-->

 ಪವರ್ ಟಿವಿಯ ಘಟನಾವಳಿಗಳ ಬಗ್ಗೆ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ವಿಶ್ಲೇಷಣೆ ಮಾಡಿದ್ದು ಹೀಗೆ....

ಪವರ್ ಟಿವಿಯ ಘಟನಾವಳಿಗಳ ಬಗ್ಗೆ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ವಿಶ್ಲೇಷಣೆ ಮಾಡಿದ್ದು ಹೀಗೆ....

ದಿನೇಶ್ ಅಮೀನ್ ಮಟ್ಟು

ಪವರ್ ಟಿವಿ ಚಾನೆಲ್ ಗೆ ಸಂಬಂಧಿಸಿದ ಬೆಳವಣಿಗೆಗಳಲ್ಲಿ ಎರಡು ಭಾಗಗಳಿವೆ. ಮೊದಲನೆಯದು ಚಾನೆಲ್ ವರದಿ ಮಾಡಿರುವ ಭ್ರಷ್ಟಾಚಾರದ ಹಗರಣ, ಎರಡನೆಯದು ಟಿವಿ ಚಾನೆಲ್ ಪ್ರಸಾರವಾಗದಂತೆ ತಡೆಹಿಡಿದಿರುವ ಕ್ರಮ.

ಮುಖ್ಯಮಂತ್ರಿಯವರ ಕುಟುಂಬದವರು ಗುತ್ತಿಗೆದಾರರಿಂದ ಲಂಚ ವಸೂಲಿ ಮಾಡಿದ್ದಾರೆ ಎನ್ನುವುದು ಆರೋಪ. ಈ ಪ್ರಕರಣದಲ್ಲಿ ಮೂವರು ಪಾತ್ರಧಾರಿಗಳಿದ್ದಾರೆ. ಲಂಚ ಕೊಟ್ಟಿರುವ ಗುತ್ತಿಗೆದಾರ, ಲಂಚ ಪಡೆದಿರುವ ರಾಜಕಾರಣಿ ಮತ್ತು ವರದಿ ಮಾಡಿದ ಪತ್ರಕರ್ತ. ಅಧಿಕಾರಿಯೊಬ್ಬರು ಇದರಲ್ಲಿ ಪೋಷಕ ಪಾತ್ರದಲ್ಲಿದ್ದಾರೆ.

ಚಾನೆಲ್ ಭ್ರಷ್ಟಾಚಾರದ ಆರೋಪ ಮಾಡಿರುವುದು ಮುಖ್ಯಮಂತ್ರಿಯ ಮಗನ ವಿರುದ್ಧ. ಆದ್ದರಿಂದ ಮೇಲ್ನೋಟಕ್ಕೆ ಚಾನೆಲ್ ವರದಿ ಗುತ್ತಿಗೆದಾರನ ಪರ ಮತ್ತು ರಾಜಕಾರಣಿಯ ವಿರುದ್ಧ ಇದ್ದಂತೆ ಕಾಣಿಸುತ್ತಿತ್ತು. ವಿಚಿತ್ರವೆಂದರೆ ಪೊಲೀಸರಿಗೆ ದೂರು ನೀಡಿರುವುದು ರಾಜಕಾರಣಿ ಅಲ್ಲ, ಗುತ್ತಿಗೆದಾರ.  ಪತ್ರಿಕೆಯ ಮಾಲೀಕರು ತಿರುಚಿದ ದಾಖಲೆಗಳನ್ನು ತೋರಿಸಿ ಹಣವಸೂಲಿಗೆ ಪ್ರಯತ್ನಿಸಿದ್ದಾರೆ ಎನ್ನುವುದು ಗುತ್ತಿಗೆದಾರರ ದೂರು. ಆ ದೂರಿನನ್ವಯ ಸಿಸಿಬಿ ಪೊಲೀಸರು ಟಿವಿ ಚಾನೆಲ್ ಮಾಲೀಕರ ಮನೆಗೆ ವಿಚಾರಣೆಗೆ ಹೋಗಿದ್ದಾರೆ, ಚಾನೆಲ್ ನ ಕಚೇರಿಗೆ ಬಂದು ಅಲ್ಲಿನ ಕಂಪ್ಯೂಟರ್ ಗಳನ್ನು ವಶಕ್ಕೆ ತೆಗೆದುಕೊಂಡು ಜಾಲಾಡಿದ್ದಾರೆ.

