ದೇಶ ವಿಭಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ವಕೀಲರು: ಆ ಕಾಲದ ಸ್ಥಿತಿ ಗತಿ ಬಗ್ಗೆ ಸಮಗ್ರ ಚಿತ್ರಣ
Sunday, November 1, 2020
ದೇಶ ವಿಭಜನೆಯಲ್ಲಿ ವಕೀಲರ ಪಾತ್ರ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರು ಮಹತ್ವದ ಪಾತ್ರ ವಹಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಆದರೆ ದೇಶದ ವಿಭಜನೆಯಲ್ಲಿ ಕೂಡಾ ವಕೀಲರು ಪ್ರಮುಖ ಪಾತ್ರ ವಹಿಸಿರುವುದು ಬಹಳಷ್ಟು ಜನರಿಗೆ ತಿಳಿಯದೇ ಇರುವುದು ವಿಷಾದನೀಯ.
ದೇಶ ವಿಭಜನೆಯಾಗಿ ನೂತನ ಪಾಕಿಸ್ತಾನ ರಾಷ್ಟ್ರ ನಿರ್ಮಾಣದಲ್ಲಿ ವಕೀಲರಾದ ಮಹಮ್ಮದ್ ಅಲಿ ಜಿನ್ನಾ ಅವರ ಪಾತ್ರದ ಬಗ್ಗೆ ಮಾತ್ರ ನಾವು ತಿಳಿದುಕೊಂಡಿದ್ದೇವೆ. ಆದರೆ ವಾಸ್ತವವಾಗಿ ಹಿಂದೂ ಮತ್ತು ಕ್ರೈಸ್ತ ಧರ್ಮವನ್ನು ಆಚರಿಸು ತ್ತಿದ್ದ ಇಬ್ಬರು ಮಹಾನ್ ವಕೀಲರುಗಳು ಪಾಕಿಸ್ತಾನ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿರುವುದು ಬಹುತೇಕ ಭಾರತೀಯರಿಗೆ ತಿಳಿಯದಿರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ.
ಈ ಇಬ್ಬರು ಮಹಾನ್ ಭಾರತೀಯ ವಕೀಲರು ಗಳೆಂದರೆ ನೂತನ ಪಾಕಿಸ್ತಾನ ರಾಷ್ಟ್ರದ ಪ್ರಪ್ರಥಮ ಕಾನೂನು ಸಚಿವರಾದ ದಲಿತ ಮುಖಂಡ ಜೋಗೇಂದ್ರನಾಥ ಮಂಡಲ್ ಅವರು. ಇನ್ನೊಬ್ಬರು ಪಾಕಿಸ್ತಾನ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದ ಆಂಗ್ಲೋ ಇಂಡಿಯನ್ ಕುಟುಂಬದ ರೋಮನ್ ಕ್ಯಾಥೋಲಿಕ್ ಮತಸ್ತ ಆಲ್ವಿನ್ ರಾಬರ್ಟ್ ಕಾರ್ನೇಲಿಯಸ್ ಅವರು.
ದೇಶ ವಿಭಜನೆಯ ವಿಷಯವನ್ನು ಮೊದಲು ಪ್ರಸ್ತಾಪಿಸಿದಾಗ ಆ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಖ್ಯಾತ ವಕೀಲರುಗಳಾದ ಮೋಹನದಾಸ ಕರಮಚಂದ ಗಾಂಧೀಜಿ; ಜವಾಹರಲಾಲ್ ನೆಹರೂ: ಸರ್ದಾರ್ ವಲ್ಲಭಬಾಯ್ ಪಟೇಲ್; ವಿನಾಯಕ ದಾಮೋದರ ಸಾವರ್ಕರ್ ಯಾನೆ ವೀರಸಾವರ್ಕರ್; ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಇವರುಗಳು ಪ್ರಬಲವಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
ಆದರೆ ಅಂತಿಮವಾಗಿ ಮಹಾತ್ಮಾ ಗಾಂಧೀಜಿ ಹಾಗೂ ನೆಹರೂರವರು ವಿಭಜನೆಯ ಪ್ರಸ್ತಾವನೆಗೆ ತಮ್ಮ ಸಮ್ಮತಿ ಹಾಗೂ ಸಹಮತ ಸೂಚಿಸಿದರು.
