
ನ್ಯಾಯಾಲಯದ ಕಲಾಪಗಳಲ್ಲಿ ಬದಲಾವಣೆ: ಹೈಕೋರ್ಟ್ ಹೊರಡಿಸಿದ ಹೊಸ ಮಾರ್ಗಸೂಚಿಯ ವಿವರ
Friday, November 13, 2020
ಮಾನ್ಯ ಕರ್ನಾಟಕ ಹೈಕೋರ್ಟ್ ದಿನಾಂಕ 12.11.2020 ರಂದು ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಸ೦ಬ೦ಧಪಟ್ಟ೦ತೆ ದಿನಾಂಕ 17.11.2020 ರಿಂದ ಅನ್ವಯವಾಗುವ೦ತೆ ಹೊರಡಿಸಿದ ಮಾಪ೯ಡಿಸಲಾದ (Modified) ಕಾರ್ಯವಿಧಾನ ಮಾನದಂಡಗಳ (SOP) ಮುಖ್ಯಾಂಶಗಳು
A) ಕಳೆದ ಹತ್ತು ದಿನಗಳಿಂದ 200 ಕ್ಕಿ೦ತಲೂ ಕಡಿಮೆ ಕೋವಿಡ ಪ್ರಕರಣಗಳು ವರದಿಯಾಗಿರುವ ರಾಜ್ಯದ ಈ ಕೆಳಗಿನ ಜಿಲ್ಲೆಗಳಲ್ಲಿ ಈ ಹಿಂದೆ ಹೊರಡಿಸಿದ ಕಾಯ೯ವಿಧಾನಗಳ ಮಾನದಂಡಗಳನ್ನು ಭಾಗಶಃ ಮಾಪ೯ಡಿಸಲಾಗಿದೆ.
1.ಬಾಗಲಕೋಟೆ 2.ಬೀದರ್ 3.ಚಾಮರಾಜನಗರ 4.ಚಿಕ್ಕಬಳ್ಳಾಪುರ 5.ಗದಗ 6.ಹಾವೇರಿ 7.ಕೊಡಗು 8.ಕೊಪ್ಪಳ 9.ರಾಯಚೂರು 10.ಯಾದಗಿರಿ
ಮೇಲ್ಕಾಣಿಸಿದ ಸ್ಥಳಗಳಲ್ಲಿ ವಕೀಲರು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕರಣಗಳು ಹಾಗೂ ದಾಖಲೆಗಳಿಗೆ ಸಂಬಂಧಪಟ್ಟಂತೆ ಮುಂಚಿತವಾಗಿ ದಿನಾಂಕವನ್ನು ನಿಗದಿಪಡಿಸಿ ಬೇಕಾಗಿಲ್ಲ. ಆದರೆ ದಾಖಲಾತಿಗಳನ್ನು ಹಾಜರು ಪಡಿಸಲು ನ್ಯಾಯಾಲಯ ಸಂಕೀರ್ಣದ ಹೊರಗಡೆ ಈಗ ಮಾಡಲಾಗಿರುವ ಕೌಂಟರ್ ನ ವ್ಯವಸ್ಥೆ ಮುಂದುವರಿಯುವುದು.
ದಾಖಲೆಗಳನ್ನು ಹಾಜರು ಪಡಿಸಲು ಈ ಹಿಂದೆ ಮಾರ್ಚ್ 2020 ರಲ್ಲಿ ನಿಗದಿಪಡಿಸಲಾದ ಸಮಯ ಮುಂದುವರಿಯಲಿದೆ.
ವಕೀಲರುಗಳು ಮತ್ತು ನ್ಯಾಯಾಲಯ ಸಿಬ್ಬಂದಿಗಳ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ವಕೀಲರುಗಳು ನ್ಯಾಯಾಲಯದ ಕಚೇರಿಗೆ ಹಾಜರಾಗಲು ಅನುಮತಿ ಇರುವುದಿಲ್ಲ.
ಪ್ರಸ್ತುತ ಕಾರ್ಯವಿಧಾನಗಳ ಮಾನದಂಡಗಳ ಅನುಸಾರ ನೀಡುವ ಅನುಮತಿಯ ವಿನಹ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಪಟ್ಟ ಯಾವುದೇ ಪಕ್ಷಕಾರರು ನ್ಯಾಯಾಲಯ ಸಂಕೀರ್ಣದ ಒಳಗಡೆ ಪ್ರವೇಶಿಸುವಂತಿಲ್ಲ.
