
ಚಾಮರಾಜನಗರದಲ್ಲಿ ನಡೆದದ್ದೇನು? - 24 ಕೊರೊನಾ ಸೋಂಕಿತರ ಸಾವನ್ನು ಕೊಲೆ ಎಂದ ರಾಹುಲ್ ಗಾಂಧಿ
Monday, May 3, 2021
ಚಾಮರಾಜನಗರದಲ್ಲಿ ಆಕ್ಷಿಜನ್ ಕೊರತೆಯಿಂದ 13 ಮಂದಿ ಸೇರಿದಂತೆ 24 ಗಂಟೆಗಳ ಅವಧಿಯಲ್ಲಿ 24 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿರುವ ವಿಚಾರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಆಕ್ಷಿಜನ್ ಸಿಗದೆ ನಮ್ಮ ಸಂಬಂಧಿಕರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಹೊರಗಡೆ ಮೃತರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಸಮರ್ಪಕವಾಗಿ ಆಕ್ಸಿಜನ್ ಪೂರೈಕೆಯಾಗದೆ ಐಸಿಯುನಲ್ಲಿರುವ 50ಕ್ಕೂ ಹೆಚ್ಚು ಸೋಂಕಿತರು ನರಳಾಡುತ್ತಿದ್ದು ಈ ಪೈಕಿ ಕೆಲವರು ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಾರೆ. ಕೊರೊನಾ ಸೋಂಕಿತರೊಬ್ಬರು ಆಕ್ಸಿಜನ್ ಕೊರತೆ ಉಂಟಾಗಿ ಮೃತಪಟ್ಟಿದ್ದು, ರಾತ್ರಿ ಆಕ್ಸಿಜನ್ ಕೊರತೆಯಿದೆ ಎಂದು ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಹೇಳಿದ್ದರು. ಅವರು ಇಂದು ಮುಂಜಾನೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಆಕ್ರೋಶ
ಚಾಮರಾಜನಗರದಲ್ಲಿ ನಡೆದ ಘಟನೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು ಇದು ಸಾವೋ ಕೊಲೆಯೊ ಎಂದು ಪ್ರಶ್ನಿಸಿದ್ದಾರೆ. ಆಡಳಿತವು ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಬಲಿಯಾಗಬೇಕು ಎಂದು ಖಾರವಾಗಿ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ವಿಚಾರಣಾಧಿಕಾರಿಯಾಗಿ ಶಿವಯೋಗಿ ಕಳಸದ್
ಘಟನೆ ಬಗ್ಗೆ ವಿಚಾರಣೆ ನಡೆಸಿ ವರದಿ
ನೀಡಲು KSRTC ಎಂಡಿ ಶಿವಯೋಗಿ ಕಳಸದ್ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸುರ್ಜೆವಾಲ ಆಕ್ರೋಶ
ಘಟನೆ ಬಗ್ಗೆ ಮಾತನಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಇದು ಯಡಿಯೂರಪ್ಪ ಸರ್ಕಾರದ ಯೋಜಿತ ನಿರ್ಲಕ್ಷ್ಯದಿಂದಾಗಿ ನಡೆದಿರುವ ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಮೈಸೂರಿನಿಂದ ಆಕ್ಷಿಜನ್ ಪೂರೈಕೆಯಾಗದೆ ಘಟನೆ- ಸಂಸದ ಶ್ರೀನಿವಾಸ ಪ್ರಸಾದ್
ಪ್ರಾಥಮಿಕವಾಗಿ ಮೈಸೂರಿನಿಂದ ಆಕ್ಸಿಜನ್ ಪೂರೈಕೆ ಆಗದೆ ಈ ಘಟನೆ ನಡೆದಿದೆ.ಈ ಬಗ್ಗೆ ಮೈಸೂರು ಅಧಿಕಾರಿಗಳ ಜೊತೆ ಆಕ್ಸಿಜನ್ ಪೂರೈಕೆಯ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿಗಳು ಮಾತನಾಡಿದ್ದಾರೆ. ಮೃತಪಟ್ಟ ಬಡ ಕುಟುಂಬಗಳಿಗೆ ಪರಿಹಾರವನ್ನು ನೀಡಬೇಕೆಂದು ಮುಖ್ಯಮಂತ್ರಿ ಅವರಿಗೆ ಸಂಸದ ಶ್ರೀನಿವಾಸ ಪ್ರಸಾದ್ ಆಗ್ರಹಿಸಿದ್ದಾರೆ.
ಸಚಿವ ಸುಧಾಕರ್ ಮತ್ತು ಸುರೇಶ್ ಕುಮಾರ್ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಭಾಯಿಸಲು ಸಿಎಂ ಸೂಚನೆ
ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕೃತ ನಿವಾಸ ಕಾವೇರಿಗೆ ಆರೋಗ್ಯ ಸಚಿವ ಸುಧಾಕರ್ ಅವರನ್ನು ಕರೆಸಿಕೊಂಡು ಮೊದಲು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಿ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಅವರಿಗೂ ಜಿಲ್ಲೆಗೆ ತೆರಳುವಂತೆ ಸಿಎಂ ಸೂಚಿಸಿದ್ದಾರೆ.