
Mangalore-ಗೆಳೆಯನನ್ನೆ ಅಪಹರಿಸಿ ಚಿನ್ನ ದರೋಡೆ- ಅಪಹರಣಕ್ಕೊಳಗಾದವನ ಹತ್ಯೆಗೆ ಚಿನ್ನದ ಮಾಲೀಕ ಸುಫಾರಿ- 11 ಮಂದಿಯ ಬಂಧನ (Video)
Friday, May 28, 2021
ಮಂಗಳೂರು: ಚಿನ್ನ ದರೋಡೆಗೆ ಸ್ನೇಹಿತನನ್ನೇ ಅಪಹರಿಸಿರುವ ಪ್ರಕರಣದೊಂದಿಗೆ ಚಿನ್ನ ಪತ್ತೆ ಹಾಗೂ ಕೊಲೆ ಮಾಡಲು ಸುಪಾರಿ ಪಡೆದುಕೊಂಡ ಪ್ರಕರಣವನ್ನು ಭೇದಿಸಿರುವ ಸಿಸಿಬಿ ಹಾಗೂ ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 11 ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರಿನ ತೋಕೂರು ಜೋಕಟ್ಟೆ ನಿವಾಸಿ ಅಬ್ದುಲ್ ಸಲಾಂ ಅಲಿಯಾಸ್ ಪಟೌಡಿ ಸಲಾಂ(34), ಮೊಹಮ್ಮದ್ ಶಾರೂಕ್(26), ಬೆಂಗಳೂರಿನ ಸೈಯದ್ ಹೈದರಾಲಿ(29) ಅಸೀಫ್ ಆಲಿ(28), ಮುಂಬೈನ ಅಬ್ದುಲ್ಲಾ ಶೇಖ್(22), ಶಾಬಾಸ್ ಹುಸೈನ್(49), ಮುಶಾಹಿದ್ ಅನ್ಸಾರಿ(38), ಶೇಖ್ ಸಾಜಿದ್ ಹುಸೈನ್(49), ಮುಸ್ತಾಕ್ ಖುರೇಷಿ(42) ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ: ಮುಂಬೈನ ರೆಹಮಾನ್ ಸೇಖ್ ಎಂಬಾತ ಬೆಂಗಳೂರಿನ ತನ್ನ ಸಂಬಂಧಿ ಹೈದರಾಲಿಗೆ ನೀಡುವಂತೆ 440 ಗ್ರಾಂ ಚಿನ್ನವನ್ನು ಮೂಡುಬಿದಿರೆಯ ವಕಾರ್ ಯೂನುಸ್ ಎಂಬಾತನಿಗೆ ಪಾರ್ಸೆಲ್ ಕಳುಹಿಸಿದ್ದ. ವಕಾರ್ ಯೂನುಸ್ ಬಳಿಯಿರುವ ಚಿನ್ನವನ್ನು ಡಕಾಯಿತಿ ಮಾಡುವ ಉದ್ದೇಶದಿಂದ ಆತನ ಸ್ನೇಹಿತರಾದ ಬೆಳುವಾಯಿಯ ಮೊಹಮ್ಮದ್ ಮಹಝ್ ಹಾಗೂ ಉಪ್ಪಳದ ಅದಿಲ್ ಎಂಬವರು ತಮ್ಮ ಸ್ನೇಹಿತರೊಂದಿಗೆ ಮೂಡುಬಿದಿರೆಯಿಂದ ಕಾರಿನಲ್ಲಿ ಅಪಹರಣ ಮಾಡಿದ್ದಾರೆ. ಅಲ್ಲಿಂದ ಆತನನ್ನು ಕೇರಳದ ಉಪ್ಪಳಕ್ಕೆ ಕರೆದೊಯ್ದು ಆತನ ಬಳಿಯಿದ್ದ 440 ಗ್ರಾಂ ಚಿನ್ನವನ್ನು ದರೋಡೆ ಮಾಡಿದ್ದಾರೆ.
ಈ ನಡುವೆ ಹೈದರಾಲಿಗೆ ಚಿನ್ನ ತಲುಪದೇ ಇದ್ದುದರಿಂದ ವಕಾರ್ ಯೂನಸ್ ನಲ್ಲಿ ರೆಹಮಾನ್ ಶೇಖ್ ವಿಚಾರಿಸಿದಾಗ ಚಿನ್ನ ದರೋಡೆಯಾದ ವಿಚಾರ ತಿಳಿಸಿದ್ದಾನೆ. ಇದರಿಂದ ಕ್ರುದ್ಧನಾದ ರೆಹಮಾನ್ ಶೇಖ್ ಚಿನ್ನ ಪತ್ತೆ ಹಾಗೂ ಚಿನ್ನ ದೊರೆಯದಿದ್ದಲ್ಲಿ ಕೊಲೆ ಮಾಡಲು ಪಣಂಬೂರಿನ ರೌಡಿಶೀಟರ್ ಪಟ್ಟೋಡಿ ಸಲಾಂಗೆ ಐದು ಲಕ್ಷಕ್ಕೆ ಸುಪಾರಿ ನೀಡಿದ್ದ. ಪಟ್ಟೋಡಿ ಸಲಾಂ ಚಿನ್ನ ನೀಡುವಂತೆ ವಕಾರ್ ಯೂನುಸ್ ಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಮೂಡುಬಿದಿರೆ ಠಾಣೆಗೆ ವಕಾರ್ ಯೂನುಸ್ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಕಾರ್ ಯೂನಸ್ ನನ್ನು ಅಪಹರಣ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, 13.86 ಲಕ್ಷ ರೂ. ಮೌಲ್ಯದ 300 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಉಳಿದ ಚಿನ್ನ ಇನ್ನಷ್ಟೇ ದೊರೆಯಬೇಕಾಗಿದೆ.
ಈ ನಡುವೆ ಪಟ್ಟೋಡಿ ಸಲಾಂ ಚಿನ್ನ ವಸೂಲಿ ಮಾಡಲು ತಂಡ ಕಟ್ಟಿಕೊಂಡು ಎರಡು ಕಾರಿನಲ್ಲಿ ಮಾರಕಾಯುಧಗಳೊಂದಿಗೆ ಬೆಳುವಾಯಿಯ ಮೊಹಮ್ಮದ್ ಮಹಝ್ ಮನೆಯ ಬಳಿ ಹೊಂಚು ಹಾಕುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸರು ಸಿಸಿಬಿ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ 9 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸ್ವಿಫ್ಟ್ ಕಾರು, ಇನ್ನೋವಾ ಕಾರು, 5 ತಲವಾರು, 10 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹೇಳಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.