-->

ಆರ್ಥಿಕತೆ ಬುಡಮೇಲು ಮಾಡಿದ ಕೊರೋನಾ: ಎಪ್ರಿಲ್‌ನಿಂದ ಇಲ್ಲಿಯವರೆಗೆ ಏನೇನಾಗಿದೆ ಗೊತ್ತಾ..?

ಆರ್ಥಿಕತೆ ಬುಡಮೇಲು ಮಾಡಿದ ಕೊರೋನಾ: ಎಪ್ರಿಲ್‌ನಿಂದ ಇಲ್ಲಿಯವರೆಗೆ ಏನೇನಾಗಿದೆ ಗೊತ್ತಾ..?


ವಿಶೇಷ ಲೇಖನ

ಕಳೆದ ಎಪ್ರಿಲ್‌ನಿಂದ-ಆಗಸ್ಟ್ ತಿಂಗಳ ಅಂತ್ಯದವರೆಗೆ ನಮ್ಮ ದೇಶದಲ್ಲಿ ಸಂಘಟಿತ ವಲಯದ ಸುಮಾರು 2.10 ಕೋಟಿ ಸ್ಯಾಲರೀಡ್ ವೃತ್ತಿಪರರು ನೌಕರಿ ಕಳೆದುಕೊಂಡಿದ್ದಾರೆ. ಎಪ್ರಿಲ್ ತಿಂಗಳೊಂದರಲ್ಲೇ ಒಂದೂವರೆ ಕೋಟಿಗಿಂತಾ ಹೆಚ್ಚು ಜನರು ನೌಕರಿ ಕಳೆದುಕೊಂಡರೆ, ಜೂನ್‍ನಲ್ಲಿ ಸುಮಾರು ಮೂವತ್ತು ಲಕ್ಷ ಮಂದಿ ಹೊಸ ಕೆಲಸವನ್ನು ಪಡೆದುಕೊಂಡಿದ್ದರು.

ಆದರೆ ಜುಲೈನಲ್ಲಿ ಮತ್ತೆ ಐವತ್ತು ಲಕ್ಷ ಜನ ನೌಕರಿ ಕಳೆದುಕೊಂಡಿದ್ದರೆ, ಆಗಸ್ಟ್ ತಿಂಗಳಿನಲ್ಲಿ ಮೂವತ್ತು ಮೂರು ಲಕ್ಷ ಮಂದಿ ಕೆಲಸ ಕಳೆದುಕೊಂಡಿದ್ದಾರೆ.

ಇನ್ನು ಮನೆ ಕೆಲಸದವರು, ಕೂಲಿ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಕೆಲಸ ಮಾಡುವ ಸಿ ಹಾಗೂ ಡಿ ಗ್ರೇಡ್ ನೌಕರರು, ಬೀದಿ ವ್ಯಾಪಾರಿಗಳು, ಗೂಡಂಗಡಿ ವ್ಯಾಪಾರಿಗಳು ಹೀಗೆ ಅಸಂಘಟಿತ ವಲಯದಲ್ಲಿ ಕೆಲಸ/ವರಮಾನ ಕಳೆದುಕೊಂಡಿರುವವರ ಸಂಖ್ಯೆ ಸುಮಾರು ಹನ್ನೊಂದು ಕೋಟಿಯೆಂದು Centre for Monitoring Indian Economy (CMIE) ವರದಿಗಳು ಹೇಳುತ್ತಿವೆ.

ಇದೇ ವರದಿಗಳ ಪ್ರಕಾರ ಎಪ್ರಿಲ್-ಜುಲೈ ಮಧ್ಯೆ 7.8 ಕೋಟಿ ಸ್ವ-ಉದ್ಯೋಗದಾರರು ತಾವು ನಿರುದ್ಯೋಗಿಗಳಾಗಿದ್ದೇವೆಂದು ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಸ್ವಂತ ಪ್ರಾಕ್ಟೀಸ್ ಮಾಡುವ ವೈದ್ಯರು, ಲಾಯರುಗಳು, ಅಕೌಂಟೆಂಟ್‍ಗಳು, ಸ್ವಂತ ಟ್ಯಾಕ್ಸಿ, ಆಟೋ, ಟ್ರಕ್ಕು ಹೊಂದಿರುವವರು ಸೇರಿದ್ದಾರೆ.

ದೇಶದೆಲ್ಲೆಡೆ 75% ಬೀದಿ ವ್ಯಾಪಾರಿಗಳು, ಗೂಡಂಗಡಿ ವ್ಯಾಪಾರಿಗಳು ಆದಾಯವಿಲ್ಲದ ಕಷ್ಟಪಡುತ್ತಿದ್ದಾರೆ. ಇದರಲ್ಲಿ ಕೆಲವರು ಮೆಲ್ಲ-ಮೆಲ್ಲನೆ ತಮ್ಮ ಹಿಂದಿನ ವ್ಯಾಪಾರಕ್ಕೆ ಮರಳಿದರೂ, ಕೆಲ ರಾಜ್ಯಗಳಲ್ಲಿ ಇನ್ನೂ ಲಾಕ್‍ಡೌನ್ ಇರುವುದರಿಂದ ಹಾಗೂ ಲಾಕ್‍ಡೌನ್ ಇಲ್ಲದಿದ್ದರೂ ಬೇಡಿಕೆ ಕಡಿಮೆಯಿರುವುದರಿಂದ ಹಿಂದಿನ ಆದಾಯದ 25-35% ಆದಾಯವನ್ನೂ ಪಡೆಯಲಾಗುತ್ತಿಲ್ಲ. ದೇಶದೆಲ್ಲೆಡೆ ಮುಂದೆ ಲಾ‍ಕ್‍ಡೌನ್, ಕೋವಿಡ್ ನಿರ್ಭಂದಗಳು ಪೂರ್ಣವಾಗಿ ತೆರವಾದ ನಂತರ ಅಸಂಘಟಿತ ವಲಯದ ಕಾರ್ಮಿಕರಲ್ಲಿ ಕೆಲವರಿಗಾದರೂ ನೌಕರಿ, ಜೀವನೋಪಾಯ ಸಿಗಬಹುದು. ಆದರೆ ಸ್ಯಾಲರೀಡ್ ಕ್ಲಾಸ್‍ ಮಾತ್ರ ಸಂಬಳಿಸಲು ಬಹಳ ಕಷ್ಟವಿದೆ. ಸದ್ಯಕ್ಕೆ ಭರವಸೆಯಿರುವುದು ಕೇವಲ ಕೃಷಿ ಕ್ಷೇತ್ರದಲ್ಲಿ ಮಾತ್ರ. ಈ ಬಾರಿ ಮಾನ್ಸೂನೂ ಚೆನ್ನಾಗಿ ಆಗಿದೆ.

