ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ನಿರ್ಣಾಯಕ ದಿನ: ಯಾರಾಗ್ತಾರೆ ಕೈ ವರಿಷ್ಠ
ನವದೆಹಲಿ: ಕಾಂಗ್ರೆಸ್ ನಾಯಕತ್ವದ ಬದಲಾವಣೆ ಬಗ್ಗೆ ಭಾರೀ ಚರ್ಚೆ ಆಗುತ್ತಿರುವ ಹೊತ್ತಲ್ಲೇ ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಂದಿನ ಅವಧಿಗೆ ಪಕ್ಷದ ಅಧ್ಯಕ್ಷರ ಆಯ್ಕೆಗೆ ಸರ್ವಾನುಮತದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದೇ ವೇಳೆ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನವೇ ಹೊಸ ಅಧ್ಯಕ್ಷರನ್ನು ಐಕ್ಯತೆಯಿಂದ ಒಮ್ಮತದ ಮೂಲಕ ಆಯ್ಕೆ ಮಾಡಿ ಎಂದು ನಿರ್ಗಮಿತ ಅಧ್ಯಕ್ಷೆ ಸೋನಿಯಾ ಮನವಿ ಮಾಡಿದ್ದಾರೆ.
ದಶಕದ ಬಳಿಕ ಇದೇ ಮೊದಲ ಗಾಂಧಿ ಕುಟುಂಬದ ಹೊರತುಪಡಿಸಿದ ನಾಯಕರನ್ನು ಆಯ್ಕೆ ಮಾಡಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕರೆ ನೀಡಿದ್ದು, ಈ ನಿರ್ಧಾರಕ್ಕೆ ತಾವು ಬದ್ಧ ಎಂದು ಅವರು ಘೋಷಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದೆ. ಪಕ್ಷವನ್ನು ಪುನಶ್ಚೇತನಗೊಳಿಸಬೇಕೆಂದು ಹಲವು ಹಿರಿಯ ನಾಯಕರು ಸೋನಿಯಾ ಗಾಂಧಿಯವರಿಗೆ 5 ಅಂಶಗಳ ಅಜೆಂಡಾವನ್ನು ಮುಂದಿಟ್ಟುಕೊಂಡು ಪತ್ರ ಬರೆದಿದ್ದು, ಆ ಪತ್ರಕ್ಕೆ 20 ಮಂದಿ ಸಹಿ ಹಾಕಿದ್ದಾರೆ. ಲೋಕಸಭೆ ಚುನಾವಣಾ ಸೋಲಿನ ಬಳಿಕ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ರಾಹುಲ್ ಅಧ್ಯಕ್ಷರಾಗ್ತಾರಾ ಅಥವಾ ಪ್ರಿಯಾಂಕಾ ಗಾಂಧಿ ಬರ್ತಾರಾ ಅಥವಾ ಸೋನಿಯಾ ಕುಟುಂಬಸ್ಥರನ್ನು ಹೊರತು ಪಡಿಸಿದ ನಾಯಕರಿಗೆ ಸಾರಥ್ಯ ಸಿಗುತ್ತಾ ಎಂಬ ಕುತೂಹಲ ಮೂಡಿದೆ.
ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನ ಪಕ್ಷದಲ್ಲಿ ನಾಯಕತ್ವ ವಿಚಾರವಾಗಿ ಆಂತರಿಕ ಭಿನ್ನಮತ ಎದ್ದಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಸಂಸದರು ಮತ್ತು ಮಾಜಿ ಸಚಿವರ ಒಂದು ಬಣ ಸಾಮೂಹಿಕ ನಾಯಕತ್ವಕ್ಕೆ ಒತ್ತಾಯಿಸುತ್ತಿದ್ದರೆ, ಮತ್ತೊಂದು ಗುಂಪು ರಾಹುಲ್ ಗಾಂಧಿಯವರು ಮತ್ತೆ ಪಕ್ಷದ ಅಧ್ಯಕ್ಷರಾಗಬೇಕೆಂದು ಒತ್ತಾಯಿಸುತ್ತಿದೆ ಎನ್ನಲಾಗುತ್ತಿದೆ.
ಇನ್ನೊಂದೆಡೆ, ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬಯೇತರು ಅಧ್ಯಕ್ಷರಾಗಬೇಕು ಎಂದು ಪ್ರಿಯಾಂಕ ಗಾಂಧಿ ಅವರು ಹೇಳಿದ್ದು, ಆ ಮೂಲಕ ಕಾಂಗ್ರೆಸ್ ನಾಯಕರ ಮಧ್ಯೆ ಅಧ್ಯಕ್ಷರು ಯಾರಾಗಬೇಕು ಎಂಬುದರ ಬಗ್ಗೆ ಗೊಂದಲ ಹೆಚ್ಚಿದೆ. ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ತಿರುವನಂತಪುರದದ ಸಂಸದ ಶಶಿ ತರೂರ್ ಪರ ಪ್ರಿಯಾಂಕಾ ಗಾಂಧಿ ಒಲವು ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರುಗಳೂ ಈ ಗಾದಿಗೆ ತೇಲಿಬಂದಿದೆ. ಈ ಮಧ್ಯೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮನೀಶ್ ತಿವಾರಿ ಸೇರಿದಂತೆ ಕೆಲ ನಾಯಕರು ಆಂತರಿಕವಾಗಿ ಪಕ್ಷದಲ್ಲಿ ಚುನಾವಣೆ ನಡೆಸಿ ಅಧ್ಯಕ್ಷರ ಆಯ್ಕೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.