ಆದರೆ ಡಾ. ಬಿ. ಆರ್. ಅಂಬೇಡ್ಕರ್ ಮತ್ತು ವೀರ ಸಾವರ್ ಕರ್ ಮುಂತಾದವರು ತಮ್ಮ ಜೀವಿತದ ಕೊನೆಯ ದಿನದ ವರೆಗೂ ದೇಶ ವಿಭಜನೆಯನ್ನು ವಿರೋಧಿಸಿದರು.
ದೇಶ ವಿಭಜನೆ ಎಂಬ ಕೃತಕ ಹಾಗೂ ಮಾನವ ವಿರೋಧಿ ಚಿಂತನೆಯಿಂದ ಮನುಕುಲವು ಎಂದೂ ಕಂಡರಿಯದ ಲಕ್ಷಾಂತರ ನಿಷ್ಪಾಪಿ ಜನರ ಕಗ್ಗೊಲೆ ಭಾರತ ಉಪಖಂಡದಲ್ಲಿ ನಡೆದಿರುವುದು ಕರಾಳ ಇತಿಹಾಸವಾಗಿದೆ.
ಇಬ್ಬರು ವಕೀಲರು ಹಾಗೂ ಮಹಾನ್ ದಲಿತ ನಾಯಕರ ವಿಭಿನ್ನ ಚಿಂತನೆಗಳ ಪರಿಣಾಮಗಳ ಬಗ್ಗೆ ಒಂದು ಪಕ್ಷಿ ನೋಟ
ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರಾದ ಡಾ ಬಿ. ಆರ್. ಅಂಬೇಡ್ಕರ್ ಹಾಗೂ ಸ್ವತಂತ್ರ ಪಾಕಿಸ್ತಾನದ ಪ್ರಥಮ ಕಾನೂನು ಸಚಿವರಾದ ಜೋಗೇಂದ್ರನಾಥ್ ಮಂಡಲ್ ಎಂಬ ಇಬ್ಬರು ಮಹಾನ್ ದಲಿತ ನಾಯಕರ ದಲಿತೋದ್ಧಾರಕ ಚಿಂತನೆ ಹಾಗೂ ದೇಶ ವಿಭಜನೆಯ ಸಂದರ್ಭದಲ್ಲಿ ಅವರು ತಳೆದ ನಿಲುವುಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಅರಿತುಕೊಳ್ಳುವುದು ಭಾರತದ ಪ್ರಸ್ತುತ ಪರಿಸ್ಥಿತಿ ಹಾಗೂ ಸನ್ನಿವೇಶದಲ್ಲಿ ಅವಶ್ಯಕವಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಅಖಂಡ ಭಾರತ ದೇಶದ ದಲಿತ ನಾಯಕರ ಪೈಕಿ ಅಗ್ರ ಸ್ಥಾನದಲ್ಲಿದ್ದವರು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಜೋಗೇಂದ್ರನಾಥ್ ಮಂಡಲ್ ಅವರು. ಅವರಿಬ್ಬರೂ ಖ್ಯಾತ ಕಾನೂನು ಪ೦ಡಿತರಾಗಿದ್ದರು.ಭಾರತದ ದಲಿತರ ಅಭಿವೃದ್ಧಿ ಆಗಿನ ಪ್ರಮುಖ ರಾಜಕೀಯ ಪಕ್ಷಗಳಿಂದ ಯಾವತ್ತೂ ಸಾಧ್ಯವಿಲ್ಲ ಎಂಬ ನಿಲುವನ್ನು ತಳೆದಿದ್ದರು. ಅಂತೆಯೇ ತಮ್ಮದೇ ಆದ ಪಕ್ಷಗಳಿಂದ ದಲಿತರ ಅಭಿವೃದ್ಧಿ ಸಾದ್ಯ ಎಂಬ ನಿಲುವು ಅವರದಾಗಿತ್ತು. ಇವರಿಬ್ಬರನ್ನು ಒಲಿಸಿಕೊಳ್ಳುವಲ್ಲಿ ಮಹಮ್ಮದ್ ಆಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಪಾರ್ಟಿ ಬಹಳಷ್ಟು ಪ್ರಯತ್ನ ಪಟ್ಟಿತ್ತು. ಆದರೆ ಮಹಾನ್ ಚಿಂತಕರಾದ ಡಾ ಬಿ.ಆರ್. ಅಂಬೇಡ್ಕರ್ ಅವರು ಮುಸ್ಲಿಂ ಲೀಗ್ ಮತ್ತು ಕಾ೦ಗ್ರೆಸ್ ಪಕ್ಷಗಳಿಂದ ಸಮಾನ ಅಂತರ ಕಾಪಾಡಿಕೊಂಡಿದ್ದರು.
