-->

ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆ ಈಡೇರಿಸಿದ್ದೇವೆ - ಶಾಸಕ ಕಾಮತ್

ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆ ಈಡೇರಿಸಿದ್ದೇವೆ - ಶಾಸಕ ಕಾಮತ್



ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಹಲವಾರು ಭರವಸೆಗಳನ್ನು ಪ್ರಥಮ ಹಂತದಲ್ಲೇ ಈಡೇರಿಸಿದ್ದೇವೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಹೇಳಿರುವ ಅನೇಕ ಅಂಶಗಳನ್ನೊಳಗೊಂಡಂತೆ ಜನರ ಬಹು ಕಾಲದ ಬೇಡಿಕೆಯನ್ನು ಭಾರತೀಯ ಜನತಾ ಪಕ್ಷದ ನೇತೃತ್ವದ ಆಡಳಿತದಲ್ಲಿ ಸಾಕಾರಗೊಳಿಸಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮಂಗಳೂರಿನ ಅಭಿವೃದ್ಧಿಗೆ ಪೂರಕವಾಗಿ ಟಿ.ಡಿ.ಆರ್ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಟಿ.ಡಿ.ಆರ್ ಸೆಲ್ ತೆರೆಯುವ ಕುರಿತು ಭರವಸೆ ನೀಡಿದ್ದೆವು. ಆ ಪ್ರಕಾರ ಅಭಿವೃದ್ಧಿ ಕಾಮಗಾರಿ ಸಂಬಂಧಿಸಿ ಖಾಸಗಿ ಜಮೀನಿನ ಅಗತ್ಯತೆ ಇರುವುದರಿಂದ, ಭೂಸ್ವಾಧೀನಪಡಿಸಲು ವೇಗ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಟಿ.ಡಿ.ಆರ್ ಸೆಲ್ ತೆರೆಯಲು ನಿರ್ಧರಿಸಲಾಗಿದೆ ಎಂದು ಶಾಸಕ‌ ಕಾಮತ್ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಉಪಕರವನ್ನು ಹಾಗೂ ಉದ್ದಿಮೆಗಳ ಮೇಲೆ ವಿಧಿಸಿರುವ ಘನತ್ಯಾಜ್ಯ ವಿಲೇವಾರಿ ಸೇವಾಶುಲ್ಕವನ್ನು ಪರಿಷ್ಕರಿಸುವ ಮೂಲಕ ಜನರಿಗೆ ಚುನಾವಣೆಯ ವೇಳೆ ನೀಡಿದ್ದ ಭರವಸೆಯನ್ನು ಬಿಜೆಪಿ ನೇತೃತ್ವದ ಪಾಲಿಕೆ ಆಡಳಿತ ಉಳಿಸಿಕೊಂಡಿದೆ ಎಂದು ಶಾಸಕ‌ ಕಾಮತ್ ತಿಳಿಸಿದ್ದಾರೆ.

ಬಿಜೆಪಿ ಪಕ್ಷವು ಆಡಳಿತ ವ್ಯವಸ್ಥೆಯನ್ನು ಪಾರದರ್ಶಕವಾಗಿಡಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡುಗಳಲ್ಲಿಯೂ ವಾರ್ಡ್ ಸಮಿತಿ ರಚಿಸಲು ನಿರ್ಣಯ ಕೈಗೊಳ್ಳಲಾಗಿದೆ. ಮಂಗಳೂರಿನ ಜನತೆಯ ಬಹುಕಾಲದ ಬೇಡಿಕೆಯಾಗಿರುವ ವಾರ್ಡ್ ಸಮಿತಿ ರಚನೆಯ ಬೇಡಿಕೆಯನ್ನು ನಮ್ಮ ಅವಧಿಯಲ್ಲಿ  ಅನುಮತಿ ನೀಡುವ‌ ಕುರಿತು ನಾವು ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಪಾಲಿಕೆ ಪರಿಷತ್ ಸಭೆಯಲ್ಲಿ ಅನುಮೋದಿಸಲಾಗಿದೆ. ಹಾಗೂ ನಮ್ಮ ಪಕ್ಷ ಭ್ರಷ್ಟಾಚಾರ ರಹಿತವಾದ ಆಡಳಿತ ನೀಡಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿನ ಕೊಳಚೆ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಸರ್ವರಿಗೂ ಸೂರು ಯೋಜನೆಯಡಿ ಕಣ್ಣೂರು ಗ್ರಾಮದಲ್ಲಿ ಜಿ+3 ಮಾದರಿಯ 500 ಮನೆಗಳ ನಿರ್ಮಾಣ ಯೋಜನೆಗೆ ನಗರ ಸ್ಥಳೀಯ ಪಾಲಿನ ಶೆ.10 ಅನುದಾನ ಒದಗಿಸಲು ಅನುಮೋದನೆ ನೀಡಲಾಗಿದೆ. 6 ಗುಂಪುಗಳ ಜಿ+3 ಮಾದರಿಯ 21 ಬ್ಲಾಕ್ ಗಳನ್ನೊಳಗೊಂಡ‌ ಲೇಔಟ್ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ಪಾಲಿಕೆ ವ್ಯಾಪ್ತಿಯಲ್ಲಿ  ನೀರಿನ ದರ ಕಡಿಮೆಗೊಳಿಸಿ ಜನತೆಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದೆವೆ. ಗೃಹೇತರ, ವಾಣಿಜ್ಯ, ಕಟ್ಟಡ ರಚನೆ, ಸಗಟು ಪೂರೈಕೆ, ಬೃಹತ್ ಕೈಗಾರಿಕೆ ಹಾಗೂ ಗೃಹ ಬಳಕೆ ನೀರಿನ ದರವನ್ನು ಪರಿಷ್ಕರಿಸಲಾಗಿದೆ. ಆ ಮೂಲಕ ಮಂಗಳೂರಿನ ಜನತೆಗೆ ನಾವು ನೀಡಿದ್ದ ಭರವಸೆಯನ್ನು ನಮ್ಮ ಆಡಳಿತದ ಪ್ರಥಮ ಹಂತದಲ್ಲೇ ಈಡೇರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಪದವು ಗ್ರಾಮದಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ ಮಂಜೂರಾತಿ ಪಡೆದಿರುವ ಜಿ+3 ಮಾದರಿಯ ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಜಮೀನು ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದ ಕಾರಣ ಉಂಟಾಗಿದ್ದ ತೊಡಕನ್ನು ನಿವಾರಿಸಲಾಗಿದೆ. ಅರಣ್ಯ ಇಲಾಖೆಗೆ ಪ್ರತ್ಯೇಕ ಜಮೀನು ನೀಡಲಾಗಿದ್ದು, ಈ ಹಿಂದೆ ಗುರುತಿಸಿದ ಸ್ಥಳದಲ್ಲೇ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯದೆಲ್ಲೆಡೆ ಕೊರೋನ ಸಾಂಕ್ರಾಮಿಕ ರೋಗವು ತೀವ್ರ ರೀತಿಯಲ್ಲಿ ಹರಡುತ್ತಿರುವುದರಿಂದ ಪಾಲಿಕೆ ವ್ಯಾಪ್ತಿಯ ಬೋಳೂರು ಸ್ಮಶಾನದಲ್ಲಿರುವ‌ ವಿದ್ಯುತ್ ಚಿತಾಗಾರದ‌ ಸಮೀಪವೇ 65 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ಚಾಲಿತ ಚಿತಾಗಾರ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಶಾಸಕ‌ ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99