-->
ಹೊಸ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ದ್ವಿಗುಣ ಆದಾಯ: ಮೋದಿ ಹೇಳಿಕೆ ಸತ್ಯಾಂಶವೇ?- ವಿಶ್ಲೇಷಣೆ

ಹೊಸ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ದ್ವಿಗುಣ ಆದಾಯ: ಮೋದಿ ಹೇಳಿಕೆ ಸತ್ಯಾಂಶವೇ?- ವಿಶ್ಲೇಷಣೆ

Gladson Almeida

APMC ಕಾಯಿದೆಯನ್ನು ಹದಿನಾಲ್ಕು ವರುಷಗಳ ಹಿಂದೆಯೇ ತೆಗೆದು ಹಾಕಿರುವ ಬಿಹಾರದ ರೈತರ ಪರಿಸ್ಥಿತಿ ನೋಡಬೇಕು. ಸರ್ಕಾರಿ ಮಾರುಕಟ್ಟೆಗಳೂ ಇಲ್ಲ, ಖಾಸಗಿಯವರದ್ದೂ ಸುದ್ದಿ ಇಲ್ಲ. ಕೆಲ ಕಳ್ಳ ಮಧ್ಯವರ್ತಿಗಳು ಅರ್ಧ ಬೆಲೆಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಿ ಪಂಜಾಬ್, ಹರ್ಯಾಣ ಮುಂತಾದ ರಾಜ್ಯಗಳಿಗೆ ಮಾರುತ್ತಾರೆ. ಮೊನ್ನೆಯ ಲಾಕ್‍ಡೌನ್ ಸಮಯದಲ್ಲಿ ಹೆಚ್ಚಿನ ಖಾಸಗಿಯವರು ಖರೀದಿಗೆ ಇಳಿಯಲೇ ಇಲ್ಲ. APMC ಇದ್ದರೆ ಕನಿಷ್ಟ ಬೆಲೆಯಲ್ಲಾದರೂ ಖರೀದಿಸಿ, ದಾಸ್ತಾನು ಮಾಡಿರುತ್ತಿದ್ದರು. ಜಸ್ಟ್ ಇಮ್ಯಾಜಿನ್, ಈ ಲಾಕ್‍ಡೌನ್ ಸಮಯದಲ್ಲಿ ನಮ್ಮಲ್ಲಿ APMC ಮಳಿಗೆಗಳು ಇದ್ದಿಲ್ಲವೆಂದರೆ ಏನಾಗುತ್ತಿತ್ತೆಂದು. APMC ಮಳಿಗೆಗಳಲ್ಲಿ ಇದ್ದ ದಾಸ್ತಾನು ಲಾಕ್‍ಡೌನ್ ಸಮಯದಲ್ಲಿ ಜನರ ಜೀವವುಳಿಸಿದೆ. ಅವಿಲ್ಲದೆ ಖಾಸಗಿಯವರ ಕೈಯಲ್ಲಿದ್ದರೆ, ದೇಶ ಉಪವಾಸ ಬೀಳುತಿತ್ತು. 

ಅಷ್ಟಕ್ಕೂ ಸರಕಾರಕ್ಕೆ ಮಧ್ಯವರ್ತಿಗಳ ಮಾಫೀಯಾ ತೆಗೆಯಲೇಬೇಕೆಂದರೆ APMC ಕಾಯಿದೆಗೆ ಯಾಕೆ ಕತ್ತರಿ ಹಾಕಬೇಕು. ರೈತರು ತಮ್ಮ ಬೆಳೆಗಳನ್ನು ತಮ್ಮ ಮನೆಯ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾರಬೇಕಾದರೆ, ನಮ್ಮ ದೇಶಕ್ಕೆ ಸುಮಾರು 42000 ಕೃಷಿ ಮಳಿಗೆಗಳ ಅಗತ್ಯವಿದೆ. ಸದ್ಯಕ್ಕೆ ನಮ್ಮಲ್ಲಿರುವ ಸರಕಾರಿ ನಿಯಂತ್ರಿತ ಮಳಿಗೆಗಳ ಸಂಖ್ತ್ಯೆ 7000 ಕ್ಕಿಂತಾ ಕಡಿಮೆ. ಅಧ್ಯಯನ ಹಾಗೂ ಅಂಕಿ-ಅಂಶಗಳ ಪ್ರಕಾರ APMC ಹಾಗೂ ಕನಿಷ್ಟ ಬೆಂಬಲ ಬೆಲೆಯ ಲಾಭ ಸಂಪೂರ್ಣವಾಗಿ ಪಡೆಯುತ್ತಿರುವ ರೈತರ ಪ್ರಮಾಣ ಹತ್ತು ಶೇಕಡಾಕ್ಕಿಂತ ಕಡಿಮೆ (ಶಾಂತ ಕುಮಾರು ಸಮಿತಿಯ ಪ್ರಕಾರ ಕೇವಲ ಆರು ಶೇಕಡಾ ರೈತರು ಬೆಂಬಲ ಬೆಲೆಯ ಲಾಭ ಪಡೆಯುತ್ತಿದ್ದಾರೆ). ಉಳಿದ ತೊಂಬತ್ತು ಶೇಕಡಾ ರೈತರು ಈಗಲೂ ಖಾಸಗಿಯವರ ಮೇಲೆಯೇ ಅವಲಂಬಿತರಾಗಿದ್ದಾರೆ. ಹಾಗಾಗಿ APMC ಕಾಯಿದೆಯನ್ನು ಇದ್ದ ಹಾಗೆಯೇ ಇಟ್ಟು, ಬೆಂಬಲ ಬೆಲೆಗಳನ್ನೇರಿಸಿ, ಯಾಕೆ APMC ಮಳಿಗೆಗಳು ಇಲ್ಲದ ಪ್ರದೇಶದಲ್ಲಿ ಖಾಸಗಿ ಮಳಿಗೆಗಳನ್ನು ಸ್ಥಾಪಿಸಬಾರದು? APMC ಯೊಳಗೆ ಖಾಸಗಿಯವರನ್ನು ಬಿಟ್ಟುಕೊಡುವ ಬದಲು, APMC ಗಳು ಇಲ್ಲದ ಪ್ರದೇಶದಲ್ಲಿ ಖಾಸಗಿ ಮಳಿಗೆಗಳನ್ನು ಸ್ಥಾಪಿಸಿ, ಮಧ್ಯವರ್ತಿಗಳ ಮಾಫೀಯಾವನ್ನು ಬುಡಮೇಲು ಮಾಡಲು ಸಾಧ್ಯವಿಲ್ಲವೇ?

ಈಗಾಗಲೇ ಹೇಳಿದ ಹಾಗೆ 90% ಕ್ಕಿಂತ ಹೆಚ್ಚಿನ ರೈತರಿಗೆ ಸದ್ಯಕ್ಕೆ APMC ಹಾಗೂ MSP ಲಾಭ ಸಿಗುತ್ತಿಲ್ಲ. ಇನ್ನೊಂದು ಮಾತಿನಲ್ಲಿ ಈ ರೈತರು ಈಗಲೂ ಖಾಸಗಿಯವರನ್ನೇ ನೆಚ್ಚಿಕೊಂಡಿದ್ದಾರೆ. ಹಾಗಿದ್ದ ಮೇಲೂ ರೈತರ ಆತ್ಮಹತ್ಯೆ ಪ್ರಕರಣಗಳು ವರ್ಷಂಪ್ರತೀ ಯಾಕೆ ಜಾಸ್ತಿಯಾಗುತ್ತಿವೆ? ಇಷ್ಟೊಂದು ದೊಡ್ಡ ಪ್ರಮಾಣದ ರೈತರು ಖಾಸಗಿ ಮಾರುಕಟ್ಟೆ, ವರ್ತಕರು, ಕಾರ್ಪರೇಟ್ ಕುಳಗಳನ್ನು ನೆಚ್ಚಿಕೊಂಡಿರುವಾಗಲೂ ಅವರ ಆರ್ಥಿಕ ಪರಿಸ್ಥಿತಿ ಇನ್ನೂ ಯಾಕೆ ಸುಧಾರಿಸಿಲ್ಲ? ಆರ್ಥಿಕ ಸಮೀಕ್ಷೆ, National Sample Survey Office (NSSO) ಮುಂತಾದ ಸಮೀಕ್ಷೆಗಳ ಪ್ರಕಾರ ದೇಶದ 17 ರಾಜ್ಯಗಳಲ್ಲಿ ಕೃಷಿ ಕುಟುಂಬಗಳ (ದೇಶದ ಐವತ್ತು ಶೇಕಡಾ ಜನಸಂಖ್ಯೆಗಿಂತಾ ಹೆಚ್ಚು) ವಾರ್ಷಿಕ ವರಮಾನ Rs 70,000 ಗಿಂತಾ ಕಡಿಮೆ. ಖಾಸಗಿಯವರನ್ನೇ ನೆಚ್ಚಿಕೊಂಡಿರುವ ದೇಶದ ತೊಂಬತ್ತು ಶೇಕಡಾ ರೈತರಿಗೆ ಅದ್ಯಾಕೆ ಇದುವರೆಗೂ ಅವರ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ.

ಹೌದು ಸದ್ಯಕ್ಕೆ ಸರಕಾರ ಕೊಡುತ್ತಿರುವ ಬೆಂಬಲ ಬೆಲೆ ಹೆಚ್ಚಿನ ಉತ್ಪನ್ನಗಳ ಉತ್ಪಾದನಾ ಖರ್ಚನ್ನೂ ತಂದುಕೊಡುತ್ತಿಲ್ಲ. ಆದರೂ ಇವತ್ತಿನ ಪರಿಸ್ಥಿತಿಯಲ್ಲಿ ರೈತರಿಗೆ ತಮ್ಮ ಬೆಳೆಗೆ ತಕ್ಕಮಟ್ಟಿಗೆ ಬೆಲೆ ಹಾಗೂ ಮಾರುಕಟ್ಟೆಯನ್ನು ಒದಗಿಸಿಕೊಡುತ್ತಿರುವುದು MSP ಹಾಗೂ APMC. ಹಾಗಾಗಿ ಈ ಸರಪಣಿಯನ್ನು ಮುರಿಯುವ ಪ್ರಯತ್ನ ರೈತಾಪಿ ವರ್ಗದವರ ಬಾಳನ್ನೇ ಕಿತ್ತುಕೊಳ್ಳಬಲ್ಲದು. APMC ಯ ದಲ್ಲಾಳಿಗಳ ಮಾಫೀಯಾವನ್ನು ನಿರ್ಮೂಲನೆಗೊಳಿಸಲು, ರೈತರು APMC ಗೆ ಹೋಗದಂತೆ ಮಾಡುವುದು ದಾರಿಯಲ್ಲ. APMC ಮಳಿಗೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಬೇಕಾದರೆ APMC ಇಲ್ಲದೆಡೆ ಖಾಸಗಿ ಮಳಿಗೆಗಳನ್ನು ಸ್ಥಾಪಿಸಿ, APMC ಮಳಿಗೆಗಳ ದಲ್ಲಾಳಿ ಮಾಫೀಯಾವನ್ನು ಭಂಗಮಾಡಿ. ಅದನ್ನು ಬಿಟ್ಟೂ APMC ಗಳನ್ನೇ ನಿರ್ಮೂಲನೆ ಮಾಡಿ, ರೈತರನ್ನು ಸಂಪೂರ್ಣವಾಗಿ ಖಾಸಗಿಯವರ ಕೈಗೆ ಕೊಡುವುದು, ಪರಿಹಾರಕ್ಕಿಂತಾ ದೊಡ್ಡ ಸಮಸ್ಯೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99