ದೇಶ ವಿಭಜನೆಯನ್ನು ಕಟುವಾಗಿ ವಿರೋಧಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶ ವಿಭಜನೆ ಆಗುವುದಿದ್ದಲ್ಲಿ ಭಾರತದ ಕಟ್ಟಕಡೆಯ ಮುಸಲ್ಮಾನ ಪಾಕಿಸ್ತಾನಕ್ಕೆ ತೆರಳಬೇಕು ಹಾಗೂ ಪಾಕಿಸ್ತಾನದಲ್ಲಿರುವ ಕಟ್ಟಕಡೆಯ ಹಿಂದೂ ಭಾರತಕ್ಕೆ ಬರಬೇಕು ಎಂಬ ಖಡಾಖಂಡಿತ ನಿಲುವು ತಳೆದಿದ್ದರು.
ಆದರೆ ಆ ಸಂದರ್ಭದ ಮತ್ತೋರ್ವ ಅಗ್ರಪಂಕ್ತಿಯ ದಲಿತ ನಾಯಕರಾದ ಬಂಗಾಲದ ವಕೀಲರಾದ ಜೋಗೇಂದ್ರನಾಥ ಮಂಡಲ್ ಅವರು ದಲಿತರ ಉದ್ಧಾರ ಪಾಕಿಸ್ತಾನ ನಿರ್ಮಾಣದಿಂದ ಮಾತ್ರ ಸಾಧ್ಯ ಎಂಬ ನಿಲುವನ್ನು ತಳೆದಿದ್ದರು. ದೇಶ ವಿಭಜನೆಯ ಸಮಯದಲ್ಲಿ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನದಲ್ಲಿ ಶೇಕಡಾ ಇಪ್ಪತ್ತೈದರಿಂದ ಮುವತ್ತರಷ್ಟು ಹಿಂದೂಗಳಿದ್ದರು. ಅವರಲ್ಲಿ ಬಹುತೇಕ ಇಪ್ಪತ್ತು ಶೇಕಡಾದಷ್ಟು ನಮಸೂದ್ರ ಪಂಗಡಕ್ಕೆ ಸೇರಿದ ದಲಿತ ಹಿಂದೂಗಳು ಬಂಗಾಳದಲ್ಲಿದ್ದರು.
