-->

ಅನ್ವಯ್ ಆತ್ಮಹತ್ಯೆ ಬಗ್ಗೆ ಸರ್ಕಾರ ಕಣ್ಮುಚ್ಚಿ ಕೂತಿದ್ದರೆ ಮಾಧ್ಯಮ ಕ್ಷೇತ್ರ ಸುರಕ್ಷಿತವೇ?: ದಿನೇಶ್ ಅಮೀನ್ ಮಟ್ಟು

ಅನ್ವಯ್ ಆತ್ಮಹತ್ಯೆ ಬಗ್ಗೆ ಸರ್ಕಾರ ಕಣ್ಮುಚ್ಚಿ ಕೂತಿದ್ದರೆ ಮಾಧ್ಯಮ ಕ್ಷೇತ್ರ ಸುರಕ್ಷಿತವೇ?: ದಿನೇಶ್ ಅಮೀನ್ ಮಟ್ಟು

ಅನ್ವಯ್ ಆತ್ಮಹತ್ಯೆ ಬಗ್ಗೆ ಸರ್ಕಾರ ಕಣ್ಮುಚ್ಚಿ ಕೂತಿದ್ದರೆ ಮಾಧ್ಯಮ ಕ್ಷೇತ್ರ ಸುರಕ್ಷಿತವೇ?: 
ದಿನೇಶ್ ಅಮೀನ್ ಮಟ್ಟು

ಅರ್ನಾಬ್ನ ಬೆನ್ನಿಗಿರುವ ಪ್ರಭುತ್ವ ಮತ್ತು ಅರ್ನಬ್ನನ್ನು ಬೆನ್ನುಹತ್ತಿರುವ ಪ್ರಭುತ್ವ - ಎರಡೂ ಒಂದೇ  ಅಲ್ಲ ಎನ್ನುವುದೇ  ಈ ಚರ್ಚೆಯ ಮುಖ್ಯ ವಸ್ತು. ಭಾರತ ಮತ್ತು ಮಹಾರಾಷ್ಟ್ರ, ಬಿಜೆಪಿ- ಶಿವಸೇನೆ  ಹೇಗೆ ಗಾತ್ರ.ಪಾತ್ರ, ಶಕ್ತಿ ಮತ್ತು ಪ್ರಭಾವದಲ್ಲಿ  ಒಂದೇ ಅಲ್ಲವೋ ಹಾಗೆಯೇ ಈ ಎರಡು ಪ್ರಭುತ್ವಗಳು ಒಂದೇ ಅಲ್ಲ. ಹಾಗೆಯೇ ಅನ್ವಯ್ ನಾಯಕ್ ಅವರ ಪತ್ನಿ ಮತ್ತು ಮಗಳು ಮತ್ತು ಅರ್ನಬ್ ಗೋಸ್ವಾಮಿ ಒಂದೇ ಅಲ್ಲ.
ಕಳೆದ ಕೆಲವೇ ತಿಂಗಳುಗಳ ಅವಧಿಯಲ್ಲಿ ವಿವಿಧ ರಾಜ್ಯಗಳಲ್ಲಿ ಪೊಲೀಸರು ಬಂಧಿಸಿರುವ ಪತ್ರಕರ್ತರಾದ ಸಿದ್ದಿಕಿ ಕಪ್ಪಣ್, ಕಿಶೋರ್ ಚಂದ್ ವಾಂಗ್ ಕೇಮ್, ಪ್ರಶಾಂತ್ ಕನೋಜಿಯಾ, ರಾಜೀಬ್ ಸರ್ಮಾ, ಧಾವಲ್ ಪಟೇಲ್, ನರೇಶ್ ಕೋಹಲ್, ರಾಹುಲ್ ಕುಲಕರ್ಣಿ, ರಾಜೀವ್ ಶರ್ಮಾ, ತ್ಸೇವಾಂಗ್ ರಿಗ್ ಜಿನ್ ಮೊದಲಾದವರ ಬಗ್ಗೆ ಮಾತನಾಡುವುದು ಬಿಡಿ, ಅವರ ಹೆಸರನ್ನೇ ನಮ್ಮಲ್ಲಿ ಬಹಳಷ್ಟು ಮಂದಿ ಕೇಳಿಲ್ಲ. ಇವರಲ್ಲಿ ಹೆಚ್ಚಿನವರು ಈಗಲೂ ಜೈಲಲ್ಲಿದ್ದಾರೆ.  ನಮ್ಮಲ್ಲಿಯೇ ಪೊಲೀಸರು ಬಂಧಿಸಿದ ಪವರ್ ಟಿವಿ ಸಂಪಾದಕರ ಕತೆ ಏನೆಂದು ಯಾರಿಗೂ ಗೊತ್ತಿಲ್ಲ. ಸೆಲೆಕ್ಟಿವ್ ಆಗಿರುವ ಮೌನ ಮತ್ತು ಮಾತು, ಸ್ವಸ್ಥ ಸಮಾಜದ ಎರಡು ದೊಡ್ಡ ಶತ್ರುಗಳು.
