ದೇವೇಗೌಡರನ್ನು ಹಾಡಿ ಹೊಗಳಿದ್ದ ರಾಮವಿಲಾಸ್ ಪಾಸ್ವಾನ್: ಯಾಕೆ ಗೊತ್ತೇ?
ಬರಹ: ರಮೇಶ್ ಪೆರ್ಲ, ಹಿರಿಯ ಪತ್ರಕರ್ತರು
ರಾಮ ವಿಲಾಸ್ ಪಾಸ್ವಾನ್ ಅವರು ಇಂದಿಲ್ಲ. (ದಶಕಗಳ ಹಿಂದೆ) ಅವರನ್ನು ಮಂಗಳೂರಲ್ಲಿ ಭೇಟಿ ಆಗುವ ಕುಶಲೋಪಹರಿ ಮಾತುಕತೆ ಮಾಡುವ ಅವಕಾಶ ಸಿಕ್ಕಿತ್ತು. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಒಂದು ಆಸಕ್ತಿದಾಯಕ ವಿಚಾರ ಹೇಳಿದರು. ಧರ್ಮಸ್ಥಳ ರಸ್ತೆಯಲ್ಲಿ ಸಿಗುವ ವಗ್ಗ ಎಂಬಲ್ಲಿ ಟೆಲಿಫೋನ್ ಎಕ್ಸ್ ಚೇಂಜ್ ಉದ್ಘಾಟನಾ ಸಮಾರಂಭಕ್ಕೆ ಅವರು ಆಗಮಿಸಿದ್ದರು.
ಆ ಕಡೆ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿ ವರದಿ ಮಾಡಿದ ಮೇಲೆ ಮಂಗಳೂರಲ್ಲಿ ಅವರು ವಾಸ್ತವ್ಯ ಹೂಡಿದ್ದ ಹೊಟೇಲ್ ಕೊಠಡಿಗೆ ಹೋಗಿದ್ದೆ. ವಿ.ಪಿ.ಸಿಂಗ್, ಲಾಲೂ, ಐ.ಕೆ.ಗುಜ್ರಾಲ್, ದೇವೇಗೌಡ, ಶರದ್ ಯಾದವ್ ಮತ್ತಿತರರ ಕಾರಣಕ್ಕಾಗಿ ಈ ಮನುಷ್ಯನಲ್ಲಿ ಖಾಸಗಿ ಭೇಟಿಗಾಗಿ ಹೋದೆ. ಚಾಮರಾಜನಗರದ ಉಪನ್ಯಾಸಕಿಯೊಬ್ಬರು ನನ್ನನ್ನು ಅವರ ಬೆಡ್ ರೂಮ್ ಕುಳಿತುಕೊಳ್ಳಲು ಅವಕಾಶ ನೀಡಿದರು.
ಪಿ.ವಿ.ಮೋಹನ್ ಕೂಡ ಅವರೊಂದಿಗಿದ್ದರು. ನನ್ನನ್ನು ಯಾರೋ ಪರಿಚಯಿಸಿದರು. ನಾನು ಕೇಳಿದ್ದು ಒಂದೇ ಪ್ರಶ್ನೆ. ಯಾಕೆ ಗ್ರಾಮೀಣ ಪ್ರದೇಶದ ಟೆಲಿಕಾಂ ಕಚೇರಿ ಉದ್ಘಾಟನೆಗೆ ಬಂದಿರಿ. ಆಗ ಅವರು ನೀಡಿದ ಉತ್ತರ ಹೀಗಿತ್ತು. ನಾವು ಯಾವುದೊ ಕುಗ್ರಾಮಕ್ಕೆ ಭೇಟಿ ನೀಡುವುದಾಗಿ ಒಂದು ವರ್ಷ ಮೊದಲೇ ಕಾರ್ಯಕ್ರಮ ಹಾಕಿಕೊಂಡರೆ ಅಲ್ಲಿ ಸುತ್ತಮುತ್ತಲ ಗ್ರಾಮಕ್ಕೆ ಟೆಲಿಕಾಂ ಸೇವೆ ರೆಡಿ ಮಾಡುತ್ತಾರೆಯ ಏಕೆಂದರೆ, ಸಚಿವರು ಬಂದಾಗ ಯಾವುದೇ ದೂರು ಬರಬಾರದು ಎಂಬುದು ಅಧಿಕಾರಿಗಳ ಸ್ವಭಾವ. ಗ್ರಾಮಾಂತರ ಪ್ರದೇಶದಲ್ಲಿ, ಗಿರಿಜನ, ದಲಿತ, ಹಿಂದುಳಿದವರ ಪ್ರದೇಶದಲ್ಲಿ ಕೆಲಸ ಮಾಡಬೇಕಾದರೆ ನಾವು ಅಧಿಕಾರಿಗಳಿಗೆ ಯೋಜನೆ ಹಾಕಲು ಹೇಳಬೇಕಾಗಿಲ್ಲ. ಅಲ್ಲಿ ಭೇಟಿ ನೀಡುತ್ತೇವೆ ಅಂದರೆ ಸಾಕು.
