಸಲುಗೆಯಿಂದ ಇರಲು ತೊಡಗಿದ್ದಾಳೆ. ಇದನ್ನು ಕಂಡ ಸುರೇಶ್ ತನ್ನ ಪತ್ನಿಗೆ ಎಚ್ಚರಿಸಿದ್ದಾನೆ. ಹೀಗಾಗಿ ಇವರಿಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಈ ಮನಸ್ತಾಪದಿಂದ ಮೂರು ವರ್ಷಗಳ ಹಿಂದೆ ಅವರು ಬೇರೆ-ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಆರೋಪಿತೆ ಉದಯ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಗಂಡನೊಂದಿಗೆ ಬೇರೆಯಾದ ಬಳಿಕ ಆರೋಪಿತೆ ಉದಯ ಮೂರು ವರ್ಷದ ಮಗ ಉಮೇಶ್ ನೊಂದಿಗೆ ಭಗತ್ಸಿಂಗ್ ನಗರದಲ್ಲಿ ವಾಸಿಸುತ್ತಿದ್ದಳು. ಇದೀಗ ಉಮೇಶ ಸರಿಯಾಗಿ ಊಟ ಮಾಡುತ್ತಿಲ್ಲವೆಂದು ಪ್ರಿಯಕರ ಭಾಸ್ಕರ್ ಜೊತೆ ಸೇರಿ ವೈರ್ನಿಂದ ಥಳಿಸಿದ್ದಾಳೆ. ವೈರ್ನ ಏಟು ತಾಳದೇ ಉಮೇಶ್ ಮೂರ್ಛೆ ಹೋಗಿದ್ದಾನೆ.
ಬಳಿಕ ತನ್ನ ಮೇಲೆ ಅನುಮಾನ ಬರಬಾರದೆಂದು ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ ಚಿಕಿತ್ಸೆ ಫಲಿಸದೇ ಮಗು ಉಮೇಶ ಮಂಗಳವಾರ ಸಂಜೆ ಮೃತಪಟ್ಟಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಇನ್ಸ್ಪೆಕ್ಟರ್ ಬಾಲರಾಜು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದಾಗ, ಊಟ ಮಾಡುತ್ತಿಲ್ಲವೆಂದು ಮಾಮೂಲಾಗಿ ಹೊಡೆದಿದ್ದಕ್ಕೆ ಹೀಗಾಗಿದೆ ಎಂದು ಉದಯ ಹೇಳಿದ್ದಾಳೆ. ಬಳಿಕ ಭಾಸ್ಕರ್ ಮತ್ತು ಉದಯನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಮಗುವಿಗೆ ಕೋಣೆಯೊಂದರಲ್ಲಿ ವೈರ್ನಿಂದ ಥಳಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