ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿ ಸಮೀಕ್ಷೆಗೆ ಮೊಬೈಲ್ ಆ್ಯಪ್
Thursday, August 13, 2020
ಕಾರವಾರ : ಪ್ರಸಕ್ತ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿ.ಪಿ.ಎಸ್. ಆಧಾರಿತ ಮೊಬೈಲ್ ಆ್ಯಪ್ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ ಮಾಡಲು, ಸರ್ಕಾರ ಬೆಳೆ ಸಮೀಕ್ಷೆ ಯೋಜನೆ ಜಾರಿಗೆ ತಂದಿದೆ.
ಸದರಿ ಯೋಜನೆಯನ್ವಯ ಉತ್ತರ ಕನ್ನಡ ಜಿಲ್ಲೆಯ ರೈತರು ತಮ್ಮ ಜಮೀನುಗಳ ಸರ್ವೆ ನಂ, ಹಿಸ್ಸಾ ನಂ. ಗಳಲ್ಲಿ ತಾವು ಬೆಳೆದ ಕೃಷಿ, ತೊಟಗಾರಿಕೆ, ರೇಷ್ಮೆ ಹಾಗೂ ಇನ್ನಿತರ ಬೆಳೆಗಳ ವಿವರಗಳನ್ನು ಛಾಯಾಚಿತ್ರ ಸಹಿತ ತಾವೇ ಸ್ವತಃ, ರೈತರ ಬೆಳೆ ಸಮೀಕ್ಷೆ ಆ್ಯಪ್ 2020 ಮೂಲಕ ಅಪ್‍ಲೋಡ್ ಮಾಡಬಹುದಾಗಿರುತ್ತದೆ.
ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು ರೈತರೇ ಅಪ್‍ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್‍ನಿಂದ FARMERS CROP SURVEY APP /2020-21 ಡೌನ್‍ಲೋಡ್ ಮಾಡಿಕೊಂಡು ಬಳಸಬಹುದಾಗಿರುತ್ತದೆ.
ರೈತರಿಗೆ ಆ್ಯಪ್ ಬಳಕೆ ಬಗ್ಗೆ ಮಾಹಿತಿಯನ್ನು / ತರಬೇತಿಯನ್ನು ನೀಡಲು ಸರ್ಕಾರದಿಂದ ನೇಮಕವಾದ ಖಾಸಗಿ ನಿವಾಸಿಗಳ(Pಖ) ಸಹಾಯ ಪಡೆಯಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ, ತೊಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿರುತ್ತದೆ.
ಸಂಗ್ರಹಿಸಲಾದ ಬೆಳೆ ಮಾಹಿತಿಯನ್ನು ಸರ್ಕಾರದ ವಿವಿಧ ಯೋಜನೆಗಳ ಸಹಾಯಧನ/ಪರಿಹಾರ/ಸಾಲ ನೀಡಲು ಬಳಸಲಾಗುವುದರಿಂದ ಜಿಲ್ಲೆಯ ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ತಾವೇ ಸರ್ಕಾರಕ್ಕೆ ನಿಗದಿತ ಸಮಯದೊಳಗೆ ವರದಿ ಮಾಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪಗೌಡ ಮಾಧ್ಯಮಕ್ಕೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.