ಹೆಣ್ಣಿನ ವೇಷದಲ್ಲಿ ಪ್ರೇಯಸಿಯನ್ನು ನೋಡಲು ಹೋದ ಪ್ರೇಮಿಗೆ ಧರ್ಮದೇಟು!
Friday, June 4, 2021
ಲಖನೌ: ಹೆಣ್ಣಿನ ವೇಷದಲ್ಲಿ ಪ್ರೇಯಸಿಯನ್ನು ನೋಡಲು ಹೋಗಿ ಪ್ರೇಮಿಯೋರ್ವನು ಎಡವಟ್ಟು ಮಾಡಿಕೊಂಡಿದ್ದು, ಪ್ರೇಯಸಿಯ ಮನೆಯವರಿಗೆ ಆಕೆಯ ಪ್ರಿಯಕರನೇ ಬಂದಿರುವುದೆಂದು ತಿಳಿದು ಧರ್ಮದೇಟು ನೀಡಿರುವ ಘಟನೆ ಉತ್ತರ ಪ್ರದೇಶದ ಬದೌಹಿ ಜಿಲ್ಲೆಯಲ್ಲಿ ನಡೆದಿದೆ.
ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪ್ರೀತಿಯ ವಿಚಾರ ಮನೆಯವರಿಗೆ ಗೊತ್ತಾಗಿ ಪ್ರೇಮಿಗಳಿಬ್ಬರನ್ನು ಪಾಲಕರು ದೂರ ಮಾಡಿದರು. ಮನೆಯಿಂದ ಹೊರಹೋಗದಂತೆ ಯುವತಿಯನ್ನು ಮನೆಯಲ್ಲಿಯೇ ಬಂಧಿಸಿದರು. ಆದರೆ, ಪ್ರೇಯಸಿ ನೋಡಲಾಗದ ಪ್ರಿಯಕರ ಹೆಣ್ಣಿನ ವೇಷ ಧರಿಸಿ ಪ್ರೇಯಸಿಯ ಮನೆಗೆ ಬಂದಿದ್ದಾನೆ.
ಹುಡುಗಿಯಂತೆ ಸಿನಿಮಾ ಶೈಲಿಯಲ್ಲಿ ವೇಷ ಧರಿಸಿ ಹೋದರೆ ಪ್ರೇಯಸಿಯನ್ನು ನೋಡಬಹುದು ಎಂಬ ಐಡಿಯಾ ಮಾಡಿದ ಯುವಕ, ಹುಡುಗಿಯರು ಬಳಸುವ ಓಲೆ, ಚಪ್ಪಲಿ, ಲಂಗ ದಾವಣಿ ದುಪ್ಪಟ್ಟಾ ಧರಿಸಿಕೊಂಡು ಪ್ರೇಯಸಿ ಮನೆಯತ್ತ ನಡೆದ. ಪ್ರೇಯಸಿಯ ಹೆಸರು ಹೇಳಿ ನಾನು ಆಕೆಯ ಸ್ನೇಹಿತೆ ಭೇಟಿ ಮಾಡಬೇಕೆಂದು ಹೇಳಿದ್ದಾನೆ.
ಈ ಬಗ್ಗೆ ಅನುಮಾನಗೊಂಡ ಯುವತಿಯ ಸಂಬಂಧಿಕರು ಮನೆಯಲ್ಲಿ ನೆರೆದಿದ್ದರು. ವೇಲ್ನಿಂದ ತನ್ನ ಮುಖವನ್ನು ಮುಚ್ಚಿಕೊಂಡಿದ್ದ ಯುವಕ ಕೂದಲಿಗೆ ಯಾವುದೇ ಬದಲಾವಣೆ ಮಾಡದೇ ಹಾಗೇ ಬಂದಿದ್ದೇ ಆತ ಸಿಕ್ಕಿಕೊಳ್ಳಲು ಪ್ರಮುಖ ಕಾರಣವಾಯಿತು. ಯುವತಿ ಕುಟುಂಬಸ್ಥರು ಮುಖ ತೋರಿಸು ಎಂದಾಗ ತೋರಿಸಲು ಆತ ಹಿಂಜರಿದ. ಕೊನೆಗೆ ಬಲವಂತದಿಂದ ತೆರೆದು ನೋಡಿದ ಸಂಬಂಧಿಕರಿಗೆ ಶಾಕ್ ಕಾದಿತ್ತು. ಆತ ತಮ್ಮ ಮನೆಯ ಹೆಣ್ಣು ಮಗಳ ಪ್ರಿಯಕರನಾಗಿದ್ದ. ಬಳಿಕ ಆತನ ವೇಲ್ ಎಳೆದು ಥಳಿಸಲಾಯಿತು. ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದಾನೆ