ಪಿಎಂ ಕೇರ್ಸ್ ನಿಧಿಗೆ ಪ್ರಧಾನಿ ನರೇಂದ್ರ ಮೋದಿಯ ವೈಯಕ್ತಿಕ ದೇಣಿಗೆ ಎಷ್ಟು ಗೊತ್ತೇ....?


ಹೊಸದಿಲ್ಲಿ: ಕೋವಿಡ್ 19 ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಬಲ ತುಂಬುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಆರಂಭಿಸಿದ್ದ ಪಿಎಂ ಕೇರ್ಸ್‌ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆಗೆ ಒಳಗಾಗಿತ್ತು. ಆದರೆ ಈಗ ಪಿಎಂ ಕೇರ್ಸ್ ನಿಧಿಯ ಮೊದಲ ಆಡಿಟ್ ವರದಿ ಬಹಿರಂಗಗೊಂಡಿದೆ. ಕೋವಿಡ್ ಸ್ಫೋಟಗೊಂಡ ಸಂದರ್ಭದಲ್ಲಿ ಅಂದರೆ, ಕಳೆದ ಮಾರ್ಚ್ ತಿಂಗಳಿನಲ್ಲಿ ಪ್ರಾರಂಭಿಸಿದ ಈ ನಿಧಿಯ ದೇಣಿಗೆ ಮತ್ತು ವಿಲೇವಾರಿ ಈಗ ಸಾರ್ವಜನಿಕ ವರದಿ ಪಬ್ಲಿಕ್ ಡೊಮೇನ್‌ನಲ್ಲಿದೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ನಿಧಿಗೆ ಆರಂಭಿಕ ದೇಣಿಗೆ ನೀಡಿದ್ದೇ ಪ್ರಧಾನಿ ನರೇಂದ್ರ ಮೋದಿ. ಅವರು ಎಷ್ಟು ಹಣ ಕೊಟ್ಟಿದ್ದಾರೆ ಎಂಬುದು ಈಗ ಬಯಲಾಗಿದೆ.

ಮಾರ್ಚ್ 27ರಂದು ಆರಂಭಿಸಿರುವ ಪಿಎಂ ಕೇರ್ಸ್‌ ನಿಧಿಗೆ ಕೇವಲ 5 ದಿನಗಳ ಅವಧಿಯಲ್ಲಿ 3,076 ಕೋಟಿ ರೂಪಾಯಿಗಳಷ್ಟು ಹಣ ದೇಣಿಗೆಯಾಗಿ ಬಂದು ಸೇರಿತ್ತು. ಮೊದಲ ಕೊಡುಗೆಯಾಗಿ ನರೇಂದ್ರ ಮೋದಿ ವೈಯಕ್ತಿಕವಾಗಿ 2.25 ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದರು.

ಮೋದಿ ಅವರ ಈ ನಡೆಯನ್ನು ಅವರದೇ ಪಕ್ಷದ ನಾಯಕರು ಪ್ರಶಂಸಿಸಿದ್ದಾರೆ. ಇದುವರೆಗೆ ಅವರು ಸುಮಾರು 103 ಕೋಟಿ ರೂಪಾಯಿ ಹಣವನ್ನು ವಿವಿಧ ಸಾಮಾಜಿಕ ಉದ್ದೇಶಗಳಿಗಾಗಿ ಕೊಡುಗೆಯಾಗಿ ನೀಡಿದ್ದಾರೆ.

ಕುಂಭ ಮೇಳದ ಸ್ವಚ್ಛತಾ ಕಾರ್ಮಿಕರ ಕಲ್ಯಾಣ ನಿಧಿಗಾಗಿ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ 21 ಲಕ್ಷ ರೂಪಾಯಿಗಳ ಡೊನೇಶನ್ ನೀಡಿದ್ದರು.

ಆ ಬಳಿಕ, ದಕ್ಷಿಣ ಕೊರಿಯಾದಿಂದ ಸೋಲ್ ಶಾಂತಿ ಪ್ರಶಸ್ತಿಯ ಜೊತೆಗೆ ತಮಗೆ ದೊರೆತ 1.3 ಕೋಟಿ ರೂಪಾಯಿಗಳ ಮೊತ್ತವನ್ನು ಪ್ರಧಾನಿ ಮೋದಿ "ನಮಾಮಿ ಗಂಗಾ" ಯೋಜನೆ ಜಾರಿಗೆ ಮೀಸಲಿಟ್ಟ ನಿಧಿಗೆ ಕೊಡುಗೆಯಾಗಿ ಕೊಟ್ಟಿದ್ದರು.

ಅಲ್ಲದೆ, ನರೇಂದ್ರ ಮೋದಿ ತಮ್ಮ ಜೊತೆಗೆ ಇದ್ದ ಅಮೂಲ್ಯ ವಸ್ತುಗಳ ಹರಾಜಿನಲ್ಲಿ ಬಂದ ಹಣವನ್ನೂ ರಾಷ್ಟ್ರೀಯ ಗಂಗಾ ಸ್ವಚ್ಛತಾ ಯೋಜನೆಗೆ. ಇತ್ತೀಚೆಗಷ್ಟೇ ತನ್ನ ಬಳಿಯಲ್ಲಿದ್ದ ಸ್ಮರಣಿಕೆಗಳನ್ನು ಹರಾಜು ಹಾಕುವ ಮೂಲಕ 3.40 ಕೋಟಿ ರೂಪಾಯಿಗಳ ಮೊತ್ತವನ್ನು ಒಟ್ಟುಗೂಡಿಸಿ ಈ ಬೃಹತ್ ಕಾರ್ಯಕ್ಕೆ ಕೈಜೋಡಿಸಿದ್ದರು.

ಇದಕ್ಕೂ ಮುನ್ನ, 2015ರವರೆಗೆ ತಮಗೆ ಸನ್ಮಾನ, ಗೌರವವಾಗಿ ದೊರೆತಿದ್ದ ಸ್ಮರಣಿಕೆಗಳನ್ನು, ಅಮೂಲ್ಯ ವಸ್ತುಗಳನ್ನು ಹರಾಜು ಹಾಕಿ 8.35 ಕೋಟಿ ರೂಪಾಯಿಗಳನ್ನೂ ನಮಾಮಿ ಗಂಗಾ ಯೋಜನೆಗೆ ಕೊಡುಗೆಯಾಗಿ ನೀಡಿದ್ದರು.

ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಅಧಿಕಾರಾವಧಿ ಪೂರ್ಣಗೊಂಡಿದ್ದ ಸಂದರ್ಭದಲ್ಲಿ ಮೋದಿ ಅವರು ತಮ್ಮ ಸ್ವಂತ ಉಳಿಕೆ ಮೊತ್ತದ 21 ಲಕ್ಷ ರೂಪಾಯಿಗಳನ್ನು ಗುಜರಾತ್ ಸರಕಾರದ ಸಿಬ್ಬಂದಿಗಳ ಪುತ್ರಿಯರ ಶಿಕ್ಷಣದ ಉದ್ದೇಶಕ್ಕಾಗಿ ದೇಣಿಗೆ ನೀಡಿದ್ದರು.

ನರೇಂದ್ರ ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ ತಮಗೆ ಸಿಕ್ಕಿದ್ದ ಸ್ಮರಣಿಕೆಗಳನ್ನೆಲ್ಲಾ ಹರಾಜು ಹಾಕಿ ಅದರಿಂದ ಲಭಿಸಿದ 89.96 ಕೋಟಿ ರೂಪಾಯಿಗಳಷ್ಟು ಹಣವನ್ನು ದೇಣಿಗೆಯಾಗಿ ನೀಡಿದ್ದರು.

ನರೇಂದ್ರ ಮೋದಿ ಪ್ರಧಾನಿ ಆಗುವ ಮುನ್ನ ಹಾಗೂ ಪ್ರಧಾನಿ ಆದ ಮೇಲೆ ವಿವಿಧ ಸಾಮಾಜಿಕ ಕಾರ್ಯಗಳಿಗೆ ಮತ್ತು ಸಾಮಾಜಿಕ ಉದ್ದೇಶಗಳಿಗೆ ತಮ್ಮ ವೈಯಕ್ತಿಕ ದೇಣಿಗೆ ನೀಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ.