Bangalore; ಸ್ನೇಹಿತರಿಂದಲೇ ಯುವತಿಗೆ ಲೈಂಗಿಕ ಕಿರುಕುಳ- ವೈರಲ್ ವಿಡಿಯೋ ಬೆಂಬತ್ತಿ ಹೋದಾಗ ಪ್ರಕರಣ ಬೆಳಕಿಗೆ
Thursday, May 27, 2021
ಬೆಂಗಳೂರು: ಯುವತಿಗೆ ಆಕೆಯ ಸ್ನೇಹಿತರೇ ಲೈಂಗಿಕ ಕಿರುಕುಳ ನೀಡಿ ಅದನ್ನು ವಿಡಿಯೋ ಮಾಡಿ ವೈರಲ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾದೇಶ ಮೂಲದ ಯುವತಿ ಬೆಂಗಳೂರಿನಲ್ಲಿ ನೆಲೆಸಿದ್ದು ಈಕೆಯ ಮೇಲೆ ಸ್ನೇಹಿತರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಘಟನೆ ಬೆಳಕಿಗೆ ಬಂದ ತಕ್ಷಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಮತ್ತು ಇನ್ನೋರ್ವನನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ಸಂತ್ರಸ್ತೆ ಯುವತಿ ಮತ್ತು ಬಂಧಿತ ಕೆಲ ಆರೋಪಿಗಳು ಬಾಂಗ್ಲಾದೇಶ ಮೂಲದವರಾಗಿದ್ದಾರೆ. ಇವರು ಬೆಂಗಳೂರಿನ ರಾಮಮೂರ್ತಿ ನಗರದ ಎನ್ಆರ್ಐ ಕಾಲೋನಿಯಲ್ಲಿ ವಾಸವಾಗಿದ್ದರು. ಬಂಧಿತ ಆರೋಪಿಗಳು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು . ಯುವತಿಯ ಮೇಲಿನ ದ್ವೇಷದಿಂದ ಆಕೆಗೆ ಯುವಕರು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಅದನ್ನು ವಿಡಿಯೋ ಮಾಡಿಟ್ಟುಕೊಂಡಿದ್ದರು. ಈ ವಿಡಿಯೋ ಬಾಂಗ್ಲಾದೇಶ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ವೈರಲ್ ಆಗಿತ್ತು. ಅಸ್ಸಾಂ ಪೊಲೀಸರು ವಿಡಿಯೋ ಕುರಿತು ತನಿಖೆ ನಡೆಸಿದಾಗ ಇದರಲ್ಲಿ ಬಾಂಗ್ಲಾದೇಶದ ಪ್ರಜೆಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಇದನ್ನು ಅಸ್ಸಾಂ ಪೊಲೀಸರು ಬಾಂಗ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಂಗ್ಲಾ ಪೊಲೀಸರು ತನಿಖೆ ನಡೆಸಿ ಸಂತ್ರಸ್ತೆ ಕುಟುಂಬದ ಸದಸ್ಯರನ್ನ ಪತ್ತೆ ಮಾಡಿದ್ದರು. ಆ ಬಳಿಕ ಬಾಂಗ್ಲಾ ಪೊಲೀಸರು ಆರೋಪಿಗಳ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.