ಕೊರೋನಾ ಸೋಂಕಿತ ಸಂಸದ ಸಾವು: ವಸಂತ್ ನಿಧನಕ್ಕೆ ಶೋಕ
ಚೆನ್ನೈ: ಕೊರೋನಾ ಸೋಂಕಿಗೆ ಸಂಸದರೊಬ್ಬರು ಬಲಿಯಾಗಿದ್ದಾರೆ. ಕನ್ಯಾಕುಮಾರಿ ಸಂಸದ ಹಾಗೂ ತಮಿಳುನಾಡು ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಎಚ್.ವಸಂತ್ ಕುಮಾರ್ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಅಪೋಲೋ ಆಸ್ಪತ್ರೆ ಮೂಲಗಳು ಈ ವಿಷಯವನ್ನು ದೃಢಪಡಿಸಿದೆ. ಸಂಸದ ಎಚ್. ವಸಂತ್ ಕುಮಾರ್ ಕೊರೋನಾ ಸೋಂಕಿನಿಂದ ಮೃತಪಟ್ಟಿರುವ ಸುದ್ದಿಯನ್ನು ತಿಳಿಸಲು ತುಂಬಾ ನೋವಾಗುತ್ತಿದೆ. ಇಂದು ಸಂಜೆ 6.56ಕ್ಕೆ ಅವರು ವಿಧಿವಶರಾಗಿದ್ದಾರೆ ಎಂದು ಆಸ್ಪತ್ರೆ ನಿರ್ದೇಶಕಿ ಡಾ.ಆರ್.ಕೆ ವೆಂಕಟಸಲಮ್ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಸಂತ್ ಕುಮಾರ್ ಅವರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಆಗಸ್ಟ್ 10ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಹೀಗಾಗಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಅವರ ಆರೋಗ್ಯ ತೀವ್ರವಾಗಿ ಕುಂಠಿತವಾಗಿತ್ತು. ಹೀಗಾಗಿ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ವಸಂತ್ ಕುಮಾರ್ ಅವರು ಕೊರೊನಾಗೆ ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಅವರ ಪತ್ನಿ, ಮಗ ಹಾಗೂ ನಟ ವಿಜಯ್ ವಸಂತ್ ಅವರನ್ನು ಅಗಲಿದ್ದಾರೆ. ವಸಂತ್ ಕುಮಾರ್ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸಹಿತ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ತಮಿಳು ಚಿತ್ರರಂಗದ ದಿಗ್ಗಜರಾದ ರಜನೀಕಾಂತ್, ಕಮಲ್ ಹಾಸನ್ ಸಹಿತ ಹಲವು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
ವಸಂತ್ ಕುಮಾರ್ ಅವರು ಏಪ್ರಿಲ್ 14, 1950ರಂದು ಕನ್ಯಾಕುಮಾರಿ ಜಿಲ್ಲೆಯ ಅಗಥೀಶ್ವರಂ ನಲ್ಲಿ ಜನಿಸಿದ್ದು, 1978ರಲ್ಲಿ ವಸಂತ್ ಆ್ಯಂಡ್ ಕೋ ಸಂಸ್ಥೆ ಸ್ಥಾಪಿಸುವ ಮೂಲಕ ಬ್ಯುಸಿನೆಸ್ ಪ್ರಾರಂಭಿಸಿದ್ದರು. ಇದೀಗ ತಮಿಳುನಾಡು, ಕರ್ನಾಟಕ ಹಾಗೂ ಕೇರಳಗಳಲ್ಲಿ 80 ಶಾಖೆಗಳನ್ನು ಈ ಸಂಸ್ಥೆ ಹೊಂದಿದೆ. ಬ್ಯುಸಿನೆಸ್ ಬಳಿಕ ವಸಂತ್ ಕುಮಾರ್ ಅವರು ರಾಜಕೀಯ ಪ್ರವೇಶ ಮಾಡಿದರು.
ನಂಗುನೇರಿ ಕ್ಷೇತ್ರದಿಂದ 2006ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 2011ರ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಬಳಿಕ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ್ದರು. 2016 ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ 2019ರ ಲೋಕಸಭಾ ಚುನಾವಣೆಯಲ್ಲಿ ಕನ್ಯಾಕುಮಾರಿಯಿಂದಲೇ ಸ್ಪರ್ಧಿಸಿದ್ದರು. ಆಗ ಬಿಜೆಪಿ ಅಭ್ಯರ್ಥಿ ಪೊನ್ ರಾಧಾಕೃಷ್ಣನ್ ಅವರನ್ನು ಸೋಲಿಸಿದ್ದರು.