ಗೃಹಿಣಿಗೆ ಪ್ರಿಯಕರನೊಂದಿಗೆ ಬಾಳಲು ಅಸ್ತು ಎಂದ ಕೋರ್ಟ್: ಆದೇಶದಿಂದ ಸುಸ್ತುಬಿದ್ದ ಗುಟ್ಕ, ಪಾನಪ್ರಿಯ ಪತಿರಾಯ
Friday, June 25, 2021
ಪಾಲಕ್ಕಾಡ್ (ಕೇರಳ): ಪ್ರೇಮಿಯೊಂದಿಗೆ ಮನೆಬಿಟ್ಟು ಓಡಿಹೋದ ವಿವಾಹಿತೆಯೋರ್ವಳು, ಗುಟ್ಕ, ಪಾನಪ್ರಿಯ ಪತಿಯೊಂದಿಗೆ ಬಾಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾಳೆ. ಈಕೆಯ ಹೇಳಿಕೆಯನ್ನು ಪರಿಗಣಿಸಿರುವ ನ್ಯಾಯಾಲಯ ಪ್ರಿಯತಮನೊಂದಿಗೆ ಬಾಳಲು ಅಸ್ತು ಎಂದಿದೆ. ಇದರಿಂದ ಪತಿರಾಯ ಪೂರ್ಣ ಸುಸ್ತು ಬಿದ್ದಿದ್ದಾನೆ.
ಕೇರಳದ ಪಾಲಕ್ಕಾಡಿನ ಪಾಲ ಪೂವಕುಳಂ ಎಂಬ ಊರಿನ 22 ವರ್ಷದ ಗೃಹಿಣಿ ಪ್ರಿಯತಮನೊಂದಿಗೆ ಓಡಿಹೋಗಿದ್ದು, ಪೊಲೀಸರು ಹುಡುಕಾಟ ನಡೆಸತೊಡಗಿದ್ದಾರೆ ಎಂದು ತಿಳಿದ ಬಳಿಕ ಆಕೆಯೇ ಶರಣಾಗಿದ್ದಾಳೆ. ಈ ಸಂದರ್ಭ ಕುಡುಕ, ಅತೀ ಗುಟ್ಕ ಚಟವುಳ್ಳ ಗಂಡನ ಜತೆ ಬಾಳಲು ಸಾಧ್ಯವಿರಲಿಲ್ಲ, ಆದ್ದರಿಂದ ಪ್ರಿಯತಮನೊಂದಿಗೆ ಜತೆ ಓಡಿಹೋದೆ. ಗಂಡ ವಿಪರೀತ ಗುಟ್ಕಾ ತಿನ್ನುತ್ತ, ಮದ್ಯ ಸೇವನೆ ಮಾಡುತ್ತಾ ಹಿಂಸೆ ನೀಡುತ್ತಿದ್ದ. ದೌರ್ಜನ್ಯ ಸಹಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಓಡಿಹೋಗಿದ್ದಾಗಿ ಹೇಳಿಕೆ ನೀಡಿದ್ದಾಳೆ.
ಆದರೆ ಆಕೆಯ ಪತಿ ಮಾತ್ರ 'ತನ್ನ ಹೆಂಡತಿಗೆ ಪಾಲಕ್ಕಾಡ್‌ನ ಮನ್ನಾಡ್‌ಕಾಡ್‌ನ ನಿವಾಸಿಯೊಬ್ಬನ ಪರಿಚಯವಾಗಿದ್ದು, ಆತನೊಟ್ಟಿಗೆ ಸಲುಗೆ ಬೆಳೆಸಿಕೊಂಡಿದ್ದಾಳೆ. ದಿನವೂ ಅವರು ಫೋನ್‌ನಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಜೊತೆಗೆ ಈಕೆ 4 ಗಂಟೆ ಎದ್ದು ಪರಾರಿಯಾಗಿದ್ದಾಳೆ. ಈಕೆಯ ಪ್ರಿಯಕರ ಗೇಟ್ ಬಳಿ ಕಾಯುತ್ತಿದ್ದ ಎಂದಿದ್ದಾನೆ. ಇವಳಿಗೆ ಅನೈತಿಕ ಸಂಬಂಧ ಇರುವುದು ತಿಳಿದಿತ್ತು. ಇದೇ ಕಾರಣಕ್ಕೆ ಆಕೆಯ ಫೋನ್ ಕಸಿದುಕೊಂಡು ಸಿಮ್ ನಾಶ ಮಾಡಿದ್ದೆ. ಆದರೆ ಪ್ರಿಯಕರನೊಂದಿಗೆ ಓಡಿಹೋಗುವ ವೇಳೆ ಈಕೆ ನನ್ನ ಫೋನ್ ಮತ್ತು ಸಿಮ್ ತೆಗೆದುಕೊಂಡು ಹೋಗಿದ್ದಾಳೆ ಎಂದಿದ್ದಾನೆ.
ಆಕೆ ಕಾಣೆಯಾದ ಕೂಡಲೇ ಪತಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾನೆ. ಮೊಬೈಲ್ ಫೋನ್ ಅನ್ನು ಟ್ರೇಸ್ ಮಾಡಿದ ಪೊಲೀಸರು ಆತನ ಮಡದಿ ಹಾಗೂ ಆಕೆಯ ಪ್ರಿಯಕರ ಎಲ್ಲಿದ್ದಾರೆ ಎಂದು ಪತ್ತೆ ಮಾಡಿದ್ದಾರೆ. ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಕಾರಣಕ್ಕೆ ನೇರವಾಗಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವುದಾಗಿ ಕೋರ್ಟ್‌ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಹಿಳೆ ತಿಳಿಸಿದ್ದು, ಕುಡುಕ ಗಂಡನ ಬಗ್ಗೆ ಹೇಳಿಕೆ ನೀಡಿದ್ದಾಳೆ. ಮಾತ್ರವಲ್ಲದೇ, ತನ್ನ ಪ್ರಿಯಕರನೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡಿದ್ದು, ಆತನೊಂದಿಗೆ ತನ್ನ ಮುಂದಿನ ಜೀವನ ನಡೆಸುತ್ತೇನೆ ಎಂದಿದ್ದಾಳೆ. ವಿಚಾರಣೆ ನಡೆಸಿದ ಕೋರ್ಟ್ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡು, ದೌರ್ಜನ್ಯ ನಡೆಸುತ್ತಿರುವ ಕಾರಣ ಈ ರೀತಿ ಆಕೆ ಮಾಡಿದ್ದಾಳೆ ಎಂಬ ತೀರ್ಮಾನಕ್ಕೆ ಬಂದು, ಪ್ರಿಯತಮನೊಂದಿಗೆ ಜತೆ ಬಾಳಲು ಅನುಮತಿ ನೀಡಿದೆ. ಈ ಆದೇಶದಿಂದ ಗಂಡ ಬೇಸ್ತು ಬಿದ್ದಿದ್ದಾನೆ. ಪತ್ನಿ ಸಿಗದೇ ಮರಳಿದ್ದಾನೆ.