ನಿರ್ದಿಷ್ಟ ಪರಿಹಾರ (Specific relief) ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ
Tuesday, October 27, 2020
Specific Relief (Amendment) Act 2018 ಅಥಾ೯ತ್ ನಿರ್ದಿಷ್ಟ ಪರಿಹಾರಗಳ (ತಿದ್ದುಪಡಿ) ಕಾಯಿದೆ 2018 ರ ಸೆಕ್ಷನ್ 20B ಪ್ರಕಾರ ವಿಶೇಷ ನ್ಯಾಯಾಲಯ ಸ್ಥಾಪನೆ ಮತ್ತು ಸೆಕ್ಷನ್ 20;20A;20B;20C ಕುರಿತು ಮಾಹಿತಿ
ನಿರ್ದಿಷ್ಟ ಪರಿಹಾರಗಳ ಕಾಯಿದೆ -1963 - ಇದು ವ್ಯಕ್ತಿಯ ನಾಗರಿಕ ಹಕ್ಕುಗಳಿಗೆ ಅಥವಾ ಆತನು ಮಾಡಿಕೊಂಡ ಒಪ್ಪಂದ(ಕರಾರು) ಸಂಬಂಧಿತ ಹಕ್ಕುಗಳಿಗೆ ಚ್ಯುತಿ ಉಂಟಾದಾಗ ನ್ಯಾಯಾಲಯದ ಮೂಲಕ ಸೂಕ್ತ ಪರಿಹಾರ ಪಡೆಯುವ ಆತನ ಹಕ್ಕುಗಳ ಕುರಿತು ಭಾರತದ ಸಂಸತ್ತು ರಚಿಸಿದ ಕಾಯಿದೆಯಾಗಿದೆ.
ಸ್ಥಿರಾಸ್ತಿ ಸ್ವಾಧೀನತೆ; ಕರಾರುಗಳ ನಿರ್ವಹಣೆ; ನೋಂದಾಯಿತ ದಸ್ತಾವೇಜುಗಳ ದುರಸ್ತಿ: ಘೋಷಣಾತ್ಮಕ ಡಿಕ್ರಿಗಳು; ಪ್ರತಿಬಂಧಕಾಜ್ಞೆ ಮುಂತಾದ ವಿಷಯಗಳಿಗೆ ಸಂಬಂಧಪಟ್ಟಂತೆ ಪರಿಹಾರಗಳನ್ನು ನ್ಯಾಯಾಲಯದ ಮೂಲಕ ಈ ಕಾಯ್ದೆಯಡಿ ಪಡೆಯಬಹುದಾಗಿದೆ.
ನಿರ್ದಿಷ್ಟ ಪರಿಹಾರಗಳ (ತಿದ್ದುಪಡಿ) ಮಸೂದೆಗೆ ಭಾರತದ ರಾಷ್ಟ್ರಪತಿಗಳು ದಿನಾಂಕ 1.8.2018 ರಂದು ಅಂಕಿತ ಹಾಕಿದ್ದು ತಿದ್ದುಪಡಿ ಕಾಯಿದೆಯು ದಿನಾಂಕ 1.10.2018 ರಿಂದ ಜಾರಿಗೊಂಡಿದೆ. ಕಾಯಿದೆಯ ಸೆಕ್ಷನ್ 6;10;11;14;15;16;19;20;21;25 ಮತ್ತು 41 ತಿದ್ದುಪಡಿಗೆ ಒಳಪಟ್ಟಿವೆ.
ಈ ಲೇಖನದಲ್ಲಿ ಕಾಯ್ದೆಯ ಸೆಕ್ಷನ್ 20;20A;20B ಮತ್ತು 20C ಗೆ ಸಂಬಂಧಪಟ್ಟಂತೆ ಆಗಿರುವ ತಿದ್ದುಪಡಿಯ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಯಾವುದೇ ಕರಾರಿಗೆ ಸಂಬಂಧಪಟ್ಟಂತೆ ಉಭಯ ಪಕ್ಷಕಾರರಲ್ಲಿ ಒಬ್ಬರು ಕರಾರಿನ ಶತ೯ಗಳನ್ನು ಉಲ್ಲಂಘಿಸಿ ತಮ್ಮ ಪಾಲಿನ ಕಾರ್ಯನಿರ್ವಹಿಸಲು ವಿಫಲರಾದಲ್ಲಿ ಸದರಿ ಕಾರ್ಯವನ್ನು ಮೂರನೇ ವ್ಯಕ್ತಿಯ ಮುಖಾಂತರ ಅಥವಾ ತನ್ನ ಪ್ರತಿನಿಧಿಗಳ ಮೂಲಕ ನಿರ್ವಹಿಸಿ ಪೂರ್ಣಗೊಳಿಸಲು ಬಾಧಿತ ಪಕ್ಷಕಾರರಿಗೆ ನೂತನ ಕಾಯಿದೆ 20 ರಡಿ ಅವಕಾಶ ಕಲ್ಪಿಸಲಾಗಿದೆ. ಈ ರೀತಿ ಬದಲಿ ವ್ಯವಸ್ಥೆ ಮಾಡಿದುದರಿ೦ದ ಆಗಿರುವ ಹೆಚ್ಚುವರಿ ಖರ್ಚುಗಳನ್ನು ಕರಾರು ಉಲ್ಲಂಘಿಸಿದ ಪಕ್ಷಕಾರರಿಂದ ವಸೂಲು ಮಾಡಲು ಕೂಡ ಬಾಧಿತ ಪಕ್ಷಕಾರರಿಗೆ ಅವಕಾಶ ಕಲ್ಪಿಸಲಾಗಿದೆ.
ಸೆಕ್ಷನ್ 20A
ನೂತನವಾಗಿ ಸೇರ್ಪಡೆಗೊಂಡ ಸೆಕ್ಷನ್ 20A ರಡಿ ಮೂಲಭೂತ ಸೌಕರ್ಯಗಳ ಯೋಜನೆ ಕುರಿತು ವಿಶೇಷ ಅವಕಾಶಗಳನ್ನು ಒದಗಿಸಲಾಗಿದೆ. ಸೆಕ್ಷನ್ 20A ಪ್ರಕಾರ ಮೂಲಭೂತ ಸೌಕರ್ಯ ಯೋಜನೆಗಳ ಕರಾರು ಉಲ್ಲಂಘನೆಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಹೂಡಿರುವ ದಾವೆಗಳಲ್ಲಿ *ಪ್ರತಿಬಂಧಕಾಜ್ಞೆಯನ್ನು (Injunction) ನ್ಯಾಯಾಲಯವು ನೀಡುವಂತಿಲ್ಲ.* ಏಕೆಂದರೆ ಪ್ರತಿಬಂಧಕಾಜ್ಞೆ ನೀಡಿದ್ದಲ್ಲಿ ಮೂಲಭೂತ ಸೌಕರ್ಯಗಳ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬವಾಗುವುದು. ಮೂಲಭೂತ ಸೌಕರ್ಯ ಯೋಜನೆಗಳು ಯಾವುವು ಎಂಬ ಕುರಿತು ಕಾಯಿದೆಯ ಅನುಬಂಧದಲ್ಲಿ (Schedule) ವಿವರಿಸಲಾಗಿದೆ. ಪ್ರಸ್ತುತ ಸಾರಿಗೆ; ಶಕ್ತಿ ;ಜಲ ಮತ್ತು ನೈರ್ಮಲ್ಯ; ಸಂಪರ್ಕ; ಸಾರ್ವಜನಿಕ ಮತ್ತು ವಾಣಿಜ್ಯ ವಿಷಯಗಳಿಗೆ ಸಂಬಂಧಪಟ್ಟ 5 ಮೂಲಭೂತ ಸೌಕರ್ಯ ಯೋಜನೆಗಳು ಕಾಯಿದೆಯ ಅನುಬಂಧದಲ್ಲಿ ಒಳಗೊಂಡಿವೆ. ಅನುಬಂಧವನ್ನು ತಿದ್ದುಪಡಿ ಮಾಡುವ ಅಧಿಕಾರ ಕೇಂದ್ರ ಸರಕಾರಕ್ಕಿದೆ.
