ಗಣೇಶೋತ್ಸವಕ್ಕೆ ಉಚಿತ ತೆನೆ ವಿತರಣೆ: ಸೌಹಾರ್ದ ಮೆರೆದ ಕರಾವಳಿಯ ಕ್ರೈಸ್ತ ಕೃಷಿಕ
ಮಂಗಳೂರು: ಹಿಂದುಗಳ ಜನಪ್ರಿಯ ಹಬ್ಬ ಗಣೇಶೋತ್ಸವಕ್ಕೂ ತೆನೆಗೂ ಅವಿನಾಭಾವ ಸಂಬಂಧ. ಕೃಷಿ ಸಂಸ್ಕೃತಿಯ ಪೂಜೆಯೇ ಆಗಿರುವ ಈ ಉತ್ಸವಕ್ಕೆ ತೆನೆ ಇಲ್ಲದಿದ್ದರೆ ಗಣೇಶೋತ್ಸವ ಅಪೂರ್ಣ. ಕರಾವಳಿಯಲ್ಲಿ ಅಪರೂಪವಾಗಿರುವ ತೆನೆಯನ್ನು ಈ ಹಬ್ಬದಲ್ಲಿ ಉಚಿತವಾಗಿ ವಿತರಿಸುವ ಮೂಲಕ ಏಳಿಂಜೆಯ ಹಿರಿಯ ಕೃಷಿಕ ಜೋಸೆಫ್ ಡಾಲ್ಫಿ ಡಿಸೋಜ ಮಾದರಿಯಾಗಿದ್ದಾರೆ.
ಕಿನ್ನಿಗೋಳಿ ಸಮೀಪದ ಏಳಿಂಜೆ ಯ ಹಿರಿಯ ಕೃಷಿಕ ಜೋಸೆಫ್ ಡಾಲ್ಫಿ ಡಿಸೋಜ ರವರು ತಮ್ಮ ಸಮುದಾಯದ ತೆನೆಹಬ್ಬದ ಹಬ್ಬದ ಆಚರಣೆ ಜೊತೆಗೆ ಹಿಂದುಗಳ ಹಬ್ಬ ವಾಗಿರುವ ಗಣೇಶ ಚತುರ್ಥಿಗೆ ತೆನೆಯನ್ನು ವಿತರಿಸಿ ಮಾದರಿಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಏಳಿಂಜೆಯಲ್ಲಿ ಸಾವಯವ ಕೃಷಿ ಮಾಡುತ್ತಿರುವ ಕೃಷಿಕ ಜೋಸೆಫ್ ಡಾಲ್ಫಿ ಡಿಸೋಜ ತೆನೆ ಹಬ್ಬಕ್ಕೆಂದೇ ವಿಶೇಷವಾಗಿ ಸಾವಯವ ಕೃಷಿ ಮಾಡುತ್ತಾ ಬಂದಿದ್ದಾರೆ.
ಈ ಬಾರಿ ಗಣೇಶ ಚತುರ್ಥಿ ಹಾಗೂ ಕೃಷ್ಣ ಜನ್ಮಾಷ್ಟಮಿ ಹಬ್ಬಗಳು ಬೇಗ ಬಂದಿರುವ ಕಾರಣ ಎಲ್ಲೆಡೆ ತೆನೆಯ ಫಸಲು ವಿರಳವಾಗಿದೆ.ಆದರೆ ಕೃಷಿಕ ಜೋಸೆಫ್ ಡಾಲ್ಫಿ ಡಿಸೋಜ ಈ ಬಾರಿ ಬೇಗ ಕೃಷಿ ಶುರು ಮಾಡಿದ್ದು ಉತ್ತಮ ಫಸಲು ಪಡೆದಿದ್ದಾರೆ. ಫಸಲಿಗೆ ನವಿಲಿನ ಕಾಟ ಇರುವುದರಿಂದ ರಕ್ಷಣೆಗಾಗಿ ತಡೆಬೇಲಿ ಕೂಡ ಹಾಕಿದ್ದಾರೆ. ಗಣೇಶ ಚತುರ್ಥಿಯ ದಿವಸ ಹಿಂದೂ ಬಾಂಧವರ ದೇವಸ್ಥಾನ ದೈವಸ್ಥಾನ ಹಾಗೂ ಮನೆಗಳಿಗೆ ಉಚಿತ ತೆನೆ ವಿತರಿಸುತ್ತಿರುವ ಕೃಷಿಕ ಜೋಸೆಫ್ ಡಾಲ್ಫಿ ಡಿಸೋಜ ತಮ್ಮ ಬಾಂಧವರ ಚರ್ಚುಗಳಲ್ಲಿ ನಡೆಯುತ್ತಿರುವ ತೆನೆ ಹಬ್ಬಕ್ಕೂ ಉಚಿತವಾಗಿ ತೆನೆ ಪೂರೈಕೆ ಮಾಡಿ ಮಾದರಿಯಾಗಿದ್ದಾರೆ.
ಜಾತಿ ಮತ ಧರ್ಮಕ್ಕಾಗಿ ಹೊಡೆದಾಡುವ ಈ ಕಾಲದಲ್ಲಿ ಜಾತ್ಯಾತೀತ ಮನೋಭಾವನೆಯಿಂದ ತೆನೆಹಬ್ಬಕ್ಕಾಗಿ ಪೈರನ್ನು ಬೆಳೆಸಿ ಎಲ್ಲಾ ಧರ್ಮದವರಿಗೂ ತೆನೆ ಪೈರನ್ನು ಉಚಿತವಾಗಿ ಪೂರೈಸುವ ಮುಖಾಂತರ ಧಾರ್ಮಿಕ ಸಾಮರಸ್ಯವನ್ನು ಕಾಪಾಡುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿರುವ ಕಿನ್ನಿಗೋಳಿ ಸಮೀಪದ ಏಳಿಂಜೆ ಯ ಹಿರಿಯ ಕೃಷಿಕ ಜೋಸೆಫ್ ಡಾಲ್ಫಿ ಡಿಸೋಜ ರವರ ಕಾರ್ಯ ನಿಜವಾಗಿಯೂ ಶ್ಲಾಘನೀಯವಾಗಿದೆ.