ಈ ದೇಶದಲ್ಲಿ ಒಂದು ಕೆಜಿ ಬಾಳೆ ಹಣ್ಣಿಗೆ 3,335 ರೂ.!
Monday, June 21, 2021
ಪ್ಯೊಂಗ್ಯಾಂಗ್: ಉತ್ತರ ಕೊರಿಯಾದಲ್ಲಿ ತೀವ್ರ ಆಹಾರ ಬಿಕ್ಕಟ್ಟು ಉಂಟಾಗಿದ್ದು, ಆಹಾರ, ಪದಾರ್ಥಗಳ ಬೆಲೆ ಗಗನಕ್ಕೇರಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ.
ಇದೊಂದು ಉದ್ವಿಗ್ನ ಪರಿಸ್ಥಿತಿ ಎಂದು ಒಪ್ಪಿಕೊಂಡಿರುವ ಉತ್ತರಕೊರಿಯಾ ಸರ್ವೋಚ್ಛ ನಾಯಕ ಕಿಮ್ ಜಾಂಗ್ ಅವರು, ಕಳೆದ ವರ್ಷದ ಚಂಡಮಾರುತದ ಹೊಡೆತದಿಂದ ಸಂಭವಿಸಿರುವ ಹಾನಿಯಿಂದಾಗಿ ಕೃಷಿ ಕ್ಷೇತ್ರವು ತನ್ನ ಧಾನ್ಯ ಉತ್ಪಾದನೆಯ ಯೋಜನೆಯನ್ನು ಪೂರೈಕೆ ಮಾಡಲು ವಿಫಲವಾದ ಪರಿಣಾಮ ಆಹಾರ ಕೊರತೆ ಉಂಟಾಗಿದೆ. ಈ ಮೂಲಕ ಜನರು ಉದ್ವಿಗ್ನಗೊಳ್ಳುವಂತಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿನ ಬೆಲೆ ಏರಿಕೆಯ ಬಿಸಿ ಹೇಗೆ ಜನಸಾಮಾನ್ಯರಿಂದ ಹಿಡಿದು ಮಧ್ಯಮವರ್ಗದವರಿಗೆ ತಟ್ಟಿದೆ ಎಂದು ಇಲ್ಲಿನ ವರದಿ ತಿಳಿಸಿದೆ. ಇದರ ಪ್ರಕಾರ, ಉತ್ತರಕೊರಿಯಾದಲ್ಲಿ ಆಹಾರ, ಪದಾರ್ಥಗಳ ಬೆಲೆ ಗಗನಕ್ಕೇರತೊಡಗಿದೆ.
ರಾಜಧಾನಿ ಪೊಂಗ್ಯಾಂಗ್ ನಲ್ಲಿ ಒಂದು ಕೆಜಿ ಬಾಳೆ ಹಣ್ಣಿನ ಬೆಲೆ 45 ಡಾಲರ್ (3,335 ರೂ.) ಗೆ ಎರಿದೆ. ಬ್ಲ್ಯಾಕ್ ಟೀ ಪ್ಯಾಕೆಟ್ ಗೆ 5,190 ರೂ. ಕೊಟ್ಟು ಜನರು ಖರೀದಿಸಿದರೆ, ಕಾಫಿ ಪುಡಿ ಒಂದು ಕೆಜಿ ಪ್ಯಾಕೇಟ್ ಗೆ 7,414 ರೂ. ಎಂದು ವರದಿ ತಿಳಿಸಿದೆ. ದೇಶದಲ್ಲಿ ತಲೆದೋರಿರುವ ಆಹಾರ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ಕೇಂದ್ರ ಸಮಿತಿ ಸಭೆಯಲ್ಲಿ ಕಿಮ್ ಪಕ್ಷದ ಮುಖಂಡರಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.