ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯನ್ನು ಗರ್ಭವತಿಯನ್ನಾಗಿಸಿದ ಆಟೋ ಡ್ರೈವರ್: ಆರೋಪಿ ಪೊಲೀಸ್ ವಶಕ್ಕೆ
Thursday, June 10, 2021
ಕೆ.ಆರ್.ಪೇಟೆ: ಮದುವೆಯಾಗುವುದಾಗಿ ನಂಬಿಸಿ 14ರ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭವತಿಯನ್ನಾಗಿಸಿದ ಆಟೋ ಡ್ರೈವರ್ ಮೇಲೆ ಪೊಕ್ಸೊ ಪ್ರಕರಣ ದಾಖಲಾಗಿದೆ.
ಕೆ.ಆರ್.ಪೇಟೆ ನಿವಾಸಿ ಆಟೊ ಡ್ರೈವರ್ ಲಕ್ಷ್ಮಣ (24) ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದಾತ.
ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಲಕ್ಷ್ಮಣ ತನ್ಮದೇ ಗ್ರಾಮದ ಎದುರು ಮನೆಯ ಬಾಲಕಿಯನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಪ್ರೀತಿ ನಿವೇದಿಸಿಕೊಂಡಿದ್ದಾನೆ. ಬಾಲಕಿ ಮೊದಲು ಒಪ್ಪದಿದ್ದರೂ, ಹಲವು ದಿನಗಳ ಬಳಿಕ ಪ್ರೀತಿಸುವುದಾಗಿ ಒಪ್ಪಿಗೆ ಸೂಚಿಸಿದ್ದಾಳೆ. ಇದನ್ನೇ ದುರುಪಯೋಗಪಡಿಸಿಕೊಂಡ ಲಕ್ಷ್ಮಣ ಆಕೆಯ ಜತೆ ನಿರಂತರ ಲೈಂಗಿಕ ಸಂಪರ್ಕ ಹೊಂದಿದ್ದಾನೆ. ಅಲ್ಲದೆ, ಮನೆಯವರಿಗೆ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆದ್ದರಿಂದ ಬಾಲಕಿಯ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ವೈದ್ಯರ ಬಳಿ ತಪಾಸಣೆ ನಡೆಸಿದಾಗ ಬಾಲಕಿ ನಾಲ್ಕು ತಿಂಗಳ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಬಾಲಕಿಯನ್ನು ಪೋಷಕರು ವಿಚಾರಿಸಿದಾಗ ಲಕ್ಷ್ಮಣ, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಹೊಂದಿರುವುದಾಗಿ ಹೇಳಿದ್ದಾಳೆ. ತಕ್ಷಣ ಪೋಷಕರು ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಆರೋಪಿಯನ್ನು ಬಂಧಿಸಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.