ರೈತರಿಗೆ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್
Tuesday, August 18, 2020
ಕಾರವಾರ : ರೈತರು ತಮ್ಮ ಜಮೀನಿನ ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು ತಾವೇ ಸ್ವತಃ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ತಂತ್ರಾಂಶದ ಮೂಲಕ ಸ್ವಯಂ ದಾಖಲಿಸುವ ವಿನೂತನ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ರೈತರು ಸ್ಮಾರ್ಟ್ ಫೋನ್ ಬಳಸಿ ರೈತರ ಬೆಳೆ ಸಮೀಕ್ಷೆ ಆ್ಯಪ್-2020ನ್ನು ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಪಡೆಯುವ ಮೂಲಕ ಆ್ಯಪ್ ಸಕ್ರಿಯಗೊಳಿಸಬೇಕು. ನಂತರ ತಮ್ಮ ಜಮೀನಿನಲ್ಲಿ ಬೆಳೆದ ಎಲ್ಲಾ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ಒಂದೊಂದಾಗಿ ಅಗಸ್ಟ್ 24ರ ಒಳಗೆ ದಾಖಲಿಸಬಹುದಾಗಿದೆ. ಜಿಪಿಎಸ್ ಆಧಾರಿತ ಈ ತಂತ್ರಾಂಶದಿಂದ ನಿಖರವಾದ ಬೆಳೆ ಮಾಹಿತಿಯನ್ನು ರೈತರೇ ಸ್ವಯಂ ದಾಖಲಿಸಬಹುದಾಗಿರುತ್ತದೆ.
ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೇ ಹಾಗೂ ಸಾಂಖ್ಯಿಕ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದ್ದು , ಸಂಗ್ರಹವಾದ ಬೆಳೆಗಳ ಮಾಹಿತಿಯನ್ನು ತಾಲೂಕು ಆಡಳಿತ ಸೂಪರವೈರ್ಜರ್ ಮೂಲಕ ಪರಿಶೀಲಿಸಿ ಅನುಮೋದನೆ ನೀಡಲಿದೆ ಬೆಳೆ ನಮೂದು ತಪ್ಪಿದ್ದಲ್ಲಿ ಮರು ಸಮೀಕ್ಷೆ ಮೂಲಕ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ.
ಬೆಳೆ ಸಮೀಕ್ಷೆ ಯೋಜನೆಯಡಿ ಸಂಗ್ರಹಿಸುವ ಮಾಹಿತಿ ಪ್ರಕೃತಿ ವಿಕೋಪದಲ್ಲಿ ಬೆಳೆ ಹಾನಿ ಪರಿಹಾರ ಒದಗಿಸಲು ಬೆಳೆ ವಿಮೆ ನೋಂದಾಯಿತ ರೈತರ ಬೆಳೆ ಪರಿಶೀಲಿಸಲು ಕನಿಷ್ಠ ಬೆಂಬಲ ಬೆಲೆ ನಿಗದಿ ಹಾಗೂ ವಿವಿಧ ಸರ್ಕಾರಿ ಪ್ರಾಯೋಜಿತ ಯೋಜನೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.