ಪಾಕಿಸ್ತಾನದ ಜನಕ ಬ್ಯಾರಿಸ್ಟರ್ ಮಹಮ್ಮದ್ ಆಲಿ ಜಿನ್ನಾ ಅವರ ನಿಕಟವರ್ತಿಯಾಗಿದ್ದ ಜೋಗೇಂದ್ರನಾಥ್ ಮಂಡಲ್ ಅವರು ಹಿಂದೂ ಮುಸ್ಲಿಮರು ಸಮಾನ ಸಂಖ್ಯೆಯಲ್ಲಿ ಇದ್ದ ಬಂಗಾಳ ಹಾಗೂ ಅಸ್ಸಾಂನ ಸೆಲ್ ಹೆಟನ ಕೆಲವು ಭೂ ಪ್ರದೇಶವನ್ನು ಪೂರ್ವ ಪಾಕಿಸ್ತಾನಕ್ಕೆ (ಈಗಿನ ಬಾಂಗ್ಲಾದೇಶ) ಸೇರಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ಅವರ ಚಿಂತನೆ ಏನೆಂದರೆ ದಲಿತರು ಭಾರತದಲ್ಲಿದ್ದರೆ ಮೇಲ್ವರ್ಗದ ಜಾತಿಯವರ ಶೋಷಣೆಯಿಂದ ಅವರ ಬಾಳು ನರಕವಾಗುವುದು. ಅದರ ಬದಲಿಗೆ ಏಕ ಭಾತೃತ್ವದ ಚಿಂತನೆಯುಳ್ಳ ಇಸ್ಲಾಂ ರಾಷ್ಟ್ರಕ್ಕೆ ಸೇರಿದ್ದಲ್ಲಿ ದಲಿತರ ಬಾಳು ಬೆಳಗುವುದು. ಇದರಿಂದ ದಲಿತರ ಉದ್ಧಾರ ಸಾಧ್ಯವಾಗುವುದು ಎಂಬುದಾಗಿತ್ತು. ಹಾಗಾಗಿ ನೂತನ ಪಾಕಿಸ್ತಾನ ರಾಷ್ಟ್ರ ನಿಮಾ೯ಣದ ಪೂವ೯ದಲ್ಲಿ ಜನಮತಗಣನೆಯಾದಾಗ ತನ್ನ ಸಮುದಾಯದ ನಮಸೂದ್ರ ಜನಾಂಗದ ಜನರಿಗೆ ಪಾಕಿಸ್ತಾನದ ಪರವಾಗಿ ನಿಲ್ಲುವಂತೆ ಸೂಚಿಸಿದರು. ಮತ್ತು ನೂತನ ಪಾಕಿಸ್ತಾನ ದೇಶದ ಉದಯವಾದಾಗ ದಲಿತ ನಾಯಕರಾದ ಜೋಗೇಂದ್ರನಾಥ ಮಂಡಲ ಅವರು ನಮೋ ಶೂದ್ರ ಪಂಗಡದ ದಲಿತರನ್ನು ಭಾರತಕ್ಕೆ
ಹೋಗದಂತೆ ತಡೆದು ಪಾಕಿಸ್ತಾನದಲ್ಲಿ ಇರುವಂತೆ ಮಾಡುವಲ್ಲಿ ಯಶಸ್ವಿಯಾದರು .
ಸ್ವತಂತ್ರ ಪಾಕಿಸ್ತಾನ ಉದಯವಾದಾಗ ಪಾಕಿಸ್ತಾನದ ಜನಕ ಮಹಮ್ಮದಾಲಿ ಜಿನ್ನಾ ಅವರು ದೇಶ ವಿಭಜನೆಯ ತನ್ನ ಕನಸನ್ನು ನನಸಾಗಿಸಿದ ಜೋಗೇಂದ್ರನಾಥ್ ಮಂಡಲ್ ಅವರನ್ನು ಪಾಕಿಸ್ತಾನದ ಪ್ರಪ್ರಥಮ ಕಾನೂನು ಸಚಿವರನ್ನಾಗಿ ನೇಮಿಸಿದರು.
