ಅದ್ದೂರಿ ಮದುವೆಯ ಕನಸು ಕಂಡಿದ್ದ ಮೋಹಕ ನಟಿ ಸಂಜನ ಗಲ್ರಾನಿ ಈ ಸೇವೆ ನಿಜಕ್ಕೂ ಶ್ಲಾಘನೀಯ!
Thursday, June 10, 2021
ಬೆಂಗಳೂರು: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ ನಟಿ ಸಂಜನಾ ಗಲ್ರಾನಿ. ನಟಿ ಸಂಜನಾ ಗಲ್ರಾನಿ ತಮ್ಮ ಫೌಂಡೇಶನ್ ಮೂಲಕ ಚಿತ್ರರಂಗದವರಷ್ಟೇ ಅಲ್ಲ, ಕಷ್ಟದಲ್ಲಿರುವವರಿಗೆ ರೇಷನ್ ಕಿಟ್ ವಿತರಿಸುವ ಮೂಲಕ, ಹಸಿದವರಿಗೆ ಅನ್ನದಾನ ಮಾಡುವ ಮೂಲಕ ಸ್ಪಂದಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ನನಗೆ ಮದುವೆ ಅದ್ದೂರಿ ಆಗಿ ಮಾಡಿಕೊಳ್ಳಬೇಕು ಎಂಬ ಕನಸು ಇತ್ತು. ಎಲ್ಲರನ್ನೂ ಕರೆಯಬೇಕು ಅಂತ ಆಸೆಯಿತ್ತು. ಆದರೆ, ಮೊದಲ ಲಾಕ್ಡೌನ್ನಿಂದ ಅದು ಸಾಧ್ಯವಾಗಲಿಲ್ಲ. ಚಿತ್ರರಂಗದವರನ್ನೆಲ್ಲ ಕರೆದು ಊಟ ಹಾಕಿಸಬೇಕು ಎಂಬ ನನ್ನಾಸೆ ಈಡೇರಲಿಲ್ಲ. ಈಗ ಚಿತ್ರರಂಗದ ಹಲವರು ತೊಂದರೆಯಲ್ಲಿದ್ದಾರೆ ಹಾಗಾಗಿ ಮದುವೆಗೆ ಅಂತ ಇಟ್ಟಿದ್ದ ದುಡ್ಡಿನಲ್ಲಿ ಇದೀಗ ಕಿಟ್ಗಳನ್ನು ವಿತರಿಸುತ್ತಿದ್ದೇನೆ. ಸಂಭ್ರಮಕ್ಕಿಂತ ಜನರ ಕಷ್ಟಕ್ಕೆ ಸ್ಪಂದಿಸುವುದು ಬಹಳ ಮುಖ್ಯ. ಈಗಾಗಲೇ, ಚಿತ್ರರಂಗದ ವಿವಿಧ ವಲಯಗಳ 500ಕ್ಕೂ ಹೆಚ್ಚು ಜನರಿಗೆ ಕಿಟ್ ವಿತರಿಸಲಾಗಿದೆ’ ಎಂದಿದ್ದಾರೆ ಸಂಜನಾ ಗಲ್ರಾನಿ.
ಇನ್ನು, ಇವರು ಕಳೆದ 24 ದಿನಗಳಿಂದ ಅವರು ಪ್ರತಿದಿನ 500ಕ್ಕೂ ಹೆಚ್ಚು ಜನರಿಗೆ ಆಹಾರ ವಿತರಿಸುತ್ತಿದ್ದು ಮೊದಲ 12 ದಿನಗಳ ಕಾಲ ಶ್ರೀಕೃಷ್ಣ ಪರಮಾತ್ಮ ಫೌಂಡೇಶನ್ ಅವರು ಅಡುಗೆ ಮಾಡಿ ಕೊಡುತ್ತಿದ್ದರು. ಅದನ್ನು ಹಂಚುವ ಕೆಲಸ ನಮ್ಮದಾಗಿತ್ತು. ಮೂರು ಪ್ರದೇಶಗಳಲ್ಲಿ ವಾಟ್ಸಪ್ ಗ್ರೂಪ್ ಮಾಡಿ, ಅವರಿಗೆ ಇಂತಿಷ್ಟು ಸಮಯಕ್ಕೆ ಬರುತ್ತೇವೆ ಎಂದು ಹೇಳಿ, ಆ ಸಮಯಕ್ಕೆ ಹೋಗಿ ಹಂಚುತ್ತಿದ್ದೆವು. ಅವರು ನಿಲ್ಲಿಸಿದ ನಂತರ, ನಾವೇ ನಮ್ಮ ಮನೆಯ ಕಾರ್ ಪಾರ್ಕಿಂಗ್ನಲ್ಲೇ ಅಡುಗೆ ಮಾಡಿ, ಕಷ್ಟದಲ್ಲಿರುವವರಿಗೆ ಹಂಚಿದೆವು. ಜನ ಬರುತ್ತಾರೋ ಇಲ್ಲವೋ ಎಂಬ ಭಯವಿತ್ತು. ಸ್ವಲ್ಪ ಹೊತ್ತಿನಲ್ಲೇ ಮಾಡಿದ ಅಷ್ಟೂ ಅಡುಗೆ ಖಾಲಿಯಾಯಿತು. ಹೀಗೆ ಪ್ರತಿ ದಿನ 500ಕ್ಕೂ ಹೆಚ್ಚು ಜನರಿಗೆ ಊಟ ಹಾಕುತ್ತಿದ್ದೇವೆ’ ಎಂದಿದ್ದಾರೆ ನಟಿ ಸಂಜನಾ.
ಕಿಟ್ ವಿತರಣೆ ಮತ್ತು ಅನ್ನದಾನ ಮಾಡುವುದರ ಜತೆಗೆ, ತರಕಾರಿ ಸಹ ಹಂಚಿದ್ದೇನೆ. ನಾನು ಯಾರ ಬಳಿಯೂ ದುಡ್ಡು ಕೇಳಲಿಲ್ಲ. ಕೆಲವರು ತಾವೇ ಮುಂದೆ ಬಂದು, ಆಹಾರ ಸಾಮಗ್ರಿ ಮತ್ತು ತರಕಾರಿಗಳನ್ನು ಕೊಟ್ಟಿದ್ದಾರೆ. ಅದನ್ನು ಫೌಂಡೇಶನ್ ಮೂಲಕ ಹಂಚಿದ್ದೇನೆ.ಲಾಕ್ಡೌನ್ ಮುಗಿಯುವವರೆಗೂ ಸಹಾಯವನ್ನು ಮುಂದುವರೆಸುವುದಕ್ಕೆ ಯೋಚಿಸಿದ್ದೇನೆ ಎಂದಿದ್ದಾರೆ ನಟಿ ಸಂಜನಾ ಗಲ್ರಾನಿ.