ಕಾನೂನಿನ ದೃಷ್ಟಿಯಿಂದ ಈ ಹಂತದ ವರೆಗೆ ನಡೆದಿರುವುದು ವಿಚಾರಣೆಯ ಸಹಜ ಪ್ರಕ್ರಿಯೆ. ತಿರುಚಿದ ದಾಖಲೆಗಳ ಮೂಲ ಹುಡುಕಲು ಆರೋಪಿಗಳ ಕಂಪ್ಯೂಟರ್, ಮೊಬೈಲ್ ಗಳನ್ನು ವಶಕ್ಕೆ ಪಡೆಯುವುದು ಪೊಲೀಸ್ ವಿಚಾರಣೆಯ ಭಾಗ.ಪತ್ರಿಕೆ ಮತ್ತು ಚಾನೆಲ್ ಗಳ ಮಾಲೀಕರು ಇಲ್ಲವೇ ವರದಿಗಾರರ ವಿರುದ್ಧ ಆರೋಪ ಎದುರಾದಾಗ ಈ ರೀತಿಯ ವಿಚಾರಣೆ ಕರ್ನಾಟಕದಲ್ಲಿಯೇ ಅನೇಕ ಪ್ರಕರಣಗಳಲ್ಲಿ ನಡೆದಿವೆ.

ಎಡವಟ್ಟಾಗಿರುವುದು ಪ್ರಕರಣದ ಎರಡನೇ ಭಾಗದಲ್ಲಿ. ವಿಚಾರಣೆಗೆಂದು ಕಚೇರಿಗೆ ಹೋಗಿದ್ದ ಪೊಲೀಸರು ಒಂದು ಅತಿರೇಕದ ಹೆಜ್ಜೆ ಮುಂದಿಟ್ಟಿದ್ದಾರೆ.  ಕಂಪ್ಯೂಟರ್ ಗಳನ್ನು ವಶಕ್ಕೆ ತೆಗೆದುಕೊಳ್ಳುವ ಜೊತೆಯಲ್ಲಿ ಚಾನೆಲ್ ಪ್ರಸಾರಕ್ಕೆ ಅತ್ಯಗತ್ಯವಾಗಿರುವ ಸರ್ವರ್ ಗಳನ್ನು ವಶಕ್ಕೆ ಪಡೆದಿದ್ದಾರೆ, ಅಷ್ಟು ಮಾತ್ರವಲ್ಲ ಫೇಸ್ ಬುಕ್, ಯುಟ್ಯೂಬ್ ಖಾತೆಗಳ ಪಾಸ್ ವರ್ಡ್ ಗಳನ್ನು ಬದಲಾಯಿಸಿದ್ದಾರೆ. ಚಾನೆಲ್ ಕಾರ್ಯನಿರ್ವಹಣೆಯನ್ನು ಸಂಪೂರ್ಣ ಸ್ಥಗಿತಗೊಳಿಸುವ ದುರುದ್ದೇಶದಿಂದಲೇ ಇದನ್ನು ಮಾಡಿದ್ದಾರೆ.

ಇಂತಹ ಕೆಲಸವನ್ನು ಪೊಲೀಸರು ತಾವಾಗಿಯೇ ಮಾಡುವುದಿಲ್ಲ. ಮೇಲಿನಿಂದ ಆದೇಶ ಬಂದರಷ್ಟೇ ಮಾಡುತ್ತಾರೆ. ಈ ಪ್ರಕರಣದಲ್ಲಿ ಆದೇಶ ಯಾರು ಕೊಟ್ಟಿರಬಹುದೆಂಬ ಬಗ್ಗೆ ಯಾರಿಗೂ ಸಂಶಯ ಇಲ್ಲ. ಅಧಿಕಾರ ಮತ್ತು ದುಡ್ಡಿನ ಮದವೇರಿದ ರಾಜಕಾರಣಿಗಳು ಸಾಮಾನ್ಯವಾಗಿ ಈ ರೀತಿ ತಮ್ಮ ಗೋರಿ ತಾವೇ ತೋಡಿಕೊಳ್ಳುತ್ತಾರೆ.
ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ನನಗೆ ನಿಜಕ್ಕೂ ಕನಿಕರ ಇದೆ. ಅವರು ಈ ರೀತಿ ಸೇಡಿಗೆ ಇಳಿಯುವವರಲ್ಲ. ಅದರಲ್ಲೂ ಪತ್ರಕರ್ತರನ್ನು ಎದುರುಹಾಕಿಕೊಳ್ಳಲು ಹೋಗುವವರಲ್ಲ.
 ( ಅವರು ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ನಾನು ಹಲವಾರು ಅಂಕಣಗಳನ್ನು ಬರೆದಿದ್ದೆ. ಅವರೆಂದೂ ನೇರವಾಗಿ ಇಲ್ಲವೇ ಸಂಪಾದಕರ ಮೂಲಕ ನನ್ನ ಮೇಲೆ ಒತ್ತಡ ಹಾಕಿಲ್ಲ. ಅಂತಹ ಅಂಕಣಗಳು ಪ್ರಕಟವಾದ ದಿನ ಕೆಲವೊಮ್ಮೆ ಬೆಳಿಗ್ಗೆ ನನ್ನ ಹಿರಿಯ ಸಹದ್ಯೋಗಿಯಾಗಿದ್ದ ಅವರ ಮಾಧ್ಯಮ ಸಲಹೆಗಾರರು ನನಗೆ ಪೋನ್ ಮಾಡಿ ‘ದಿನೇಶ್ ಓದಿದೆ,ಚೆನ್ನಾಗಿದೆ’ ಎಂದಷ್ಟೇ ಹೇಳಿ ಪೋನ್ ಇಟ್ಟುಬಿಡುತ್ತಿದ್ದರು)

ಕಳೆದ ಬಾರಿ ಯಡಿಯೂರಪ್ಪನವರು ಜೈಲಿಗೆ ಹೋಗಿರುವುದು ಕೂಡಾ ಪೂರ್ಣವಾಗಿ ಅವರ ತಪ್ಪಿನಿಂದಲ್ಲ. ಈ ಪ್ರಕರಣದಲ್ಲಿಯೂ ಪವರ್ ಟಿವಿ ಮೇಲೆ ಅವರ ಮಗನ ಒತ್ತಡದಿಂದ ದಾಳಿಯಾಗಿದ್ದರೆ ಆ ಮಗನ ಬಗ್ಗೆ ನನಗೆ ಇನ್ನೂ ಹೆಚ್ಚು ಕನಿಕರ ಇದೆ. ಇದು ರಾಜಕೀಯದಲ್ಲಿ ಬೆಳೆಯಲು ಬಯಸುವ ಮಕ್ಕಳ ಲಕ್ಷಣ ಅಲ್ಲ. ಈ ದಾರಿಯಲ್ಲಿ ಅವರು ಬಹಳ ದೂರ ಖಂಡಿತ ಹೋಗಲಾರರು.

ಇವೆಲ್ಲದರ ನಡುವೆ ಈ ಪ್ರಕರಣದಲ್ಲಿ  ನನಗೆ ಸುಲಭದಲ್ಲಿ ಅರ್ಥವಾಗದ ಕೆಲವು ಸಿಕ್ಕುಗಳಿವೆ. ಮೊದಲನೆಯದಾಗಿ, ಮಾಧ್ಯಮ ಸಂಸ್ಥೆಗಳ ಮಾಲೀಕರೇ ಸಂಪಾದಕರಾಗಿರುವ ಅನೇಕ ಉದಾಹರಣೆಗಳು ನಮ್ಮ ನಡುವೆ ಇರುವುದರಿಂದ ತಪ್ಪೆಂದು ಹೇಳಲಾಗುವುದಿಲ್ಲ. ಆದರೆ ಪವರ್ ಟಿವಿ ಚಾನೆಲ್ ನ ಮಾಲೀಕರು ತಮ್ಮನ್ನು ಸಂಪಾದಕರೆಂದು ಕರೆಸಿಕೊಂಡಿಲ್ಲ. ಚಾನೆಲ್ ಗೆ ಬೇರೆ ಸಂಪಾದಕರಿದ್ದಾರೆ. ಹೀಗಿರುವಾಗ ಇಂತಹದ್ದೊಂದು ಮುಖ್ಯವಾದ ವರದಿಯನ್ನು ಅವರೇ ಪರದೆಯ ಮುಂದೆ ಬಂದು ಹೋರಾಟಗಾರನ ರೀತಿ ಪ್ರಸ್ತುತ ಪಡಿಸಿ ಅಬ್ಬರಿಸುತ್ತಿದ್ದುದು ನನಗೆ ವಿಚಿತ್ರವಾಗಿ ಕಂಡಿತ್ತು. ಯಾಕೆಂದರೆ ಮಾಲೀಕರಿಗೆ ಸಾಮಾನ್ಯವಾಗಿ ಬೇರೆ ವ್ಯವಹಾರಿಕವಾದ ಹಿತಾಸಕ್ತಿಗಳಿರುತ್ತವೆ. ಈ ಕಾರಣದಿಂದಾಗಿ ಚಾನೆಲ್ ಮಾಡಿರುವ ವರದಿ ಸತ್ಯನಿಷ್ಠವಾಗಿದ್ದರೂ ವೀಕ್ಷಕರಿಗೆ ಸಹಜವಾಗಿ ಕೆಲವು ಅನುಮಾನ ಮೂಡುತ್ತದೆ.

ಎರಡನೆಯದಾಗಿ, ತಮ್ಮ ಕಚೇರಿಯಲ್ಲಿ ಗಾಂಧಿ,ಅಂಬೇಡ್ಕರ್ ಜೊತೆ ಹೆಡಗೆವಾರ್ ಅವರ ಪೋಟೊಗಳನ್ನೂ ನೇತುಹಾಕಿರುವ ಪವರ್ ಟಿವಿ ಚಾನೆಲ್,  ಸೆಕ್ಯುಲರ್, ಲಿಬರಲ್ ಚಾನೆಲ್ ಆಗಿರಲಿಲ್ಲ. ಕನ್ನಡದ ಉಳಿದ ಚಾನೆಲ್ ಗಿಂತ ಬಹಳ ಭಿನ್ನವಾಗಿ ಏನೂ ಇರಲಿಲ್ಲ. ಇತ್ತೀಚಿನ ಡಿ.ಜೆ.ಹಳ್ಳಿ, ಪಾದರಾಯನಪುರಕ್ಕೆ ಸಂಬಂಧಿಸಿದ ವರದಿಗಳನ್ನೇ ಗಮನಿಸಿರಬಹುದು.
ಇಂತಹ ಟಿವಿ ಚಾನೆಲ್ ಇದ್ದಕ್ಕಿದ್ದ ಹಾಗೆ ಮುಖ್ಯಮಂತ್ರಿ ಕುಟುಂಬದ ವಿರುದ್ಧ ತಿರುಗಿ ಬೀಳಲು ಏನು ಕಾರಣ? ಅದೂ ಯಡಿಯೂರಪ್ಪನವರ ಬದಲಾವಣೆಗಾಗಿ ಪಕ್ಷದೊಳಗಿಂದಲೇ ಪ್ರಯತ್ನಗಳು ನಡೆಯುತ್ತಿರುವ ಮತ್ತು ಈ ಬದಲಾವಣೆಯ ಸೂತ್ರವನ್ನು ದೆಹಲಿಯಲ್ಲಿ ಕೂತಿರುವ ಕರ್ನಾಟಕದ ನಾಯಕರೊಬ್ಬರು ಹಿಡ್ಕೊಂಡಿದ್ದಾರೆ ಎಂಬ ವರದಿಗಳು ಬರುತ್ತಿರುವ ಸಂದರ್ಭದಲ್ಲಿ.

ಮೂರನೆಯದಾಗಿ, ಪತ್ರಕರ್ತ/ರಾಜಕಾರಣಿ/ಶಿಕ್ಷಣ ತಜ್ಞರೆನಿಸಿಕೊಂಡಿರುವ ರವೀಂದ್ರ ರೇಷ್ಮೆಯವರ ಪಾತ್ರ. ಹೆಚ್ಚುಕಡಿಮೆ ಕಳೆದೊಂದು ದಶಕದಿಂದ ಬಿಜೆಪಿಯ ಜೊತೆ ಸೈದ್ಧಾಂತಿಕ ಸಹಮತವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಾ ಬಂದಿರುವವರು. ಬಿಎಸ್ ವೈ ಅವರು ಈ ಬಾರಿ ಮುಖ್ಯಮಂತ್ರಿಯಾದಾಗ ಅವರ ಸಂಭವನೀಯ ಮಾಧ್ಯಮ ಸಲಹೆಗಾರರ ಪಟ್ಟಿಯಲ್ಲಿ ಇವರ ಹೆಸರು ಕೂಡಾ ಕೇಳಿಬರುತ್ತಿತ್ತು.

ಹೀಗಿದ್ದವರು ಇದ್ದಕ್ಕಿದ್ದ ಹಾಗೆ ಬಿಎಸ್ ವೈ ಅವರ ವಿರುದ್ದದ ಭ್ರಷ್ಟಾಚಾರದ ಹೋರಾಟದಲ್ಲಿ ಕಣಕ್ಕಿಳಿಯಲು ಏನು ಕಾರಣ? ಬಿ.ಎಸ್.ಯಡಿಯೂರಪ್ಪನವರಾಗಲಿ, ಅವರ ಕುಟುಂಬವಾಗಲಿ ಕಳೆದ ಒಂದು ತಿಂಗಳಿನಿಂದ ಭ್ರಷ್ಟರಾದವರಲ್ಲವಲ್ಲ. ಶ್ರೀರಾಮುಲು ಅವರ ಭ್ರಷ್ಟತೆಯನ್ನೇ ಸಹಿಸಿಕೊಂಡು ಅವರ ಜೊತೆ ಸೇರಿಕೊಂಡಿದ್ದ ರೇಷ್ಮೆ ಅವರು ದಿಡೀರನೇ ಭ್ರಷ್ಟಾಚಾರದ ವಿರುದ್ದದ ಉಗ್ರಹೋರಾಟಕ್ಕೆ ಇಳಿದಿರುವುದು ನನಗಂತು ಅಚ್ಚರಿ ಮೂಡಿಸಿದೆ. ಪ್ರಾಮಾಣಿಕವಾಗಿ ಇಂತಹದ್ದೊಂದು ಪರಿವರ್ತನೆ ಅವರಲ್ಲಿ ಆಗಿದ್ದರೆ ಅದನ್ನು ಸ್ವಾಗತಿಸುವವರಲ್ಲಿ ನಾನು ಮೊದಲಿಗ. ಅದನ್ನು ಮನವರಿಕೆ ಮಾಡಿಕೊಡುವ ಜವಾಬ್ದಾರಿ ಅವರಲ್ಲಿದೆ.

