
ಮಂಗಳೂರಿನಲ್ಲೊಂದು ಹೇಯ ಕೃತ್ಯ: ಅಪ್ರಾಪ್ತೆಯ ಅತ್ಯಾಚಾರ, ರೇಪ್ ಪೊಟೋ ಇಟ್ಕೊಂಡು ಬ್ಲ್ಯಾಕ್ ಮೇಲ್- ಅಬೂಬಕ್ಕರ್ ಸಿದ್ದಿಕ್ ಬಂಧನ
Wednesday, February 10, 2021
ಮಂಗಳೂರು: ಸುಶಿಕ್ಷಿತರ ಜಿಲ್ಲೆ ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಹೇಯ ಕೃತ್ಯಗಳು ಪದೇ ಪದೇ ವರದಿಯಾಗುತ್ತಿದೆ. ಇದೀಗ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಲ್ಲದೆ ಅತ್ಯಾಚಾರದ ಪೊಟೋ ತೆಗೆದು ಆ ಬಾಲಕಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ವರದಿಯಾಗಿದೆ. ಆರೋಪಿ ಅಬೂಬಕ್ಕರ್ ಸಿದ್ದಿಕ್ ನನ್ನು ಬಂಧಿಸಲಾಗಿದೆ.
ಘಟನೆ ವಿವರ
ಸಂತ್ರಸ್ಥೆ ಅಪ್ರಾಪ್ತ ಪ್ರಾಯದ ಬಾಲಕಿಗೆ 2020ನೇ ಜನವರಿ ತಿಂಗಳಲ್ಲಿ ತಮ್ಮ ಮನೆಯ ನೆರೆಕರೆಯ ಆರೋಪಿಗಳಾದ ಅಬೂಬಕ್ಕರ್ ಸಿದ್ದಿಕ್ ಮತ್ತು ಆತನ ಸ್ನೇಹಿತ ಚಪ್ಪಿ ಎಂಬವರುಗಳು ಪೋನ್ ಮುಖಾಂತರ ಪರಿಚಯವಾಗಿ ಸಲುಗೆಯಿಂದ ವರ್ತಿಸುತ್ತಿದ್ದರು. ಜನವರಿ 25 ರಂದು ರಾತ್ರಿ ಆಕೆಯನ್ನು ಪುಸಲಾಯಿಸಿ ಮನೆಯ ಬಳಿ ಕರೆತಂದು ಆರೋಪಿಗಳು ಅತ್ಯಾಚಾರವೆಸಗಿ ಬಾಲಕಿಯ ಖಾಸಗಿ ಫೊಟೊಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು, ಈ ವಿಚಾರವನ್ನು ಬಹಿರಂಗಪಡಿಸಿದಲ್ಲಿ ಖಾಸಗಿ ಪೋಟೋಗಳನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿರುತ್ತಾರೆ. ಈ ಕೃತ್ಯ ನಡೆದ ನಂತರದ ದಿನಗಳಲ್ಲೂ ಆರೋಪಿಗಳು ಬಾಲಕಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಪಡಿಸುತ್ತಿದ್ದರು.
ಈ ಬಗ್ಗೆ ಫೆಬ್ರವರಿ 9 ರಂದು ಬಾಲಕಿಯ ಸಂಬಂಧಿಕರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ: 376(2),376DA,506 IPC & U/s-4(2),5(G),6,14, POCSO ACT 2012 ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳ ಪೈಕಿ ಅಬೂಬಕ್ಕರ್ ಸಿದ್ದೀಕ್ ಎಂಬಾತನ ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಚಪ್ಪಿ ಎಂಬಾತನ ಬಂಧನಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕರ ಸೂಚನೆಯಂತೆ ವಿಟ್ಲ ಪೊಲೀಸ್ ಉಪನಿರೀಕ್ಷಕರ ತನಿಖಾ ತಂಡ ತೆರಳಿದ್ದಾಗ ಸದರಿ ಸಂತ್ರಸ್ಥ ಬಾಲಕಿಯ ಅಣ್ಣನು ಆರೋಪಿ ಚಪ್ಪಿ ಎಂಬಾತನಿಗೆ ಪೊಲೀಸರು ಆತನ ಬಂಧನಕ್ಕೆ ಬರುತ್ತಿರುವ ಮಾಹಿತಿ ನೀಡಿ ಆರೋಪಿ ತಲೆಮರೆಸಿಕೊಳ್ಳಲು ಸಹಕರಿಸಿದ್ದಾನೆ. ಈ ಕಾರಣದಿಂದ ಸಂತ್ರಸ್ಥೆಯ ಅಣ್ಣನನ್ನೂ ಕಲಂ 225 ಐಪಿಸಿ ಯ ಅಡಿಯಲ್ಲಿ ಬಂಧಿಸಿದ್ದು ತನಿಖೆ ಪ್ರಗತಿಯಲ್ಲಿದೆ.