29 ಮೀನುಗಾರರಿದ್ದ ಬೋಟ್ ಮಲ್ಪೆಯಲ್ಲಿ ನೋಡನೋಡುತ್ತಿದ್ದಂತೆ ಮುಳುಗಡೆ; ಒಂದು ಕೋಟಿಗೂ ಅಧಿಕ ನಷ್ಟ (Video )
(ಗಲ್ಫ್ ಕನ್ನಡಿಗ)ಉಡುಪಿ; 29 ಮೀನುಗಾರರನ್ನು ಹೊತ್ತೊಯ್ದು ಮೀನುಗಾರಿಕೆಗೆ ತೆರಳಿದ ಪರ್ಸಿನ್ ಬೋಟ್ ಅವಘಡಕ್ಕೀಡಾಗಿ ಮುಳುಗಿದ ಘಟನೆ ಉಡುಪಿಯ ಮಲ್ಪೆ ಕಡಲತೀರದಲ್ಲಿ ನಡೆದಿದೆ.

(ಗಲ್ಫ್ ಕನ್ನಡಿಗ)ಬೋಟ್ ನಲ್ಲಿದ್ದ 29 ಮೀನುಗಾರರನ್ನು ರಕ್ಷಿಸಲಾಗಿದ್ದು ಕೋಟ್ಯಾಂತರ ರೂ ನಷ್ಟ ಉಂಟಾಗಿದೆ.

(ಗಲ್ಫ್ ಕನ್ನಡಿಗ) ಉಡುಪಿಯ ಮಲ್ಪೆಯ ಶ್ರೀಕಾಂತ ಪುತ್ರನ್ ಎಂಬುವರಿಗೆ ಸೇರಿದ ಹನುಮಂತ ತೀರ್ಥ ಹೆಸರಿನ ಬೋಟ್‌ನಲ್ಲಿ 29 ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಮಲ್ಪೆ ಬಂದರಿನಿಂದ ಒಂದು ದಿನದ  ಮೀನುಗಾರಿಕೆಗೆ ಅರಬ್ಬೀ ಸಮುದ್ರಕ್ಕೆ ತೆರಳಿದ್ದ ವೇಳೆ ಹವಾಮಾನ ವೈಪರೀತ್ಯಗಳಿಂದ ಮೀನುಗಾರಿಕೆ ನಡೆಸಲಾಗದೇ  ಮೀನುಗಾರರು ಮಲ್ಪೆಗೆ ಹಿಂದಿರುಗುತ್ತಿದ್ದಾಗ ತಾಂತ್ರಿಕ ಸಮಸ್ಯೆಯಿಂದ ಸೈಂಟ್ ಮೇರಿಸ್ ದ್ವೀಪ ದ ಬಳಿ ಸ್ಟೇರಿಂಗ್ ತುಂಡಾಗಿದೆ. ನಿಯಂತ್ರಣ ತಪ್ಪಿ ಮುಳುಗುವ ಹಂತಕ್ಕೆ ತಲುಪಿದಾಗ ಕೂಡಲೇ ಬೋಟ್‌ನಲ್ಲಿ ಇದ್ದ ಮೀನುಗಾರರು ಕರಾವಳಿ ಕಾವಲು ಪಡೆಯವರಿಗೆ ಮಾಹಿತಿ ನೀಡಿದ್ದು, ನಂತರ ನಾಡದೋಣಿಯಲ್ಲಿ ತೆರಳಿದ್ದ ಮೀನುಗಾರರು ಬೋಟ್‌ನಲ್ಲಿ ಇದ್ದ 29 ಮಂದಿಯನ್ನು ರಕ್ಷಣೆ ಮಾಡಿದ್ದಾರೆ.ಇದಾದ ಬಳಿಕ ಬೋಟ್ ಸಂಪೂರ್ಣ ಮುಳುಗಡೆಯಾಗಿದೆ.ಪರ್ಶಿನ್ ಬೋಟ್, ಬೋಟ್ ನಲ್ಲಿ ಇದ್ದ ಡೀಸೆಲ್‌, ಎರಡು ಸೆಟ್ ಬಲೆ ಸೇರಿ ಒಟ್ಟು  ಒಂದು ಕೋಟಿ ಇಪತ್ತು ಲಕ್ಷ ರೂ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

(ಗಲ್ಫ್ ಕನ್ನಡಿಗ)