ಅರ್ನಬ್ ಗೋಸ್ವಾಮಿ ಬಗ್ಗೆ ಮಾತ್ರ ನಾವೆಲ್ಲ ಹಠಕ್ಕೆ ಬಿದ್ದವರಂತೆ ಚರ್ಚೆ ಮಾಡುತ್ತಿರುವುದು ಯಾಕೆ? ಆತ ಒಬ್ಬ ಪತ್ರಕರ್ತನೆಂದೇ? ಇಲ್ಲವೇ ಬೇರೆ ಏನಾದರೂ ಕಾರಣ ಇರಬಹುದೇ? ಆ ಒಂಬತ್ತು ಪತ್ರಕರ್ತರನ್ನು ಬಂಧಿಸಿರುವ ಪ್ರಭುತ್ವ ಮತ್ತು ಅರ್ನಬ್ ನನ್ನು ಬಂಧಿಸಿರುವ ಪ್ರಭುತ್ವ ಒಂದೇ ಎಂದಾದರೆ, ಅರ್ನಬ್ ಬಂಧನ  ದೇಶಾದ್ಯಂತ ಮಾಡಿರುವ  ಸಂಚಲನವನ್ನು ಆ ಬಡಪಾಯಿ ಪತ್ರಕರ್ತರ ಬಂಧನ ಯಾಕೆ ಮಾಡಲಿಲ್ಲ? 
ನಮ್ಮನ್ನೆಲ್ಲ ಪರ-ವಿರೋಧ ಚರ್ಚೆಗೆ ತಳ್ಳಿರುವ ಅರ್ನಬ್  ತನ್ನ ಅಟ್ಟಹಾಸಕ್ಕೆ ಶಕ್ತಿ ಸಂಚಯಿಸಿಕೊಂಡಿರುವುದು ಎಲ್ಲಿಂದ? ತನ್ನ ವೃತ್ತಿಯ ಸಾಧನೆಯಿಂದಲೇ? ಇಲ್ಲವೇ ತನ್ನ ಬೆನ್ನಿಗಿರುವ ಪ್ರಭುತ್ವದ ಶಕ್ತಿಯಿಂದಲೇ?  ಅರ್ನಬ್ ಗೋಸ್ವಾಮಿ ಬಂಧನವನ್ನು  ಒಬ್ಬ ಪತ್ರಕರ್ತನ ಮೇಲೆ ಪ್ರಭುತ್ವ ನಡೆಸಿರುವ ದಾಳಿ ಎಂದು ಸರಳೀಕರಿಸಿ ನೋಡಿದರೆ ಬಲಗೊಳ್ಳುವುದು ಮಾಧ್ಯಮ ಕ್ಷೇತ್ರವೇ? ಹಲವು ಪತ್ರಕರ್ತರನ್ನು ಬೇಟೆಯಾಡುತ್ತಿರುವ ಪ್ರಭುತ್ವವವೇ?  ನಾವು ಅರ್ನಬ್ ನನ್ನು ಬೆಂಬಲಿಸಿದರೆ ಬಲಗೊಳ್ಳುತ್ತಾ ಹೋಗುವುದು ದೇಶಾದ್ಯಂತ ವೃತ್ತಿಪರ, ಅಸಹಾಯಕ ಪತ್ರಕರ್ತರನ್ನು ಬೇಟೆಯಾಡುತ್ತಿರುವ ಪ್ರಭುತ್ವವನ್ನು ಎನ್ನುವುದನ್ನು ನಾವು ಮರೆತರೆ ಹೇಗೆ? ಅರ್ನಬ್ ರೋಗ ಅಲ್ಲ, ಆತ ರೋಗದ ಲಕ್ಷಣ ಎನ್ನವುದು ನಿಜ. ಆದರೆ ರೋಗದ ಲಕ್ಷಣವನ್ನು ಮರೆತು ರೋಗಕ್ಕೆ ಮದ್ದು ನೀಡಲು ಸಾಧ್ಯವೇ ಎನ್ನವುದು ಪ್ರಶ್ನೆ.