ಮಾಧ್ಯಮ ಸಂಸ್ಥೆಗಳ ಅದರಲ್ಲೂ ಮುಖ್ಯವಾಗಿ ಕನ್ನಡ ನ್ಯೂಸ್ ಚಾನೆಲ್ ಗಳ ಮಾಲೀಕರ ಬಗ್ಗೆ ನಾನೇನು ಮಾತನಾಡುವುದಿಲ್ಲ. ದುಡ್ಡು ಹಾಕಿದವರು ಯಾರೋ? ಮಾಲೀಕರೆಂದು ಕಾಣಿಸಿಕೊಳ್ಳುವವರು ಯಾರೋ? ಅವರಲ್ಲಿ ನಷ್ಟದ ಉದ್ಯಮವಾದ ಟಿವಿ ಚಾನೆಲ್ ಗಳಲ್ಲಿ ಬಂಡವಾಳ ಹಾಕುವ ಸಾರ್ವಜನಿಕ ಹಿತಾಸಕ್ತಿ ಯಾಕೆ ಉಕ್ಕಿ ಹರಿಯುತ್ತೋ ಒಂದೂ ನನಗೆ ಗೊತ್ತಾಗುವುದಿಲ್ಲ.


ಇವೆಲ್ಲ ಏನೇ ಇದ್ದರೂ ಪತ್ರಕರ್ತನನ್ನು ಸಾಯಿಸುವುದಷ್ಟೇ ಇಲ್ಲವೇ ಅದಕ್ಕಿಂತಲೂ ಹೀನ ಕೆಲಸ ಮಾಧ್ಯಮ ಸಂಸ್ಥೆಯನ್ನು ಸಾಯಿಸುವುದು. ಈ ದೃಷ್ಟಿಯಿಂದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಕೊಲೆಗಡುಕ ಸರ್ಕಾರವೆಂದೇ ಹೇಳಬೇಕಾಗುತ್ತದೆ. ವ್ಯಕ್ತಿಯನ್ನು ಕೊಂದ ಪಾಪಕ್ಕೆ ಪರಿಹಾರ ಇಲ್ಲ, ಆದರೆ ಸಾಯಿಸಲು ಹೊರಟ ಸಂಸ್ಥೆಯನ್ನು ಬದುಕಿಸಲು ಸಾಧ್ಯ ಇದೆ. ಈಗಲೂ ಕಾಲ ಮಿಂಚಿಲ್ಲ. ಬಿ.ಎಸ್.ಯಡಿಯೂರಪ್ಪನವರು ತಮ್ಮ ತಪ್ಪನ್ನು ಅರಿತುಕೊಂಡು ಚಾನೆಲ್ ಪ್ರಸಾರಕ್ಕೆ ಅವಕಾಶ ಮಾಡಿಕೊಡಬೇಕು ಅಳಿದುಳಿದ ಮಾನವನ್ನು ಉಳಿಸಿಕೊಳ್ಳಬೇಕು.  ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ನೊಂದಿರುವ ,ಕಷ್ಟದಲ್ಲಿರುವ ಪವರ್ ಟಿವಿ ಚಾನೆಲ್ ನ ಪತ್ರಕರ್ತರೆಲ್ಲರ ಜೊತೆ ನಾನಿದ್ದೇನೆ.
ಅಂದಹಾಗೆ ಈಗಿನ ಮುಖ್ಯಮಂತ್ರಿಗಳಿಗೊಬ್ಬರು ಮಾಧ್ಯಮ ಸಲಹೆಗಾರರಿದ್ದಾರಲ್ಲಾ, ಅವರೇನು ಮಾಡುತ್ತಿದ್ದಾರೆ?

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99