Mangalore: ಫೇಸ್‌ಬುಕ್ ಗೆಳೆಯನ ವಂಚನೆಯ ಮಾತು ನಂಬಿ ಕುಡ್ಲದ ವ್ಯಕ್ತಿ ಕಳೆದುಕೊಂಡದ್ದು ಎಷ್ಟು ಗೊತ್ತಾ?
Monday, June 21, 2021
ಮಂಗಳೂರು: ವ್ಯಕ್ತಿಯೋರ್ವರಿಗೆ ಹಣ ಕಳುಹಿಸುವುದಾಗಿ ಹೇಳಿ ಬ್ಯಾಂಕ್ ವಿವರಗಳನ್ನು ಪಡೆದ ಎಫ್ ಬಿ ಗೆಳೆಯ ಬಳಿಕ ಆದಾಯ ತೆರಿಗೆ ಪಾವತಿಯೆಂದು 1.15ಲಕ್ಷ ರೂ. ವಂಚಿಸಿರುವುದಾಗಿ ಮಂಗಳೂರಿನ ಪಾಂಡೇಶ್ವರದ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರು ನೀಡಿರುವ ವ್ಯಕ್ತಿಯ ಎಫ್ ಬಿ ಖಾತೆಗೆ ನೆಲ್ಸನ್ ಮಾರ್ಕ್ ಹೆಸರಿನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಅಸೆಪ್ಟ್ ಮಾಡಿದ್ದರು. ಬಳಿಕ ಆತ ಫೇಸ್ ಬುಕ್ ಮುಖಾಂತರ ಸಂದೇಶ ವಿನಿಮಯ ಮಾಡುತ್ತಿದ್ದರು. ತದ ನಂತರ ಆತ ದೂರುದಾರರ ವಾಟ್ಸ್ ಆ್ಯಪ್ ಸಂಖ್ಯೆಯನ್ನು ಪಡೆದುಕೊಂಡು ತಾನು ಹಣ ಕಳುಹಿಸುವುದಾಗಿ ನಂಬಿಸಿ ಅವರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡಿದ್ದರು.
ಬಳಿಕ ದೂರುದಾರರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿರುವುದಾಗಿ ತಿಳಿಸಿ ಒಂದು ಡೆಪಾಸಿಟ್ ಸ್ಲಿಪ್ ನ್ನು ಕಳುಹಿಸಿಕೊಟ್ಟಿದ್ದರು. ಆದರೆ ಹಣ ಪಡೆಯಬೇಕಾದಲ್ಲಿ ಆದಾಯ ತೆರಿಗೆ ಪಾವತಿಸಬೇಕೆಂದು ತಿಳಿಸಿದ್ದು, ಅದನ್ನು ನಂಬಿದ ದೂರುದಾರರು ಆರೋಪಿ ಕಳುಹಿಸಿಕೊಟ್ಟ ಇಂಡಿಯನ್ ಬ್ಯಾಂಕ್ ನ ಡೆಲ್ಲಿ ಖಾತೆಗೆ 2021 ಎಪ್ರಿಲ್ 21 ರಂದು ಹಂತ ಹಂತವಾಗಿ ರೂ 1,15,000 ರೂ. ಕೆನರಾ ಬ್ಯಾಂಕ್ ಖಾತೆ ಯಿಂದ ಪಾವತಿಸಿರುತ್ತಾರೆ.
ಆದರೆ ಆ ಬಳಿಕ ಇವರ ಖಾತೆಗೆ ಯಾವುದೇ ಹಣ ಬಂದಿಲ್ಲ. ಈ ಬಗ್ಗೆ ಇದೀಗ ಅವರು ಪಾಂಡೇಶ್ವರದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.