 ಅರ್ನಬ್ ಪ್ರಭುತ್ವದ ಕೈಗೊಂಬೆ ಮಾತ್ರ, ಆತ ವ್ಯವಸ್ಥೆಯ ಭಾಗ ಅಲ್ಲ ಎಂದು ವ್ಯಾಖ್ಯಾನಿಸುವುದು ಮಾಧ್ಯಮ ಕ್ಷೇತ್ರಕ್ಕೆ ನಾವು ಮಾಡುವ ದ್ರೋಹವಾಗುತ್ತದೆ.  ಈ ರೀತಿ ನಾವು ಅರ್ನಬ್ ಮಾದರಿ ಮಾಧ್ಯಮವನ್ನು ಕುರುಡುಪಟ್ಟಿ ಕಟ್ಟಿಕೊಂಡು ಸಮರ್ಥಿಸುವುದರಿಂದ ಈಗಾಗಲೇ ದೇಶಾದ್ಯಂತ  ಹುಟ್ಟಿಕೊಂಡಿರುವ ಮರಿ ಅರ್ನಬ್ ಗಳ ಸಂತತಿ ಹೆಚ್ಚಿಸಿದ ಅಪರಾಧಿಗಳು ನಾವಾಗುತ್ತೇವೆ.
ಇಲ್ಲಿನ ಇನ್ನೊಂದು ಮುಖ್ಯವಾದ ಪ್ರಶ್ನೆ ಇರುವುದು, ಪತ್ರಕರ್ತರು ಕಾನೂನಿಂದ ಅತೀತರೇ ಎನ್ನುವುದು. ಒಬ್ಬ ಪತ್ರಕರ್ತ ಕಾನೂನು ಪ್ರಕಾರ ಅಪರಾಧವಾಗಿರುವುದನ್ನು ಮಾಡಿ ಸಿಕ್ಕಿಹಾಕಿಕೊಂಡು ಆತ್ಮರಕ್ಷಣೆಗಾಗಿ ತನ್ನ ವೃತ್ತಿಯ ಹೆಸರಿನ ಗುರಾಣಿ ಬಳಸಿಕೊಂಡಾಗ ನಾವು ಕಣ್ಣು ಮುಚ್ಚಿಕೊಂಡು ಆತನ ಸಮರ್ಥನೆಗೆ ಇಳಿದರೆ ಹೇಗೆ? ಇಂತಹ ಯಾವ ಗುರಾಣಿಯೂ ಇಲ್ಲದ ಸಾಮಾನ್ಯ ಜನತೆಯ ಪಾಡೇನು? ಇಂತಹ ಗುರಾಣಿಗಳನ್ನು ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಮರ್ಥಿಸುತ್ತಿರುವ ಕಾರಣದಿಂದಾಗಿಯೇ ಇಂದಿನ ಮಾಧ್ಯಮವನ್ನು ಭ್ರಷ್ಟರು, ದುಷ್ಟರು, ಕ್ರಿಮಿನಲ್ ಗಳು ಆಳುತ್ತಿರುವುದು ಮತ್ತು ಕಸಬುದಾರ ಪತ್ರಕರ್ತರು ಮನೆಯಲ್ಲಿ ಕೂತಿರುವುದಲ್ಲವೇ?
