ಸೌದಿ ಅರೇಬಿಯಾದಲ್ಲಿ ಇನ್ನು 3 ತಿಂಗಳು ಕಾರ್ಮಿಕರು ಬಿಸಿಲಿನಲ್ಲಿ ಕೆಲಸ ಮಾಡುವಂತಿಲ್ಲ
Tuesday, June 15, 2021
ಸೌದಿ ಅರೇಬಿಯ: ಸೌದಿ ಅರೇಬಿಯದಲ್ಲಿ ಇನ್ನು ಮೂರು ತಿಂಗಳ ಕಾಲ ಕಾರ್ಮಿಕರು ಮಧ್ಯಾಹ್ನ ಬಿಸಿಲಿನಲ್ಲಿ ಕೆಲಸ ಮಾಡುವಂತಿಲ್ಲ ಎಂದು ಸೌದಿ ಅರೇಬಿಯದ ಮಾನವ ಸಂಪನ್ಮೂಲಗಳ ಸಚಿವಾಲಯ ಘೋಷಿಸಿದೆ.
ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸುವ ನಿಯಮಗಳಿಗೆ ಅನುಸಾರವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದ್ದು ಜೂನ್ 15ರಿಂದ ಸೆಪ್ಟಂಬರ್ 15ರವರೆಗೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ತಮ್ಮ ಕೆಲಸಗಾರರು ಬಿಸಿಲಿನಲ್ಲಿ ಕೆಲಸ ಮಾಡದಂತೆ ಉದ್ಯೋಗದಾತರು ನೋಡಿಕೊಳ್ಳಬೇಕು ಎಂದು ಸೌದಿ ಅರೇಬಿಯದ ಮಾನವ ಸಂಪನ್ಮೂಲಗಳ ಸಚಿವಾಲಯ ಘೋಷಿಸಿದೆ ಎಂದು ‘ಅರಬ್ ನ್ಯೂಸ್’ ಪತ್ರಿಕೆ ವರದಿ ಮಾಡಿದೆ.
ದೇಶದ ಖಾಸಗಿ ವಲಯದ ಉದ್ಯೋಗಿಗಳು ಕೆಲಸ ಮಾಡುವಾಗ ಗಾಯಗೊಳ್ಳುವ ಪ್ರಮಾಣವನ್ನು ಕಡಿಮೆ ಮಾಡುವುದು, ಅವರ ಆರೋಗ್ಯವನ್ನು ಕಾಪಾಡುವುದು ಮತ್ತು ಅವರ ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ನೂತನ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಸಚಿವಾಲಯ ಹೇಳಿದೆ.