
ಅಪ್ರಾಪ್ತ ಬಾಲಕನಿಂದ ಆಂಟಿಗೆ ಮಗು- ನ್ಯಾಯಾಲಯ ಹೇಳಿದ್ದು ಹೀಗೆ....!
ಅಲಹಾಬಾದ್: ಅಪ್ರಾಪ್ತ ಬಾಲಕ ಮತ್ತು ಆತನ ವಯಸ್ಸಿಗಿಂತ ದೊಡ್ಡ ಮಹಿಳೆ ಪ್ರೀತಿಸಿ ಪಾಲಕರ ವಿರೋಧದ ನಡುವೆ ಮದುವೆಯಾಗಿ ಒಂದು ಮಗುವೂ ಹುಟ್ಟಿದೆ. ಈ ಮದುವೆಯನ್ನು ವಿರೋಧಿಸಿ, ಇದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಾಲಕನ ತಾಯಿ ಹೈಕೋರ್ಟ್ ಮೊರೆ ಹೋಗಿದ್ದು ಅಪ್ರಾಪ್ತ ಗಂಡ ಪತ್ನಿಯ ಬಳಿ ಇರಿಸಲು ಕೋರ್ಟ್ ನಿರಾಕರಿಸಿದೆ.
ಅಲಹಾಬಾದ್‌ನ 16 ವರ್ಷದ ಬಾಲಕ ತನಗಿಂತ ದೊಡ್ಡ ವಯಸ್ಸಿನ ಮಹಿಳೆಯೊಬ್ಬಳ ಜತೆ ಮದುವೆಯಾಗಿದ್ದಾನೆ. ಈ ಮದುವೆಯನ್ನು ವಿರೋಧಿಸಿ, ಇದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಾಲಕನ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಬಾಲಕ, ನಮ್ಮಿಬ್ಬರ ಪ್ರೇಮದ ಸಂಕೇತವಾಗಿ ಇದಾಗಲೇ ಮಗು ಹುಟ್ಟಿದೆ. ನಾನು ಪಾಲಕರ ಬಳಿ ಹೋಗಲಾರೆ. ಪತ್ನಿಯ ಬಳಿಯೇ ಇರುವೆ ಎಂದಿದ್ದಾನೆ.
ನ್ಯಾಯಮೂರ್ತಿಗಳು ಬಾಲಕನ ವಾದವನ್ನು ಒಪ್ಪಲಿಲ್ಲ. ಪೋಕ್ಸೋ ಕಾಯ್ದೆ ಅಡಿ ಇದು ಅಪರಾಧವಾಗಿರುವ ಕಾರಣ ಮದುವೆಯನ್ನು ಮಾನ್ಯ ಮಾಡಲಾಗುವುದಿಲ್ಲ ಎಂದಿದ್ದಾರೆ.
ಆದರೆ ಬಾಲಕ ಪಾಲಕರ ಬಳಿ ಹೋಗಲು ಇಚ್ಛಿಸದ ಕಾರಣ ಆತನನ್ನು ಬಾಲಮಂದಿರದಲ್ಲಿ ಇರಿಸುವಂತೆ ನ್ಯಾಯಮೂರ್ತಿ ಜೆ.ಜೆ.ಮುನೀರ್ ಹೇಳಿದ್ದು, ಆತನಿಗೆ ಕಾನೂನುರೀತ್ಯಾ ಮದುವೆಯ ವಯಸ್ಸು ಆದ ಮೇಲೆ ಬೇಕಿದ್ದರೆ ಪತ್ನಿಯ ಜತೆ ವಾಸಿಸಲು ಅವಕಾಶ ನೀಡಲಾಗುವುದು ಎಂದಿದ್ದಾರೆ.