-->

"ಪ್ರತಿಭೆಗಳ ಆಗರ" ಮೂಡುಬಿದಿರೆಯ ನ್ಯಾಯವಾದಿ ಶ್ವೇತ ಜೈನ್ - ✍️ಸುಜಾತ ಗಜೇಂದ್ರ ಜೈನ್ ಸಾಗರ

"ಪ್ರತಿಭೆಗಳ ಆಗರ" ಮೂಡುಬಿದಿರೆಯ ನ್ಯಾಯವಾದಿ ಶ್ವೇತ ಜೈನ್ - ✍️ಸುಜಾತ ಗಜೇಂದ್ರ ಜೈನ್ ಸಾಗರ

  ✍️ಸುಜಾತ ಗಜೇಂದ್ರ ಜೈನ್ ಸಾಗರ

(ಗಲ್ಪ್ ಕನ್ನಡಿಗ)
ಬೆಂಕಿಯಿಂದ ಸುಟ್ಟುಹೋದರೂ ನಂತರ ತನ್ನದೇ ಬೂದಿಯಿಂದ ಮತ್ತೆ ಹುಟ್ಟಿಬಂದ "ಫೀನಿಕ್ಸ್ ಎಂಬ ಕಾಲ್ಪನಿಕ ಪಕ್ಷಿಯ ಬಗ್ಗೆ ಕೇಳಿದ್ದೇವೆ. ಧರಾಶಾಹಿಯಾದ ಬದುಕನ್ನು ಮತ್ತೆ ಊಹೆಗೂ ನಿಲುಕದ ರೀತಿಯಲ್ಲಿ ಅತೀ ಸುಂದರವಾಗಿ ಕಟ್ಟಿಕೊಂಡು ಸಾಧನೆಯ ಶಿಖರವನ್ನು ಏರುವ ವರಿಗೆ ಈ ಕಾಲ್ಪನಿಕ ಪಕ್ಷಿಯನ್ನು ಉದಾಹರಣೆಯಾಗಿ ಮಾತ್ರ ನಾವು ಬಳಸಿಕೊಳ್ಳಲು ಸಾಧ್ಯ.

 

(ಗಲ್ಪ್ ಕನ್ನಡಿಗ) ಇಂತಹದೊಂದು ಉದಾಹರಣೆ ನಮ್ಮ-ನಿಮ್ಮೆಲ್ಲರ ಮುಂದೆಯೇ ಇದೆ. ಅವರೇ ನ್ಯಾಯವಾದಿ ಶ್ವೇತ ಜೈನ್. ಸುಂದರವಾದ ಬಾಳನೌಕೆ ಸಾಗುವ ಹಾದಿಯಲ್ಲಿ ಅವಘಡ ಸಂಭವಿಸಿದರೆ ಅದನ್ನು ವಿಧಿಲಿಖಿತ ಎನ್ನುತ್ತೇವೆ. ಅಸಾಧಾರಣವಾದ ಮನೋಸ್ಥೈರ್ಯದ ಮೂಲಕ ಕ್ರೂರ ವಿಧಿಯ ಲೇಖನಿಯನ್ನೇ ಮೆಟ್ಟಿನಿಂತು ಸಾಧನೆಯ ಶಿಖರದೆಡೆಗೆ ಸಾಗುತ್ತಿರುವ ಶ್ವೇತ ಜೈನ್ ಅವರನ್ನು ಕೇವಲ "ಬಹುಮುಖ ಪ್ರತಿಭೆ" ಎಂದು ಕರೆದರೆ ಚಿಕ್ಕದಾದೀತು. ಅವರನ್ನು "ಪ್ರತಿಭೆಗಳ ಆಗರ" ಎಂದರೆ ಖಂಡಿತ ತಪ್ಪಾಗಲಾರದು. ತಮ್ಮ ಸರ್ವತೋಮುಖ ಪ್ರತಿಭೆ ಮತ್ತು ಚಟುವಟಿಕೆಗಳನ್ನು ಇಂದು ಅನನ್ಯವಾಗಿ ನಿರಂತರ ಬಳಸಿಕೊಳ್ಳುವ ಮೂಲಕ ಸಮಾಜದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಶ್ವೇತ ಜೈನ್ ಸಮಸ್ತ ಸ್ತ್ರೀ ಕುಲಕ್ಕೆ ಮಾದರಿಯಾಗಿ ನಿಲ್ಲುವಂತಹ ಸಾಮರ್ಥ್ಯವನ್ನು ಹೊಂದಿರುವುದು ಜೈನಕಾಶಿ ಮೂಡುಬಿದಿರೆಗೆ ಒಂದು ಹೆಮ್ಮೆಯ ಸಂಗತಿ.

 ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ 

 

(ಗಲ್ಪ್ ಕನ್ನಡಿಗ) ಇವರ ಬಾಲ್ಯದ ಕೆಲವು ಸನ್ನಿವೇಶಗಳೇ ತುಂಬಾ ಸುಂದರ. ಆ ನೆನಪುಗಳನ್ನೇ ಕಂಗೆಟ್ಟು ಸುಟ್ಟು ಬೂದಿಯಾಗಬೇಕಾಗಿದ್ದ ಬದುಕಿನಲ್ಲಿ ಸಮರ್ಥವಾಗಿ ಮತ್ತು ಅಷ್ಟೇ ಸುಂದರವಾಗಿ ಬಳಸಿಕೊಂಡು ಗಟ್ಟಿಯಾಗಿ ನೆಲೆನಿಲ್ಲಲು ಇವರು ಸಾಗಿದ ಹಾದಿ ಬಲು ರೋಚಕ.

 

 

 

(ಗಲ್ಪ್ ಕನ್ನಡಿಗ) ಮೂಡುಬಿದಿರೆಯಿಂದ ಕೆಲವೇ ಕಿ. ಮೀ. ದೂರದಲ್ಲಿರುವ ತೆಂಕ ಎಡಪದವು ಗ್ರಾಮ ಇವರ ಹುಟ್ಟೂರು. ಇಲ್ಲಿನ ಕೃಷಿಕ ಕುಟುಂಬದ ಮಡಪ್ಪಾಡಿ ರಘುಚಂದ್ರ ಚೌಟ ಮತ್ತು ವಸಂತ ಕುಮಾರಿ ದಂಪತಿಗಳ ಪುತ್ರಿಯಾಗಿ ಜನಿಸಿದ ಶ್ವೇತ ಅವರು ಬಾಲ್ಯದಿಂದಲೇ ಎಲ್ಲರಿಗೂ ಅಚ್ಚುಮೆಚ್ಚು. ೪ ವರ್ಷದ ಬಾಲಕಿಯಾಗಿದ್ದಾಗ ತಮ್ಮ ಮುದ್ದಾದ ತೊದಲು ಧ್ವನಿಯನ್ನು ಸರಾಗವಾಗಿ ಬಳಸಿಕೊಂಡು ಸುಂದರವಾದ ಹಾಡೊಂದನ್ನು ಹಾಡಿ ಪ್ರಥಮ ಬಹುಮಾನವಾಗಿ ಪೌಡರ್ ಡಬ್ಬ ಮತ್ತು ಕಾಡಿಗೆ ಡಬ್ಬವನ್ನು ಹೊತ್ತು ತಂದ ಬಾಲಕಿ ಶ್ವೇತಾರನ್ನು ಮನೆ ಮಂದಿಯೆಲ್ಲಾ ಎತ್ತಿ ಮುದ್ದಾಡಿದ್ದನ್ನು ತಮ್ಮ ನೆನಪಿನ ಸುಳಿಯಿಂದ ಬಿಚ್ಚಿಡುವ ಶ್ವೇತ ಜೈನ್ ಮುಂದೆ ೫ನೇ ತರಗತಿಯಲ್ಲಿದ್ದಾಗ ಕೃಷ್ಣ-ಸುಧಾಮ ನಾಟಕದಲ್ಲಿ ಸುಧಾಮನ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ ನೆನಪನ್ನು ಗರಿಗರಿಯಾಗಿ ಉಳಿಸಿಕೊಂಡಿದ್ದಾರೆ.

 

(ಗಲ್ಪ್ ಕನ್ನಡಿಗ) ತೆಂಕ ಎಡಪದವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿ ಮುಂದೆ ಪ್ರೌಢ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣವನ್ನು ಎಡಪದವಿನ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪಡೆಯುತ್ತಿದ್ದಾಗಲೂ ತರಗತಿಯ ಸಹಪಾಠಿ ಬಾಲಕಿಯರಿಗೆ ಇವರೇ ಅಧಿನಾಯಕಿ. ಆಗ ಇವರೇ ವಿದ್ಯಾರ್ಥಿ ನಾಯಕಿ. ಮುಂದೆ ಮಂಗಳೂರಿನ ಎಸ್.ಡಿ.ಎಂ. ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆಯುವಾಗಲೂ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ನಾಯಕತ್ವದ ದರ್ಶೀತ್ವವನ್ನು ಅನುಭವಿಸಿದ್ದು ಒಂದು ಸಿಹಿ ನೆನಪು ಎನ್ನುತ್ತಾರೆ ಅವರು. ವಿದ್ಯಾ ಜೀವನ ಪೂರ್ಣಗೊಳಿಸಿದ ಹಲವು ವರ್ಷಗಳ ನಂತರ ಈ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ಸನ್ಮಾನದ ಗೌರವ ಸ್ವೀಕರಿಸಿರುವುದು ಇವರ ಅಗಾಧವಾದ ಜೀವನ ಪ್ರೇಮಕ್ಕೆ ಸಿಕ್ಕಿರುವ ಪ್ರತಿಫಲ.

 

 

(ಗಲ್ಪ್ ಕನ್ನಡಿಗ) ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂಬ ಹಂಬಲ ಹೊತ್ತಿದ್ದ ಇವರು ಒಂದು ವರ್ಷ ಕಾಲ ಖ್ಯಾತ ನ್ಯಾಯವಾದಿ ಎಂ.ಎಸ್.ಜೈನ್ ಅವರ ಸಹಾಯಕಿಯಾಗಿ ತಮ್ಮ ವಕೀಲ ವೃತ್ತಿ ಜೀವನಕ್ಕೆ ನಾಂದಿ ಹಾಡಿದ್ದರು. ೨೦೦೪ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಿರಂಜನ್ ಕುಮಾರ್ ಅವರೊಂದಿಗೆ ಸಪ್ತಪದಿ ತುಳಿದು ಹೊಸ ಜೀವನದ ಹೊಂಗನಸಿನೊಂದಿಗೆ ತಮ್ಮ ವೃತ್ತಿ ಜೀವನಕ್ಕೆ ತಾತ್ಕಾಲಿಕ ವಿದಾಯ ಹೇಳಿ, ವೈವಾಹಿಕ ಜೀವನ ಪ್ರಾರಂಭಿಸಿ ಪುತ್ರಿ ಪ್ರಮಯಿಗೆ ಜನ್ಮನೀಡಿ ಪುಟ್ಟ ಮಗುವಿನ ಲಾಲನೆ-ಪಾಲನೆಯಲ್ಲೇ ನೆಮ್ಮದಿ ಕಂಡಿದ್ದ ಶ್ವೇತ ಜೈನ್ ಅವರ ಬಾಳಿಗೆ ಬರಸಿಡಿಲೊಂದು ಬಡಿದೇ ಬಿಟ್ಟಿತ್ತು. ವಿಧಿ ಎಷ್ಟು ಕ್ರೂರಿ ನೋಡಿ. ೨೦೦೬ರಲ್ಲಿ ಧರ್ಮಸ್ಥಳದ ಮಾತೃಶ್ರೀ ರತ್ನಮ್ಮ ನವರ ಕಾರು ಚಾಲಕರಾಗಿ ಸಾಗುತ್ತಿದ್ದ ನಿರಂಜನ್ ಕುಮಾರ್ ಅವರು ಚಲಾಯಿಸುತ್ತಿದ್ದ ಕಾರು ಬೆಳ್ತಂಗಡಿ-ಕಾರ್ಕಳ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಮಾತೃಶ್ರೀ ರತ್ನಮ್ಮನವರು ಮತ್ತು ನಿರಂಜನ್ ಕುಮಾರ್ ಇಬ್ಬರೂ ಜಿನಪಾದ ಸೇರುತ್ತಾರೆ. ಶ್ವೇತಾ ಅವರು ಕಟ್ಟಿಕೊಂಡಿದ್ದ ಸುಂದರ ವೈವಾಹಿಕ ಜೀವನದ ಕನಸು ನುಚ್ಚು ನೂರಾಗಿತ್ತು. ಶ್ವೇತ ಜೈನ್ ಅವರ ಬದಲು ಇಲ್ಲಿ ಬೇರೆ ಯಾವುದೇ ಹೆಣ್ಣಾಗಿದ್ದರೂ ಅವಳ ಕಥೆಯೂ ಬರಿದಾಗುತ್ತಿತ್ತೇನೋ ?

 

(ಗಲ್ಪ್ ಕನ್ನಡಿಗ) ವಿಧಿ ಒಂದು ಬದುಕನ್ನು ಕಿತ್ತುಕೊಂಡಿರಬಹುದು. ಆದರೆ ಅದೃಷ್ಟವನ್ನು ಕಿತ್ತುಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮತ್ತು ಮಂಗಳೂರಿನ ಖ್ಯಾತ ನ್ಯಾಯವಾದಿ ಎಂ.ಆರ್. ಬಲ್ಲಾಳ್ ಶ್ವೇತ ಜೈನ್ ಅವರ ನೆರವಿಗೆ ನಿಂತರು. ಇವರಿಬ್ಬರ ಸೂಚನೆ ಮತ್ತು ಸಹಕಾರದಿಂದ ಕಾರ್ಕಳದ ನ್ಯಾಯವಾದಿ ಎಂ.ಕೆ. ವಿಜಯಕುಮಾರ್ ಅವರ ಮೂಡುಬಿದಿರೆಯ ಕಚೇರಿಯಲ್ಲಿ ಎಂ.ಕೆ. ದಿವಿಜೇಂದ್ರ ಅವರೊಂದಿಗೆ ವಕೀಲ ವೃತ್ತಿಯ ಎರಡನೇ ಇನ್ನಿಂಗ್ಸ್ ಪ್ರಾರಂಭಿಸುವ ಅವಕಾಶ ಒದಗಿ ಬಂತು. ೨೦೦೯ರಲ್ಲಿ ಭಾರತ ಸರಕಾರದಿಂದ ನೋಟರಿಯಾಗಿ ನೇಮಕಗೊಂಡರು. ೨೦೧೦ರಲ್ಲಿ ಮೂಡುಬಿದಿರೆಯಲ್ಲಿ ತಮ್ಮದೇ ಆದ ಕಚೇರಿಯನ್ನೂ ಪ್ರಾರಂಭಿಸಿ ಸ್ವಾವಲಂಬಿ ವಕೀಲೆಯಾದರು. ೨೦೧೧ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಎಲ್.ಎಲ್.ಎಂ. ಸ್ನಾತಕೋತ್ತರ ಪದವಿಯನ್ನೂ ಪಡೆದರು. ಬಗಲಲ್ಲಿದ್ದ ಪುಟ್ಟ ಕಂದಮ್ಮ ಪ್ರಮಯಿಯ ಪಾಲನೆ-ಪೋಷಣೆ ಮಾಡಿಕೊಂಡೇ ಶ್ವೇತ ಜೈನ್ ಫೀನಿಕ್ಸ್ ನಂತೆ ಮೇಲೆದ್ದು ಬಂದರು.

ಶ್ವೇತ ಜೈನ್ ಬಾಲ್ಯದಿಂದಲೇ ಕಲಾರಾಧನೆ, ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಬಂದವರು. ಜೀವನದ ಸಂತೋಷಕ್ಕೆ ವಕೀಲ ವೃತ್ತಿಯೊಂದೇ ಸಾಲದು. ವಿವಿಧ ರಂಗಗಳಲ್ಲಿರುವ ಅವಕಾಶಗಳನ್ನು ತನ್ನದಾಗಿಸಿಕೊಳ್ಳಬೇಕು. ತನ್ನಲ್ಲಿರುವ ಸಾಮರ್ಥ್ಯದ ಅಗಾಧತೆ ಸಮಾಜಕ್ಕೆ ಅರ್ಪಿತವಾಗಬೇಕು ಎಂಬ ತುಡಿತದಿಂದ ಸಾಗಿರುವ ಅವರು ಸಮಾಜದ ಎಲ್ಲಾ ವರ್ಗಗಳ ಪ್ರೀತಿಗೆ ಪಾತ್ರರಾಗಿದ್ದಾರೆ. 

 

 

(ಗಲ್ಪ್ ಕನ್ನಡಿಗ) ಜೈನ್ ಮಿಲನ್ ಮೂಡುಬಿದಿರೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಭಾರತೀಯ ಜೈನ್ ಮಿಲನ್ ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಅಧ್ಯಕ್ಷತೆಯಲ್ಲಿ ಮೂಡುಬಿದಿರೆಯಲ್ಲಿ ೨ ದಿನಗಳ ಜಿನ ಭಕ್ತಿಗೀತೆ ರಾಜ್ಯಮಟ್ಟದ ಸ್ಪರ್ಧೆ ಯಶಸ್ವಿಯಾಗಿ ನಡೆದಿದೆ. ಅಧ್ಯಕ್ಷೆ ಎಂಬ ಆಡಂಬರವನ್ನು ಎಲ್ಲಿಯೂ ಪ್ರದರ್ಶಿಸದೆ ಜೈನ್ ಮಿಲನ್ ನ ಎಲ್ಲಾ ಸದಸ್ಯರನ್ನು ಜೊತೆಯಲ್ಲಿ ಸೇರಿಸಿಕೊಂಡು ಅಪ್ಪಂದಿರ ದಿನಾಚರಣೆ, ಶಿಕ್ಷಕರ ದಿನಾಚರಣೆ, ಸೈನಿಕರ ದಿನಾಚರಣೆ ಮುಂತಾದ ಪ್ರಮುಖ ದಿನಗಳಲ್ಲಿ ಹಿರಿಯರನ್ನು ಗುರುತಿಸಿ ಗೌರವಿಸುವ ಹೃದಯವಂತಿಕೆ ಮೆರೆದಿದ್ದಾರೆ. ಆನ್ ಲೈನ್ ಮೂಲಕ ಜೈನ್ ಮಿಲನ್ ಸಭೆ ನಡೆಸಿ ಇಂತಹ ಪ್ರಯೋಗ ನಡೆಸಿರುವ ಮಂಗಳೂರು ವಲಯದ ಪ್ರಥಮ ಜೈನ್ ಮಿಲನ್ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಹಮ್ಮಿಕೊಳ್ಳುವ ವೈವಿಧ್ಯಮಯ ಕಾರ್ಯಕ್ರಮಗಳು ಇತರ ಜೈನ್ ಮಿಲನ್ ಗಳಿಗೆ ಮಾದರಿಯಾಗಿದೆ ಎಂಬುದು ಸ್ವತಃ ಭಾರತೀಯ ಜೈನ್ ಮಿಲನ್ ಮಂಗಳೂರು ವಲಯಾಧ್ಯಕ್ಷ ಪುಷ್ಪರಾಜ್ ಜೈನ್ ಮತ್ತು ಕಾರ್ಯದರ್ಶಿ ಸುದರ್ಶನ್ ಜೈನ್ ಅವರ ಪ್ರಶಂಸೆಯ ಮಾತಾಗಿದೆ. ದೇವಶಾಸ್ತ್ರ ಮತ್ತು ಗುರುಗಳಲ್ಲಿ ಅಪಾರವಾದ ನಂಬಿಕೆ ಮತ್ತು ಭಕ್ತಿ ಇರುವುದರಿಂದ ಮುನಿಗಳು ಮತ್ತು ತ್ಯಾಗಿಗಳ ಆಹಾರ -ವಿಹಾರ ಕಾರ್ಯಗಳಲ್ಲೂ ತಮ್ಮನ್ನು ನಿರಂತರ ಸಮರ್ಪಿಸಿಕೊಳ್ಳುತ್ತಿದ್ದಾರೆ. ಯುವ ಪೀಳಿಗೆಗೆ ಸೂಕ್ತ ಮಾರ್ಗದರ್ಶನ ಸಿಗಬೇಕು ಎಂಬ ಸದುದ್ದೇಶದಿಂದ ಮೂಡುಬಿದಿರೆಯಲ್ಲಿ ಜೈನ ಸಮಾಜದ ಯುವಕ-ಯುವತಿಯರಿಗೆ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ನಡೆಸಿರುವುದು ಪ್ರಶಂಸನೀಯವಾಗಿದೆ. ಶ್ರವಣಬೆಳಗೊಳದಲ್ಲಿ ನಡೆದ ಮಹಾ ಮಸ್ತಕಾಭಿಷೇಕದ ರಾಷ್ಟ್ರಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಇವರದು. ಕಾರ್ಕಳ ಮಹಾ ಮಸ್ತಕಾಭಿಷೇಕ ಸಂದರ್ಭ ನಡೆದ ಮಹಿಳಾಗೋಷ್ಠಿ ಹಾಗೂ ನ್ಯಾಯವಾದಿಗಳ ಗೋಷ್ಠಿಯಲ್ಲಿ ಭಾಗವಹಿಸಿ ಪ್ರಖರವಾದ ವಿಚಾರಗಳನ್ನು ಮಂಡಿಸಿ ಸರ್ವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮೂಡುಬಿದಿರೆ ವಕೀಲರ ಸಂಘದಲ್ಲಿ ಎರಡು ಬಾರಿ ಜತೆ ಕಾರ್ಯದರ್ಶಿಯಾಗಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಸ್ತುತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನವೀಯತೆಯ ಪ್ರತಿರೂಪದಂತಿರುವ ಶ್ವೇತ ಜೈನ್ ತಮ್ಮ ಕಚೇರಿಗೆ ಬರುವ ಬಡಕುಟುಂಬದ ಕಿಡ್ನಿ ರೋಗಿಗಳಿಗೆ ಉಚಿತವಾಗಿ ಕಾನೂನು ನೆರವು ಒದಗಿಸುವ ಜೊತೆಗೆ ತೀರಾ ಬಡ ಕುಟುಂಬಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತಮ್ಮಿಂದಾದ ನೆರವನ್ನು ನೀಡುತ್ತಿದ್ದಾರೆ. 

 

(ಗಲ್ಪ್ ಕನ್ನಡಿಗ) ವೃತ್ತಿ ಜೀವನದ ಜೊತೆಗೆ ಸಾಮಾಜಿಕ ರಂಗದಲ್ಲೂ ತಮ್ಮನ್ನು ಅರ್ಪಿಸಿಕೊಂಡಿರುವ ಶ್ವೇತ ಜೈನ್ ಅವರು ಜಾನಪದ ಮತ್ತು ಸಾಂಪ್ರದಾಯಿಕ ವಾದ್ಯ ಕಲಾವಿದರ ಸಂಘ ಮೂಡುಬಿದಿರೆ ಇದರ ಗೌರವಾಧ್ಯಕ್ಷರಾಗಿ, ಗೌರವ ಸಲಹೆಗಾರರಾಗಿ ಸಂಘದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಮೂಡುಬಿದಿರೆ ತ್ರಿಭುವನ್ ಜೇಸೀಸ್ ನ ಜೇಸಿರೆಟ್ ವಿಭಾಗದ ಪೂರ್ವಾಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದಾರೆ. ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ನ ಸಕ್ರಿಯ ಸದಸ್ಯೆಯಾಗಿ, ಆಳ್ವಾಸ್ ವಿದ್ಯಾ ಸಂಸ್ಥೆಯ ಆಂಟಿ ರಾಗಿಂಗ್ ಸಮಿತಿ ಸದಸ್ಯೆಯಾಗಿ, ವಿಮೆನ್ ವೆಲ್ ಫೇರ್ ಕಮಿಟಿ ಸದಸ್ಯೆಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಕೆನರಾ ಬ್ಯಾಂಕ್, ಬ್ಯಾಂಕ್ ಆಫ್‌ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ವಿಜಯಾ ಬ್ಯಾಂಕ್, ಫೆಡರಲ್ ಬ್ಯಾಂಕ್ , ಕಾರ್ಪೊರೇಷನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಲಿ. ಮತ್ತು ಮಹಾವೀರ ಕೋ-ಆಪರೇಟಿವ್ ಬ್ಯಾಂಕ್ ಅಂತೆಯೇ ಇತರ ಅನೇಕ ಸಂಘ ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

 

(ಗಲ್ಪ್ ಕನ್ನಡಿಗ) ಝೀ ಕನ್ನಡ ಟಿವಿ ಚಾನೆಲ್ ನಲ್ಲಿ ಮಾಳವಿಕ ಅವಿನಾಶ್ ನಡೆಸಿ ಕೊಡುತ್ತಿದ್ದ 'ಬದುಕು ಜಟಕಾ ಬಂಡಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದು ಇತರರಿಗೆ ಸ್ಪೂರ್ತಿದಾಯಕವಾಗಿದೆ. ಡೈಜಿ ವರ್ಲ್ಡ್ ಚಾನೆಲ್ ನಲ್ಲಿ ಸಂದರ್ಶನ , ನಮ್ಮ ಟಿವಿಯಲ್ಲಿ ಡಿಬೇಟ್, ಅಭಿಮತ ಚಾನೆಲ್ ನಲ್ಲಿ ಅತಿಥಿಯಾಗಿ ಭಾಗವಹಿಸಿ ಎಲ್ಲರ ಪ್ರೀತಿಗೆ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರಲ್ಲಿರುವ ಕಲಾಸಕ್ತಿ ಸಂಘಸಂಸ್ಥೆಗಳು ನಡೆಸುವ ಭಾಷಣ ಮತ್ತು ಛದ್ಮವೇಶ ಸ್ಪರ್ಧೆಗಳಲ್ಲಿ ಇವರಿಗೆ ತೀರ್ಪುಗಾರ ಸ್ಥಾನವನ್ನೂ ಒದಗಿಸಿಕೊಟ್ಟಿದೆ. ನ್ಯಾಯಾಲಯ, ಬಸದಿ, ಕರಾವಳಿ ಮಿಲನೋತ್ಸವ ಮುಂತಾದ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಭಾಗವಹಿಸಿರುವ ಇವರು ಬೆಸ್ಟ್ ಆಂಕರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಶಾಲಾ ಕಾಲೇಜುಗಳ ಸಭೆಗಳು, ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮಾರಂಭಗಳಲ್ಲಿ ೧೦೦೦ಕ್ಕೂ ಹೆಚ್ಚು ಉಪನ್ಯಾಸವನ್ನು ನೀಡಿರುವುದು ಇವರ ವಾಗ್ವೈಖರಿಗೆ ಹಿಡಿದ ಕನ್ನಡಿಯಾಗಿದೆ. ಮೂಡುಬಿದಿರೆ ತಾಲೂಕು ಘೋಷಣೆಯಾದ ನಂತರ ಪ್ರಥಮ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣತಂತ್ರ ದಿನಾಚರಣೆಯಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿರುವುದು ಹೆಮ್ಮೆಯ ವಿಚಾರವಾಗಿದೆ. 