ಆದರೆ ಕೇವಲ ನೆಪ ಮಾತ್ರ ಸಚಿವ ಸ್ಥಾನದಲ್ಲಿದ್ದ ಮಂಡಲ್ ಅವರು ಪಾಕಿಸ್ತಾನ ಉದಯವಾದ ಬಳಿಕ ಬಹುಸಂಖ್ಯೆಯಲ್ಲಿದ್ದ ದಲಿತರ ಸಾಮೂಹಿಕ ಕಗ್ಗೊಲೆ; ದಲಿತ ಮಹಿಳೆಯರ ಮೇಲಿನ ಅತ್ಯಾಚಾರ; ಮಕ್ಕಳು ಮುದುಕರೆನ್ನದೆ ಮುಸ್ಲಿಮೇತರರ ಮೇಲಿನ ದೌರ್ಜನ್ಯವನ್ನು ಕಣ್ಣಾರೆ ಕಂಡು ಕೊರಗಿದರು. ತಾನು ತಳೆದ ನಿರ್ಧಾರದಿಂದ ಲಕ್ಷಾಂತರ ಮಂದಿ ನಿಷ್ಪಾಪಿ ದಲಿತ ಜನರ ಕಗ್ಗೊಲೆಗೆ ತಾನೇ ಕಾರಣನಾದೆನೆಂದು ಪರಿತಪಿಸಿದರು.
1948 ರಲ್ಲಿ ಪಾಕಿಸ್ತಾನದ ಜನಕ ಜಿನ್ನಾ ಅವರ ಮರಣಾನಂತರ ಲಿಯಾಕತ್ ಅಲಿ ಖಾನ್ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಮುಂದುವರಿದರು. ಖ್ವಾಜಾ ನಿಜಾಮುದ್ದೀನ್ ಅವರು ಪಾಕಿಸ್ತಾನದ ಅದ್ಯಕ್ಷರಾದರು. ಆ ಸಂದರ್ಭದಲ್ಲಿ ದಲಿತ ದೌರ್ಜನ್ಯದ ಕುರಿತು ಮಂಡಲ್ ಅವರು ಪಾಕಿಸ್ತಾನದ ಸ೦ಸತ್ತಿನಲ್ಲಿ ಮಾತನಾಡಿದಾಗ ಪಾಕಿಸ್ತಾನ ಸರಕಾರ ಅವರ ದೇಶಭಕ್ತಿಯ ಬಗ್ಗೆ ಸಂದೇಹ ವ್ಯಕ್ತಪಡಿಸಿತ್ತು. ಇದರಿಂದ ಮತ್ತಷ್ಟು ಹತಾಶೆ ವಿವಶತೆಯಿ೦ದ ಕುಗ್ಗಿಹೋದ ಮಂಡಲ್ ಅವರಿಗೆ ಮುಸ್ಲಿಂ ಲೀಗ್‌ನ ನಾಯಕರನ್ನು ನಂಬಿ ತಾನು ಮೋಸ ಹೋದ ಬಗ್ಗೆ ಅರಿವು ಉಂಟಾಯಿತು. ಇನ್ನು ಮುಂದೆ ಈ ದೇಶದಲ್ಲಿದ್ದರೆ ತನ್ನ ಅಸ್ತಿತ್ವಕ್ಕೆ ಸಂಚಕಾರ ಬರಬಹುದೆಂಬ ಭಯದಿಂದ 1950 ರಲ್ಲಿ ಭಾರತಕ್ಕೆ ಮರಳಿದರು. ಭಾರತದಲ್ಲಿ 1968 ರವರೆಗೆ ಜೀವಿಸಿದ್ದ ಅವರು ತಾನು ತನ್ನವರೇ ಆದ *ನಮಸೂದ್ರ* ಜನರಿಗೆ ಮಾಡಿದ ದ್ರೋಹ ಹಾಗೂ ಲಕ್ಷಾಂತರ ನಿರಪರಾಧಿ ನಮಸೂದ್ರ ಹಿಂದೂ ಜನಾಂಗದ ದಲಿತರ ಸರ್ವನಾಶಕ್ಕೆ ಹಾಗೂ ನಮ ಸೂದ್ರ ಜನಾಂಗದ ವಿಶಿಷ್ಟ ಪ್ರಾದೇಶಿಕ ಸಂಸ್ಕೃತಿಯ ನಾಶಕ್ಕೆ ಕಾರಣನಾದೆನೆ೦ದು ಮಮ್ಮಲ ಮರಗಿದರು.