ಇಷ್ಟೆಲ್ಲಾ ಹೇಳಿದ ಮೇಲೆ ಪಾಸ್ವಾನ್ ಅವರ ಸಹಾಯಕನನ್ನು ಕರೆದು ಹೇಳಿದರು ಇವರ ಮಾಹಿತಿ ತೆಗೆದುಕೊಳ್ಳಿ. ಇವರನ್ನು ಟೆಲಿಕಾಂ ಸಲಹಾ ಸಮಿತಿಗೆ ಸೇರಿಸಿಕೊಳ್ಳಬೇಕು. ಅದೆಲ್ಲ ಬೇಡ, ಅದೇನೆಂದು ನನಗೆ ಗೊತ್ತಿಲ್ಲ ಅಂದೆ. ಆಗ ಅವರು ದೇವೇಗೌಡ ಅವರು ಕತೆ ಹೇಳಿದರು.
ನಿನ್ನ ದೇವೇಗೌಡ ತುಂಬಾ ಉತ್ತಮ ಮನುಷ್ಯ. ದೊಡ್ಡ ಬೇಡಿಕೆ ಇಲ್ಲದ ಮುಖಂಡ. ಪಾಸ್ವಾನ್ ಅವರು ದೇವೇಗೌಡರ ಮಂತ್ರಿ ಮಂಡಲದಲ್ಲಿ ರೈಲ್ವೇ ಮಂತ್ರಿ ಆಗಿದ್ದರು. ಒಂದು ದಿನ ಪ್ರಧಾನಿ ದೇವೇಗೌಡರು ರೈಲ್ವೇ ಮಂತ್ರಿ ಪಾಸ್ವಾನ್ ಗೆ ಭೇಟಿ ಆಗುವಂತೆ ಕರೆ ಕಳುಹಿಸಿದರಂತೆ. ಪ್ರಧಾನಿಯ ಕರೆ ಬಂದ್ರೆ ಯಾರೇ ರೈಲ್ವೇ ಸಚಿವನಾದರೂ ಹೆದರಿ ಹೋಗುತ್ತಿದ್ದ. ಏಕೆಂದರೆ, ರೈಲ್ವೇ ಯೋಜನೆ ಸುಲಭದಲ್ಲಿ ಮುಗಿಯುವುದಿಲ್ಲ. ಪಾಸ್ವಾನ್ ಅವರಿಗೂ ಒಂದು ತರ ಹೆದರಿಕೆ ಆಯ್ತಂತೆ. ಆದ್ರೆ, ನಿನ್ನ ದೇವೇಗೌಡ್ಡ ದೊಡ್ಡ ಮನುಷ್ಯ. ಅವರ ಡಿಮ್ಯಾಂಡ್ ತೀರಾ ಸಣ್ಣದು. ಪಾಸ್ವಾನ್ ಹೆದರಿಕೆಯಿಂದಲೇ ಪ್ರಧಾನಿ ಎದುರು ಕುಳಿತರಂತೆ. ದೇವೇಗೌಡರು ಶ್ರವಣಬೆಳಗೊಳ ರೈಲು ಸಂಪರ್ಕದ ಚಿಕ್ಕ ಯೋಜನೆಯನ್ನು ಪಾಸ್ವಾನ್ ಗೆ ಹೇಳಿದರಂತೆ. ಪಾಸ್ವಾನ್ ಉಸ್ಸಪ್ಪ ಅಂದ್ರಂತೆ. ಅದೊಂದು ಚಿಕ್ಕ ಯೋಜನೆ. ಕಾರ್ಯಗತ ಆಗಿದೆ. ಯಾರಿಗೂ ಕಾಯಲಿಲ್ಲ.
ನಮ್ಮೊಂದಿಗೆ ಇಂದಿಲ್ಲದ ರಾಮ ವಿಲಾಸ್ ಪಾಸ್ವಾನ್ ಅವರಿಗೊಂದು ನುಡಿ ನಮನ.