ಕಾರವಾರ;ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಕರೆ
Thursday, August 13, 2020
ಕಾರವಾರ - ಗಣೇಶ ಹಬ್ಬವನ್ನು ನಾಗರಿಕರು ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉತ್ತರ ಕನ್ನಡ ಜಿಲ್ಲಾ ಪರಿಸರ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಬಾರಿ ಕೊರೋನಾ ಸನ್ನಿವೇಶಕ್ಕೆ ಸಿಲುಕಿರುವದರಿಂದ ಅರಿಶಿನದಿಂದ ಗಣೇಶನ ಮೂರ್ತಿ ಮಾಡುವ ಕುರಿತು ಮಂಡಳಿಯು ಜಾಗೃತಿ ಮೂಡಿಸುತ್ತಿದೆ. ಕೊರೋನಾ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಪರಿಸರ ಸ್ನೇಹಿ ಜತೆಗೆ ಆರೋಗ್ಯ ಸ್ನೇಹಿ ಗಣೇಶೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು.
ಹಬ್ಬದ ದಿನ ಜನ ದಟ್ಟಣೆ ಹಾಗೂ ಸಾಮಾಜಿಕ ಅಂತರ ಕಾಪಾಡಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ. ಅಗಸ್ಟ 22 ರಂದು ಗಣೇಶ ಚತುರ್ಥಿ ಇದ್ದು, ಈ ಬಾರಿ ವೈರಾಣು ನಿರೋಧಕ ಶಕ್ತಿ ಹೊಂದಿರುವ ಅರಿಶಿನ ಗಣೇಶ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿ ಪೂಜಿಸಲು ಹಾಗೂ ಅದನ್ನು ಮನೆಯಲ್ಲೇ ವಿಸರ್ಜಿಸುವಂತೆ ಮಂಡಳಿಯು ಜಾಗೃತಿ ಮೂಡಿಸುತ್ತಿದೆ.
ಅರಿಶಿನ ಗಣಪತಿ ಮಾಡುವ ವಿಧಾನ : ಮೊದಲು ಅರಿಶಿನ ಹಾಗೂ ಮೈದಾಹಿಟ್ಟಿಗೆ ನೀರು ಮಿಶ್ರಣ ಮಾಡಿ ಹದವಾಗಿ ಮಾಡಿಕೊಂಡು ಗಣೇಶನ ಆಕಾರ ನೀಡಬೇಕು. ಸೊಂಡಿಲನ್ನು ಮಾಡಿದ ಬಳಿಕ ಮೆಣಸಿನ ಕಾಳನ್ನು ಬಳಸಿ ಮೂರ್ತಿಗೆ ಕಣ್ಣು ಮಾಡಬಹುದು. ಬಳಿಕ ಹೂವಿನ ಅಲಂಕಾರ ಮಾಡಿದರೆ ಪ್ರತಿಷ್ಟಾಪಿಸಿ ಗಣೇಶ ಮೂರ್ತಿ ಸಿದ್ಧವಾಗುತ್ತದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಫೇಸ್ ಬುಕ್ ಪೇಜ್ ಗೆ ಭೇಟಿ ನೀಡಿದರೆ ಅರಿಶಿನದಿಂದ ಗಣೇಶ ಮೂರ್ತಿ ಮಾಡುವ ವಿಧಾನ ತಿಳಿದುಕೊಳ್ಳಬಹುದು. ಇಂತಹ ಪುಟ್ಟ ಪುಟ್ಟ ಪ್ರತಿಮೆಗಳನ್ನು ತಯಾರಿಸಿ ಮನೆಯ ಆವರಣದಲ್ಲಿ ವಿಸರ್ಜನೆ ಮಾಡುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ತಿಳಿಸಿದ್ದಾರೆ.