ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ತಸ್ತೀಕ್ ಹಣ ಹಿಂದೂ ದೇವಳಗಳಿಗೆ ಮಾತ್ರ ಮೀಸಲು: ಕೋಟ ಸ್ಪಷ್ಟನೆ ! (VIDEO)
Thursday, June 10, 2021
ಮಂಗಳೂರು: ಇನ್ನು ಮುಂದೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಬರುವ ತಸ್ತೀಕ್ ಹಣವನ್ನು ಹಿಂದೂ ದೇವಸ್ಥಾಗಳಿಗೆ ಮಾತ್ರ ಮೀಸಲಿರಿಸುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಕರ್ನಾಟಕದಲ್ಲಿ 27 ಸಾವಿರ ದೇವಸ್ಥಾನಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ 48 ಸಾವಿರ ರೂ. ನಂತೆ ಸುಮಾರು 133 ಕೋಟಿ ರೂ. ಹಣವನ್ನು ವಾರ್ಷಿಕವಾಗಿ ತಸ್ತೀಕ್ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅದರ ಜೊತೆಗೆ ಭೂಸುಧಾರಣಾ ಕಾನೂನು ಸಂದರ್ಭದಲ್ಲಿ ಭೂಮಿಯನ್ನು ಕಳೆದುಕೊಂಡ ದೇವಸ್ಥಾನಗಳಿಗೆ ವರ್ಷಾಸನ ಎಂದು ಇತರ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.
ಇದೀಗ ಈ ತಸ್ತೀಕ್ ಹಣ ಹಿಂದೂ ದೇವಾಲಯಗಳಲ್ಲದ ಇತರ ಧರ್ಮೀಯ ಧಾರ್ಮಿಕ ಕೇಂದ್ರಗಳಿಗೆ ಹೋಗುತ್ತಿರುವ ಬಗ್ಗೆ ವ್ಯಾಪಕ ಚರ್ಚೆಗಳು ಕೇಳು ಬರುತ್ತಿವೆ. ಈ ಬಗ್ಗೆ ಅದರ ವರದಿಯನ್ನು ತಂದು ಪರಿಶೀಲನೆ ನಡೆಸಿದಾಗ 764 ಇತರ ಧರ್ಮೀಯ ಪ್ರಾರ್ಥನಾ ಮಂದಿರ, ಬಸದಿಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದಲೇ ಹಣ ಹೋಗುತ್ತಿದೆ. ಅಲ್ಲದೆ 111 ಅನ್ಯ ಧರ್ಮೀಯ ಧಾರ್ಮಿಕ ಕ್ಷೇತ್ರಗಳಿಗೆ ವರ್ಷಾಸನ ಹೋಗುತ್ತಿದೆ. ಆದ್ದರಿಂದ ಇನ್ನು ಮುಂದೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅನುದಾನ ಬರೀ ಹಿಂದೂ ದೇವಾಲಯಗಳಿಗೆ ಮಾತ್ರ ವಿನಿಯೋಗ ಆಗಬೇಕು ಎಂದು ಸೂಚನೆ ನೀಡಿದ್ದೇನೆ. ನಮ್ಮ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಈ ಬಗ್ಗೆ ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಅನುಮತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಈ ಮೂಲಕ ಆದಷ್ಟು ಶೀಘ್ರದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅನುದಾನವನ್ನು ಇನ್ನು ಮುಂದೆ ಹಿಂದೂ ದೇವಸ್ಥಾಗಳಿಗೆ ಮಾತ್ರ ಸೀಮಿತಗೊಳಿಸಿ ಆದೇಶಿಸಲಾಗುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.