ಸಂವಿಧಾನ ರಚನೆಯ ಸಭೆಯಲ್ಲಿ ಪತ್ರಕರ್ತರಿಗೆ ಕೂಡಾ ಶಾಸಕ/ಸಂಸದರಿಗೆ ಇರುವ immunity ಮತ್ತು Privilege ಇರಬೇಕೆಂಬ ಚರ್ಚೆ ನಡೆದಿತ್ತು. ಆದರೆ ಸ್ವತ: ಪತ್ರಕರ್ತರಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್  ಆ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ನಿರಾಕರಿಸಿದ್ದರು ಎನ್ನುವುದನ್ನು ನಾವು ಮರೆಯಬಾರದು.
 ಹಿಂದಿನ ಯಾವುದೋ ಪ್ರಭುತ್ವ ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ನೆರವಿಗೆ ನಿಲ್ಲದೆ, ಆರೋಪಿ ಪರ ನಿಂತು ಪ್ರಕರಣವನ್ನು ಮುಚ್ಚಿಹಾಕಿದರೆ, ಹೊಸ ಪ್ರಭುತ್ವ ‘ ನಾವೇನು ಮಾಡಲಿಕ್ಕೆ ಆಗುತ್ತೆ? ಹಿಂದಿನವರೇ ಮಾಡಿದ್ದು’’ ಎಂದು ಕಣ್ಣು ಮುಚ್ಚಿಕೊಳ್ಳಬೇಕೇ? ಹಾಗಿದ್ದರೆ ಬದಲಾವಣೆ ಎಂದರೆ ಏನು? 2G ಹಗರಣ, ಕಾಮನ್ ವೆಲ್ತ್ ಗೇಮ್ಸ್ ಹಗರಣಗಳನ್ನೇ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಎದುರಾಳಿ ಪಕ್ಷವನ್ನು ಮಣಿಸಿ ಅಧಿಕಾರಕ್ಕೆ ಬಂದ ಪಕ್ಷ ಅದರ ನಂತರ ಎಂದಾದರೂ ಆ ಹಗರಣಗಳ ಬಗ್ಗೆ ಮಾತನಾಡಿದೆಯೇ? 
ಈ ಬಗ್ಗೆ  ಹಗಲು ರಾತ್ರಿ ಬೊಬ್ಬಿರಿದು ಅಬ್ಬರಿಸುತ್ತಿದ್ದವನು ಇದೇ ಅರ್ನಬ್ ಗೋಸ್ವಾಮಿ ಅಲ್ಲವೇ?  ಈತ ಎಂದಾದರೂ ಅಧಿಕಾರಕ್ಕೆ ಬಂದವರನ್ನು ಹಗರಣಗಳ ತನಿಖೆಗಾಗಿ  ಪ್ರಶ್ನಿಸಿದ್ದಾನೆಯೇ? ಅನ್ವಯ್ ನಾಯಕ್ ಆತ್ಮಹತ್ಯೆಯ ಪ್ರಕರಣದ ಬಗ್ಗೆಯೂ ಹಾಗೆಯೇ ಮಹಾರಾಷ್ಟ್ರ ಸರ್ಕಾರ ಕಣ್ಣು ಮುಚ್ಚಿ ಕೂತಿದ್ದರೆ ಈ ದೇಶದ ಮಾಧ್ಯಮ ಕ್ಷೇತ್ರ ಯಾವುದೇ ದಾಳಿಗೊಳಗಾಗದೆ ಸುರಕ್ಷಿತವಾಗಿ ಉಳಿಯುತ್ತಿತ್ತೋ ಏನೋ?

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99