Mangalore- ವಿಮಾನ ದುರಂತದ ಕರಾಳ ನೆನಪಿಗೆ ಇಂದಿಗೆ 11 ವರ್ಷ- ಇನ್ನೂ ಸಿಕ್ಕಿಲ್ಲ ನ್ಯಾಯಯುತ ಪರಿಹಾರ
Saturday, May 22, 2021
ಮಂಗಳೂರು; ಮಂಗಳೂರಿನಲ್ಲಿ ನಡೆದ ಭೀಕರ ವಿಮಾನ ದುರಂತಕ್ಕೆ ಇಂದಿಗೆ ಹನ್ನೊಂದು ವರ್ಷ ತುಂಬಿದೆ. 2010 ಮೇ 22 ರಂದು ನಡೆದ ವಿಮಾನ ದುರಂತದಲ್ಲಿ 158 ಮಂದಿ ಸಾವನ್ನಪ್ಪಿದ್ದರು. ಮಂಗಳೂರು ಜನತೆಯನ್ನು ಇಂದಿಗೂ ಬೆಚ್ಚಿ ಬೀಳಿಸುವ ಈ ಕರಾಳ ಘಟನೆಗೆ ಇಂದಿಗೆ 11 ವರುಷ ತುಂಬಿದೆ.
ಮಂಗಳೂರು ವಿಮಾನ ದುರಂತದಲ್ಲಿ 158 ಮಂದಿ ಸಾವನ್ನಪ್ಪಿ 8 ಮಂದಿ ಬದುಕುಳಿದಿದ್ದರು. 135 ವಯಸ್ಕರು, 19 ಮಕ್ಕಳು, 4 ಶಿಶು ಮತ್ತು ಆರು ಮಂದಿ ಸಿಬ್ಬಂದಿಗಳು ಸಾವನ್ನಪ್ಪಿದ್ದರು.
ದುಬಾಯಿನಿಂದ ಮಂಗಳೂರಿಗೆ ಬಂದ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇ ಯಲ್ಲಿ ನಿಲ್ಲದೆ ಸೂಚನಾ ಗೋಪುರಕ್ಕೆ ಡಿಕ್ಕಿ ಹೊಡೆದು ಆಳವಾದ ಪ್ರದೇಶಕ್ಕೆ ಉರುಳಿ ಬಿದ್ದು ಬೆಂಕಿ ತಗುಲಿ ಸ್ಪೋಟವಾಗಿತ್ತು. ಸಾವನ್ನಪ್ಪಿದ 158 ಮಂದಿಯಲ್ಲಿ 12 ಮಂದಿಯ ಗುರುತು ಪತ್ತೆಯಾಗಿರಲಿಲ್ಲ. ಇವರ ಮೃತದೇಹವನ್ನು ಕೂಳೂರು ಬ್ರಿಡ್ಜ್ ಸಮೀಪ ತಣ್ಣೀರುಬಾವಿ ರಸ್ತೆ ಬದಿಯ ನದಿ ತೀರದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಬಂದ ಎ ಬಿ ಇಬ್ರಾಹಿಂ ಅವರು ಈ ಸ್ಥಳದಲ್ಲಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಸ್ಮಾರಕ ನಿರ್ಮಿಸಿದ್ದರು.
ಈ ಸ್ಮಾರಕ ಬಳಿ ಪ್ರತಿ ವರ್ಷ ಮೇ22 ರಂದು ಶೃದ್ದಾಂಜಲಿ ಕಾರ್ಯಕ್ರಮ ನಡೆಯುತ್ತಿದ್ದು ಈ ಬಾರಿ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ, ಶಾಸಕ ವೇದವ್ಯಾಸ ಕಾಮತ್ ಮೊದಲಾದವರು ಸ್ಮಾರಕದಲ್ಲಿ ಪುಷ್ಪಗುಚ್ಚ ಇರಿಸಿ ನಮನ ಸಲ್ಲಿಸಿದರು.
ಇನ್ನೂ ಸಿಗದ ನ್ಯಾಯಯುತ ಪರಿಹಾರ!
ವಿಮಾನದುರಂತ ಸಂಭವಿಸಿ 11 ವರ್ಷಗಳಾದರೂ ಮೃತರ ಕುಟುಂಬಿಕರಿಗೆ ನ್ಯಾಯಯುತ ಪರಿಹಾರ ಸಿಕ್ಕಿಲ್ಲ ಎಂಬ ಆರೋಪ ಕೇಳಿಬರುತ್ತಲೆ ಇದೆ. ಮೃತರ ಕುಟುಂಬದ ಕೆಲವರಿಗೆ 35 ಲಕ್ಷ ಸಿಕ್ಕರೆ ಕೆಲವು ಬೆರಳೆಣಿಕೆಯ ಸಂತ್ರಸ್ತರಿಗೆ 7 ಕೋಟಿವರೆಗೆ ಪರಿಹಾರ ದೊರೆತಿದೆ. ಮೃತ ಮಹಿಳೆ, ಮಕ್ಕಳ ಕುಟುಂಬದವರಿಗೆ ಕಡಿಮೆ ಪರಿಹಾರ ಸಿಕ್ಕಿದೆ ಎಂಬ ಆರೋಪವಿದೆ. ವಿಮಾನ ದುರಂತ ನಡೆದಾಗ ಪರಿಹಾರ ನೀಡುವಲ್ಲಿ ಅಂತರಾಷ್ಟ್ರೀಯ ಮಾನದಂಡವಿದೆ. ಇದೇ ರೀತಿಯಲ್ಲಿ ನೀಡಬೇಕೆಂಬುದು ಆಗ್ರಹವಿದೆ. ಪರಿಹಾರದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು ಸಂತ್ರಸ್ತರು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