B) *ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುವಂತೆ ಮಾಡಲಾದ ಭಾಗಶಃ ಮಾರ್ಪಾಡು*
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ವಕೀಲರ ಸಂಘದ ಕಚೇರಿಗಳನ್ನು ತೆರೆಯಲು ಈಗಾಗಲೇ ನೀಡಿದ ಅನುಮತಿಯೊಂದಿಗೆ ವಕೀಲರ ಸಂಘದ ಗ್ರಂಥಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.ಪ್ರತಿದಿನ ವಕೀಲರ ಸಂಘವು ತೆರೆಯುವ ಸಮಯಕ್ಕೆ ಸರಿಯಾಗಿ ಗ್ರಂಥಾಲಯವು ತೆರೆಯಲ್ಪಡುವುದು ಹಾಗೂ ವಕೀಲರ ಸಂಘವು ಮುಚ್ಚುವ ಅವಧಿಗೆ ಗ್ರಂಥಾಲಯವನ್ನು ಮುಚ್ಚತಕ್ಕದ್ದು.
ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರತಿದಿನ ಹತ್ತು ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲು ಅನುಮತಿಸಲಾಗಿದೆ. ಸಾಕ್ಷಿದಾರರನ್ನು ಬೆಳಗಿನ ಮತ್ತು ಮಧ್ಯಾಹ್ನದ ಕಲಾಪದ ಅವಧಿಯಲ್ಲಿ ವಿಚಾರಣೆಗೆ ಒಳಪಡಿಸಬಹುದು. ಆದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೊಳಪಡಿಸುವ ಸಾಕ್ಷಿದಾರರ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ. ದಂಡ ಪ್ರಕ್ರಿಯಾ ಸಂಹಿತೆ ಕಲಂ 164 ರಡಿ ದಾಖಲಿಸಬಹುದಾದ ಸಾಕ್ಷಿದಾರರ ಹೇಳಿಕೆಗಳ ಸಂಖ್ಯೆಗಳ ಬಗ್ಗೆ ಯಾವುದೇ ಮಿತಿ ಇರುವುದಿಲ್ಲ
ದಿನಾಂಕ 20.3.2020 ರ ಅಧಿಸೂಚನೆ ಪ್ರಕಾರ ಸಂಚಾರಿ ನ್ಯಾಯಾಲಯಗಳ ನಿಲಂಬನೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಹಿಂದಿನಂತೆ ಸದ್ರಿ ಸಂಚಾರಿ ನ್ಯಾಯಾಲಯಗಳು ಕಾರ್ಯನಿರ್ವಹಿಸಲಿವೆ. ಆದರೆ ಪ್ರತಿದಿನ ಕರೆಯಲ್ಪಡುವ ಪ್ರಕರಣಗಳ ಸಂಖ್ಯೆ ನಲವತ್ತು (40) ಮೀರಬಾರದು.
ಮೇಲೆ ಹೇಳಲಾದ ಮಾರ್ಪಾಡುಗಳನ್ನು ಹೊರತುಪಡಿಸಿ ಉಳಿದಂತೆ ಹಾಲಿ ಕಾರ್ಯನಿರ್ವಹಣಾ ಮಾನದಂಡಗಳು ಮುಂದುವರಿಯಲಿವೆ. ಮೇಲ್ಕಾಣಿಸಿದ ಮಾರ್ಪಾಡುಗಳನ್ನು ಪ್ರಯೋಗಾತ್ಮಕ ನೆಲೆಯಲ್ಲಿ ಮಾಡಲಾಗಿದೆ. ಸನ್ನಿವೇಶಗಳನ್ನು ಮತ್ತು ವಿದ್ಯಮಾನಗಳನ್ನು ಪರಾಂಬರಿಸಿ ಸದರಿ ಮಾಪಾ೯ಡುಗಳು ಕಾಲಕಾಲಕ್ಕೆ ಬದಲಾವಣೆಗೆ ಒಳಪಡಲಿವೆ.
ನವಂಬರ್ 2020 ನೆಯ ತಿಂಗಳ ಕೊನೆಯ ವಾರದಲ್ಲಿ ಇನ್ನಷ್ಟು ಹೆಚ್ಚಿನ ಸಡಿಲಿಕೆ ಕುರಿತು ಕ್ರಮ ಕೈಗೊಳ್ಳಲಾಗುವುದು.