ಭಾರತಕ್ಕೆ ಮರಳಿದ ಅವರಿಗೆ ಯಾವ ಗೌರವವೂ ಸಿಗಲಿಲ್ಲ. ಭಾರತರತ್ನ ಡಾ ಬಿ. ಆರ್. ಅಂಬೇಡ್ಕರ್ ಅವರ ನಂತರದ ಸ್ಥಾನವನ್ನು ಪಡೆಯಬೇಕಾದ೦ತಹ ವ್ಯಕ್ತಿ ಹೇಳ ಹೆಸರಿಲ್ಲದಂತೆ 1968ರಲ್ಲಿ *ನಿರಾಶ್ರಿತರ ಶಿಬಿರದಲ್ಲಿ* ತನ್ನ ಅಂತ್ಯವನ್ನು ಕಂಡರು.
ದೇಶ ವಿಭಜನೆಯಿಂದ ಅತ್ಯಂತ ಹೆಚ್ಚಿನ ತೊಂದರೆಯನ್ನು ಕಷ್ಟವನ್ನು ಅನುಭವಿಸಿದ ಜನಾಂಗ ಎಂದರೆ ದಲಿತ ವರ್ಗ. ಪಾಕಿಸ್ತಾನದಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ ಇಪ್ಪತೈದರಷ್ಟು ದಲಿತರಿದ್ದರು. ಮೇಲ್ವರ್ಗದ ಶ್ರೀಮಂತ ಹಿಂದೂಗಳನ್ನು ಆಗಿನ ಪಾಕಿಸ್ತಾನ ಸರಕಾರವೇ ಭಾರತ ದೇಶಕ್ಕೆ ಗೌರವಯುತವಾಗಿ ಕಳುಹಿಸುವಲ್ಲಿ ಸಹಕರಿಸಿತು. ಆದರೆ ತೀರಾ ಹಿಂದುಳಿದ; ಅನಕ್ಷರಸ್ಥ ದಲಿತರನ್ನು ಕೇಳುವವರೇ ಇರಲಿಲ್ಲ. ದಲಿತರ ಸಾಮೂಹಿಕ ಹತ್ಯಾಕಾಂಡ ವಾಯಿತು. ಮಹಿಳೆಯರ ಮೇಲೆ ಅತ್ಯಾಚಾರವಾಯಿತು. ಸಾಮೂಹಿಕ ಮತಾಂತರವಾಯಿತು.
ದೇಶ ವಿಭಜನೆಯ ಸಮಯದಲ್ಲಿ ಶೇಕಡ ಇಪ್ಪತ್ತೈದರಷ್ಟು ಇದ್ದ ದಲಿತರ ಸಂಖ್ಯೆ ಈಗ ಪಾಕಿಸ್ತಾನ ಹಾಗೂ ಬಾಂಗ್ಲಾದಲ್ಲಿ *ಶೇಕಡಾ ಒಂದು ಮತ್ತು ಮೂರಕ್ಕೆ ಇಳಿದಿದೆ.* ಭಾರತದಲ್ಲಿ ಇದ್ದಂತೆ ಅವರಿಗೆ ಯಾವುದೇ ಮೀಸಲಾತಿ ಇಲ್ಲ. ಒಂದು ವೇಳೆ ದೇಶ ವಿಭಜನೆಯ ಸಂದರ್ಭದಲ್ಲಿ ಅಲ್ಲಿದ್ದ ಎಲ್ಲಾ ದಲಿತರನ್ನು ಭಾರತಕ್ಕೆ ಕರೆದು ತಂದಿದ್ದಲ್ಲಿ ಸಂವಿಧಾನಾತ್ಮಕವಾದ ಎಲ್ಲಾ ಸವಲತ್ತುಗಳೊಂದಿಗೆ ಅವರ ಸಮಗ್ರ ಉದ್ಧಾರವಾಗುತ್ತಿತ್ತು. *ಪಾಕಿಸ್ತಾನದಲ್ಲಿದ್ದುದರಿ೦ದ ಹೀನಾಯವಾದ ಬಾಳು ಸವೆಸಿ ದಲಿತ ಹಿಂದೂ ಜನಾಂಗದ ಅಸ್ತಿತ್ವ ಹಾಗೂ ವಿಶಿಷ್ಟವಾದ ಸಂಸ್ಕೃತಿ ಸಂಪ್ರದಾಯವೇ ನಾಶವಾಯಿತು.*
