
ಇದು ನಿಜಕ್ಕೂ ಹೃದಯ ವಿದ್ರಾವಕ ; ಸಾಯುವ ಅಂತಿಮ ಕ್ಷಣದಲ್ಲಿ ಕೊರೊನಾ ಪೀಡಿತ ತಂದೆಗೆ ನೀರು ನೀಡಲು ಬಂದ ಮಗಳು- ತಡೆದ ತಾಯಿ ( video)
ವಿಜಯವಾಡ: ಕೊರೋನಾ ಎರಡನೇ ಅಲೆ ಭಾರತವನ್ನು ತೀವ್ರವಾಗಿ ಕಾಡತೊಡಗಿದೆ. ಭಾರತದ ಮೂಲೆ ಮೂಲೆಯಿಂದಲೂ ಕೊರೊನಾ ಕುರಿತಂತೆ ಹೃದಯ ವಿದ್ರಾವಕ ಘಟನೆಗಳೇ ವರದಿಯಾಗುತ್ತಿದೆ.
ಕೋವಿಡ್ ಬಾಧಿತನಾಗಿ ಸಾವಿನ ಸನಿಹದಲ್ಲಿದ್ದ 50 ವರ್ಷದ ವ್ಯಕ್ತಿ ತನ್ನ ಮನೆ ಮುಂದೆ ಉಸಿರುಗಟ್ಟಿ ನರಳಾಡುತ್ತಿರುವವಾಗ, ಅಳುತ್ತಾ ಆತನ ಮಗಳು ನೀರು ನೀಡಲು ತೆರಳಿದ್ದು, ಕೊರೋನಾ ಹರಡುವ ಭೀತಿಯಿಂದ ಆಕೆಯ ತಾಯಿ ನೀರು ನೀಡಲು ಹೋಗುತ್ತಿರುವ ಮಗಳನ್ನು ತಡೆಯುತ್ತಿರುವ ಹೃದಯ ವಿದ್ರಾವಕ ಘಟನೆ ವಿಜಯವಾಡದ ಹಳ್ಳಿಯಿಂದ ವೈರಲ್ ಆಗತೊಡಗಿದೆ.
ಆಂದ್ರಪ್ರದೇಶದ ವಿಜಯವಾಡದ ನಗರದಲ್ಲಿ ಕೆಲಸ ಮಾಡುತ್ತಿದ್ದ ಈ 50 ವರ್ಷದ ವ್ಯಕ್ತಿಯು ಕೋವಿಡ್ ಪಾಸಿಟಿವ್ ಆದ ಬಳಿಕ ತನ್ನ ಹಳ್ಳಿಯಲ್ಲಿರುವ ಮನೆಗೆ ಮರಳಿದ್ದರು. ಆದರೆ ಗ್ರಾಮಸ್ಥರು ಆತನನ್ನು ಊರಿಗೆ ಬರಲು ಬಿಟ್ಟಿರಲಿಲ್ಲ. ಈ ನಿಟ್ಟಿನಲ್ಲಿ ಊರ ಹೊರಗಿನ ಗದ್ದೆಯಲ್ಲಿ ಆತ ವಾಸಿಸತೊಡಗಿದ್ದ.
ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಈ ವ್ಯಕ್ತಿ ಇಲ್ಲೇ ಬಾಕಿಯಾಗಿದ್ದ. ಆದರೆ ಚಿಕಿತ್ಸೆ ಸಿಗದ ಈ ವ್ಯಕ್ತಿಯ ಸ್ಥಿತಿ ಗಂಭೀರವಾಗತೊಡಗಿದ್ದು, ಉಸಿರಾಡಲಾಗದೇ ನೆಲದ ಮೇಲೆ ಬಿದ್ದ ಹೊರಳಾಡುತ್ತಿದ್ದ ಅಪ್ಪನ ಸ್ಥಿತಿ ಕಂಡು ಮರುಗಿದ 17 ವರ್ಷದ ಮಗಳು ಒಂದು ಬಾಟಲಿಯಲ್ಲಿ ನೀರಿನೊಂದಿಗೆ ತಂದೆಗೆ ಕುಡಿಸಲೆಂದು ಹೊರಟಿದ್ದಳು.
ಈ ವೇಳೆ ತಾಯಿ ತಡೆದರೂ ಆರ್ಭಟಿಸುತ್ತಾ ತೆರಳಿದ ಮಗಳು ತಂದೆಗೆ ನೀರುಣಿಸಿದ್ದಾಳೆ. ತಾಯಿ ಮತ್ತೂ ತಡೆಯುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ. ಈ ಘಟನೆಯನ್ನು ಮೊಬೈಲ್‍ನಲ್ಲಿ ವೀಡಿಯೋ ಮಾಡುತ್ತಿದ್ದ ವ್ಯಕ್ತಿಯಲ್ಲದೇ ಅಲ್ಲಿ ಹಲವರು ನಿಂತು ನೋಡುತ್ತಿದ್ದರು ಎಂದು ತಿಳಿದು ಬಂದಿದೆ.