ಉಗ್ರ ಗೋಡೆ ಬರಹ ಆರೋಪಿಗಳ ಬಂಧನ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಹೇಳಿದ್ದು ಹೀಗೆ... (video)
Sunday, December 6, 2020
ಮಂಗಳೂರು ಕದ್ರಿ ಅಪಾರ್ಟ್‌ಮೆಂಟ್‌ನ ಗೋಡೆಯಲ್ಲಿ ಹಾಗೂ ನಗರದ ನ್ಯಾಯಾಲಯದ ಹಳೆ ಪೊಲೀಸ್ ಔಟ್ ಪೋಸ್ಟ್‌ನ ಗೋಡೆಯ ಮೇಲೆ ಪ್ರಚೋದನಕಾರಿ ಗೋಡೆ ಬರಹಕ್ಕೆ ಸಂಬಂಧಿಸಿ ಎರಡು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಅವರು ತೀರ್ಥಹಳ್ಳಿಯ ಮೊಹಮ್ಮದ್ ಶಾರಿಕ್ ಮತ್ತು ಮಜ್ ಮುನೀರ್ ಅಹ್ಮದ್ ಎಂಬಿಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬಿ ಕಾಂ ಮುಗಿಸಿರುವ ಆರೋಪಿ ಮೊಹಮ್ಮದ್ ಶಾರಿಕ್ (22) ತೀರ್ಥಹಳ್ಳಿಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರೆ ಮತ್ತೊಬ್ಬ ಆರೋಪಿ ಮಜ್ ಮುನೀರ್ ಅಹಮದ್ (21) ಮಂಗಳೂರು ಕಾಲೇಜಿನಲ್ಲಿ ಬಿ ಟೆಕ್ ವ್ಯಾಸಂಗ ಮಾಡುತ್ತಿದ್ದಾನೆ. ಆರ್ಯ ಸಮಾಜ ರಸ್ತೆ ಬಳಿಯ ಬಾಡಿಗೆ ಮನೆಯಲ್ಲಿ ಈತ ತಂಗಿದ್ದು ನಗರದಲ್ಲಿ 3 ತಿಂಗಳಿನಿಂದ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಗೋಡೆ ಬರಹ ಬರೆದು ಪ್ರಚಾರವನ್ನು ಪಡೆಯುವುದೇ ಈ ಆರೋಪಿಗಳ ಉದ್ದೇಶವಾಗಿತ್ತು ಎಂದು ಅವರು ತಿಳಿಸಿದರು.ಅವರು ಕದ್ರಿ ಗೋಡೆಗಳ ಮೇಲೆ ಬರೆಯುವ 3 ವಾರಗಳ ಮೊದಲು ಅವರು ನ್ಯಾಯಾಲಯದ ಆವರಣದಲ್ಲಿ ಇರುವ ಗೋಡೆಯಲ್ಲಿ ಬರೆದಿದ್ದಾರೆ. ಕೋರ್ಟ್ ರಸ್ತೆಯಲ್ಲಿ ಗೋಡೆ ಬರಹವನ್ನು ಅರೇಬಿಕ್ ಭಾಷೆಯಲ್ಲಿ ಇಂಗ್ಲಿಷ್ ಲಿಪಿಯಲ್ಲಿ ಬರೆಯಲಾಗಿದ್ದ ಕಾರಣ ಜನರಿಗೆ ಭಾಷೆ ಅರ್ಥವಾಗದೆ ಈ ಗೋಡೆಬರಹವನ್ನು ಯಾರು ಗಮನಿಸಿರಲಿಲ್ಲ. ಇದರಲ್ಲಿ ಪ್ರಚಾರ ಸಿಗಲಿಲ್ಲ ಎಂದು ಈ ಆರೋಪಿಗಳು ಕದ್ರಿ ಆಪಾರ್ಟ್‌ಮೆಂಟ್‌ನ ಗೋಡೆಯಲ್ಲಿ ಬರೆದಿದ್ದಾರೆ ಎಂದು ಅವರು ತಿಳಿಸಿದರು.