ಜೋಗೇಂದ್ರನಾಥ್ ಮಂಡಲ್ ಅವರಂತೆ ಮುಸಲ್ಮಾನರು ಮತ್ತು ದಲಿತರು ಸಮಾನ ದುಃಖಿಗಳು; ಬಡವರು; ಮೇಲು ವಗ೯ದ ತುಳಿತಕ್ಕೊಳಗಾದವರು ಹಾಗೂ ಸಹೋದರರು ಎಂಬ ಚಿಂತನೆಯುಳ್ಳ ಹಲವಾರು ವ್ಯಕ್ತಿಗಳು ಹಾಗೂ ಸಂಘಟನೆಗಳು ಪಾಕಿಸ್ತಾನದಲ್ಲಿದ್ದರು. ಇವರ ಜೊತೆ ಎಡಪಂಥೀಯ ಚಿಂತನೆಯ ಪ್ರಭಾವಶಾಲಿ ನಾಯಕರುಗಳು ಇದ್ದರು. ಇವರೆಲ್ಲರೂ ದಲಿತರ ಉದ್ಧಾರಕ್ಕಾಗಿ ಬಹಳಷ್ಟು ಪರಿಶ್ರಮ ನಡೆಸಿದವರಾಗಿದ್ದರು. ಆದರೆ *ಪಾಕಿಸ್ತಾನ ರಾಷ್ಟ್ರ ನಿರ್ಮಾಣವಾದ ಬಳಿಕ ಇವರೆಲ್ಲರೂ ಹೇಳ ಹೆಸರಿಲ್ಲದಂತೆ ಮಾಯವಾಗಿದ್ದಾರೆ.* ಇವರ ಯಾವ ಎಡಪಂಥೀಯ ಚಿಂತನೆಗೂ ಇಂದು ಪಾಕಿಸ್ತಾನದಲ್ಲಿ ಅವಕಾಶವಿಲ್ಲ.
ದೇಶ ವಿಭಜನೆಯ ಬಳಿಕ ಭಾರತದಿಂದ ಪಾಕಿಸ್ತಾನಕ್ಕೆ ಹೋದ ದಲಿತ ಮುಸ್ಲಿಮರ ಬಾಳು ಕೂಡ ನರಕ ಸದೃಶ್ಯವಾಗಿದೆ. ಅವರನ್ನು ಅಲ್ಲಿನ ಮೂಲ ಪಾಕಿಸ್ತಾನಿಯರು ತಮ್ಮವರೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ.
*ಒಟ್ಟಿನಲ್ಲಿ ದೇಶ ವಿಭಜನೆಯಿಂದ ಪಾಕಿಸ್ತಾನ ಮತ್ತು ಬಾ೦ಗಾೣ ದೇಶದಲ್ಲಿ ಎಲ್ಲ ರೀತಿಯಲ್ಲೂ ತೊಂದರೆಯನ್ನು ಅನುಭವಿಸಿದವರು ದಲಿತರು*
ಮಾಹಿತಿ: ಪ್ರಕಾಶ್ ನಾಯಕ್; ಶಿರಸ್ತೇದಾರರು; ಜುಡಿಶಿಯಲ್ ಸರ್ವಿಸ್ ಸೆಂಟರ್; ಮಂಗಳೂರು