 

(ಗಲ್ಪ್ ಕನ್ನಡಿಗ) ಕ್ರೀಡಾ ಕ್ಷೇತ್ರದಲ್ಲೂ ವಿಶೇಷ ಆಸಕ್ತಿ ಮತ್ತು ಸಾಮರ್ಥ್ಯ ಎರಡನ್ನೂ ಹೊಂದಿರುವ ಶ್ವೇತ ಜೈನ್ ಶಟಲ್, ಥ್ರೋ ಬಾಲ್, ಟೆನ್ನಿಕಾಯ್ಟ್,ಹಗ್ಗಜಗ್ಗಾಟ ಹೀಗೆ ಎಲ್ಲಾ ರೀತಿಯ ಆಟಗಳನ್ನು ಸ್ವತಃ ಆಡಿ ವೈಯಕ್ತಿಕ ಮತ್ತು ಮೂಡುಬಿದಿರೆ ತಂಡಕ್ಕೆ ರಾಜ್ಯಮಟ್ಟದಲ್ಲಿ ಬಹುಮಾನ ದೊರಕಿಸಿ ಕೊಟ್ಟಿದ್ದಾರೆ. 

 

(ಗಲ್ಪ್ ಕನ್ನಡಿಗ) ಇತ್ತೀಚಿನ ದಿನಗಳಲ್ಲಿ ಜಗತ್ತನ್ನು ಕಂಗೆಡಿಸಿರುವ ಕೊರೋನಾ ಮಹಾಮಾರಿಯ ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ಕುಟುಂಬಗಳಿಗೆ ನೆರವಾಗಿದ್ದಾರೆ. ರೆಡ್ ಕ್ರಾಸ್ ಸಂಸ್ಥೆಯ ಸದಸ್ಯೆಯೂ ಆಗಿರುವ ಇವರು ೬ ಬಾರಿ ರಕ್ತದಾನ ಮಾಡಿರುವುದು ಇತರರಿಗೆ ಪ್ರೇರಣಾದಾಯಕವಾಗಿದೆ. ಬದುಕಿನ ಪ್ರತಿಯೊಂದು ಹಂತದಲ್ಲಿ ಸರಳತೆ, ಶಿಸ್ತು ಮತ್ತು ಸಂಯಮ ಪ್ರದರ್ಶನ ಶ್ವೇತ ಜೈನ್ ಅವರ ಪ್ರಮುಖ ಅಸ್ತ್ರವಾಗಿದೆ. ಪ್ರಥಮ ಭೇಟಿಯಲ್ಲೇ ನಗುಮೊಗದ ಆತಿಥ್ಯ ಎದುರಾಳಿಗೆ ಇವರು ಪ್ರಯೋಗಿಸುವ ಬ್ರಹ್ಮಾಸ್ತ್ರ. 

 

(ಗಲ್ಪ್ ಕನ್ನಡಿಗ) ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಿ ಈ ಜಗತ್ತಿನ ಮುಕುಟಕ್ಕೆ ಮುತ್ತಾಗಲು ಸಾಧ್ಯ ಎಂಬುದಕ್ಕೆ ಶ್ವೇತ ಜೈನ್ ಅತ್ಯುತ್ತಮ ಉದಾಹರಣೆ.

ಸಮಾಜ ಸೇವೆಗಾಗಿ ಮೂಡಬಿದ್ರೆ ಸ್ವಾಮೀಜಿಯವರಿಂದಲೇ ಸ್ವಸ್ತಿಶ್ರೀ ಭಟ್ಟಾರಕ ಪ್ರಶಸ್ತಿ ಪಡೆದಿರುವ ಶ್ವೇತ ಜೈನ್ ಅವರು ಇದೇ ರೀತಿ ತಮ್ಮೊಂದಿಗೆ ಇತರರನ್ನೂ ಏಳಿಗೆಯತ್ತ ಒಯ್ಯುತ್ತಾ ಸಾಧನೆಯ ತುತ್ತ ತುದಿಗೇರುವಂತಾಗಲಿ ಎಂಬುದು ಎಲ್ಲರ ಆಶಯವಾಗಿದೆ.

 

✍️ಸುಜಾತ ಗಜೇಂದ್ರ ಜೈನ್ ಸಾಗರ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99