ಸೆಕ್ಷನ್ 20B
ಸೆಕ್ಷನ್ 20B ಯಡಿ ಮೂಲಭೂತ ಸೌಕರ್ಯ ಯೋಜನೆಯ ವಿವಾದಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯಗಳಲ್ಲಿ ಹೂಡಲಾದ ದಾವೆಗಳ ವಿಚಾರಣೆ ನಡೆಸಲು ರಾಜ್ಯ ಸರಕಾರವು ಹೈಕೋರ್ಟಿನ ಮುಖ್ಯ ನ್ಯಾಯಾಧೀಶರೊ೦ದಿಗೆ ಸಮಾಲೋಚಿಸಿ ಸ್ಥಳೀಯ ವ್ಯಾಪ್ತಿಯೊಳಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸಿವಿಲ್ ನ್ಯಾಯಾ ಲಯಗಳನ್ನು *ವಿಶೇಷ ನ್ಯಾಯಾಲಯಗಳಾಗಿ ನಾಮಾಂಕಿತಗೊಳಿಸಿ* ಅಧಿಸೂಚನೆ ಹೊರಡಿಸ ತಕ್ಕದ್ದು. ಪ್ರಸ್ತುತ ಮಂಗಳೂರಿನಲ್ಲಿ *ಪ್ರಧಾನ ಹಿರಿಯ ಸಿವಿಲ್ ನ್ಯಾಯಾ ಲಯವನ್ನು* ವಿಶೇಷ ನ್ಯಾಯಾಲಯವಾಗಿ ನಾಮಾಂಕಿತಗೊಳಿಸಲಾಗಿದೆ.
ಸೆಕ್ಷನ್ 20 C
ಸೆಕ್ಷನ್ 20 ರಡಿ ದಾಖಲು ಮಾಡಲಾದ ದಾವೆಗಳನ್ನು ನ್ಯಾಯಾಲಯವು ಪ್ರತಿವಾದಿಗೆ ಸಮನ್ಸ್ ಜಾರಿಯಾದ ದಿನಾಂಕದಿಂದ ಹನ್ನೆರಡು ತಿಂಗಳೊಳಗೆ ಇತ್ಯರ್ಥಪಡಿಸತಕ್ಕದ್ದೆಂದು ತಿದ್ದುಪಡಿ ಕಾಯಿದೆ 20 C ಯಲ್ಲಿ ವಿಧಿಸಲಾಗಿದೆ. ಸಕಾರಣಗಳಿದ್ದಲ್ಲಿ ಸದರಿ ಅವಧಿಯನ್ನು ಮುಂದಿನ 6 ತಿಂಗಳಿಗೆ ವಿಸ್ತರಿಸಬಹುದಾಗಿದೆ. ಶೀಘ್ರಗತಿಯಲ್ಲಿ ಮೂಲಭೂತ ಸೌಕರ್ಯ ಯೋಜನೆಗಳಿಗೆ ಸಂಬಂಧಪಟ್ಟ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ಸೆಕ್ಷನ್ 20C ಅನ್ನು ಸೇರ್ಪಡೆಗೊಳಿಸಲಾಗಿದೆ.
ಸಾಮಾನ್ಯವಾಗಿ ಸರಕಾರದ ಬೃಹತ್ ಯೋಜನೆಗಳಿಗೆ ಸಂಬಂಧಪಟ್ಟ ದಾವೆಗಳು ಸೆಕ್ಷನ್ 20 ರ ವ್ಯಾಪ್ತಿಗೊಳಪಟ್ಟಿವೆ. ಈ ರೀತಿಯ ದಾವೆಗಳನ್ನು ನಾಮಾಂಕಿತ ವಿಶೇಷ ನ್ಯಾಯಾಲಯದಲ್ಲಿ ದಾಖಲು ಮಾಡದೆ ಇತರ ನ್ಯಾಯಾಲಯಗಳಲ್ಲಿ ದಾಖಲು ಮಾಡಿದಲ್ಲಿ ಸದರಿ ದಾವೆಗಳನ್ನು ವಿಶೇಷ ನ್ಯಾಯಾಲಯಕ್ಕೆ ವಗಾ೯ಯಿಸತಕ್ಕದಾಗಿದೆ.
ಮಾಹಿತಿಯನ್ನು ಹಂಚಿಕೊಂಡವರು: ಪ್ರಕಾಶ್ ನಾಯಕ್; ಶಿರಸ್ತೇದಾರರು; ಜುಡಿಶಿಯಲ್ ಸರ್ವಿಸ್ ಸೆಂಟರ್; ಮಂಗಳೂರು