CMIE ವರದಿಗಳ ಪ್ರಕಾರ 2019-’20 ರಲ್ಲಿ 11.13 ಕೋಟಿ ಜನರು ಕೃಷಿಯನ್ನು ತಮ್ಮ ಆದಾಯದ ಮೂಲ ಎಂದು ಘೋಷಿಸಿಕೊಂಡಿದ್ದರೆ ಜುಲೈ ಹೊತ್ತಿಗೆ ಅವರ ಸಂಖ್ಯೆ 13 ಕೋಟಿಗೆ ಏರಿದೆ. ಸದ್ಯಕ್ಕೆ ಕೃಷಿ ಕ್ಷೇತ್ರವೊಂದೇ ಭವಿಷ್ಯದ ಭರವಸೆಯಾದರೂ ಅವರ ಉತ್ಪನ್ನಗಳನ್ನು ಖರೀದಿಸುವ ಶಕ್ತಿ ಮಿಕ್ಕ 120 ಕೋಟಿ ಜನರಲ್ಲಿ ಎಷ್ಟು ಮಂದಿಗಿದೆ ಎನ್ನುವುದು ದೊಡ್ಡ ಪ್ರಶ್ನೆ.

ಇನ್ನು ಕೆಲಸ ಕಳೆದುಕೊಳ್ಳದಿದ್ದರೂ ಕಳೆದ ಐದಾರು ತಿಂಗಳುಗಳಿಂದ ವೇತನ ಸಿಗದ ಸರ್ಕಾರಿ ಟೀಚರ್ ಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಖಾಸಗಿ ವಲಯದ ವೇತನಾದಾರರು ಕೋಟ್ಯಾಂತರ ಮಂದಿ ಇದ್ದಾರೆ. ಇನ್ನೊಂದೆಡೆ ವಿಧವೆಯರು, ಹಿರಿಯ ನಾಗರಿಕರು ಪಿಂಚಣಿ ಸಿಗದೇ ಪರದಾಡುತ್ತಿದ್ದಾರೆ. ಇನ್ನೊಂದು ದೊಡ್ಡ ವರ್ಗ ಭವಿಷ್ಯ ನಿಧಿಯಿಂದ ತಮ್ಮ ಉಳಿತಾಯವನ್ನು ಹಿಂತೆಗೆದುಕೊಂಡಿದೆ.

ಜೈಶ್ರೀರಾಮ್, ರಾಮ ಮಂದಿರ, ಭಯೋತ್ಪಾದನೆ, ಕಾಶ್ಮೀರ, ಕಂಗನಾ, ರಾಗಿಣಿ, ಸಂಜನಾ, ಸುಷಾಂತ್, ರಿಯಾ, ಡ್ರಗ್ಸ್ ಗಲಾಟೆಯಲ್ಲಿ ನಾವು ಎಂಥ ಭೀಕರವಾದ ಭವಿಷ್ಯವನ್ನು ಎದುರು ನೋಡುತ್ತಿದ್ದೇವೆ ಎನ್ನುವುದರ ಅರಿವು ನಮಗಿಲ್ಲ. ಆಡಳಿತ ಪಕ್ಷ ಹಾಗೂ ಅದರ ಬೆಂಬಲಿಗರು ಹೇಗೂ ಇವೆಲ್ಲದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ವಿರೋಧ ಪಕ್ಷಗಳೂ ಉಸಿರೆತ್ತದೆ ಕೂತಿವೆ. ಇಡೀ ದೇಶದಲ್ಲಿ ರಾಹುಲ್ ಗಾಂಧಿ ಮಾತ್ರ ಒಬ್ಬಂಟಿಗನಾಗಿ ಸರ್ಕಾರ ಹೇರಿದ ಅನಗತ್ಯ, ಸರ್ವಾಧಿಕಾರಿ ಲಾಕ್‍ಡೌನ್ ವಿರುದ್ಧ, ಅದರ ಪರಿಣಾಮಗಳ ಬಗ್ಗೆ, ನಿರುದ್ಯೋಗ, ಕೋವಿಡ್ ಸಮಯದ ಹಾಗೂ ಕೋವಿಡ್ ತರುವಾಯದ ಸಮಸ್ಯೆಗಳ ಬಗ್ಗೆ ಗಟ್ಟಿದನಿಯಲ್ಲಿ ಮಾತಾನಾಡುತ್ತಿದ್ದಾರೆ. ಅವರನ್ನು ಬಿಟ್ಟರೆ ಅವಾಗೊಮ್ಮೆ, ಇವಾಗೊಮ್ಮೆ ಅರವಿಂದ ಕೇಜ್ರಿವಾಲ್, ಚಿದಂಬರಂ, ಸಿದ್ಧರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಏನಿಲ್ಲವೆಂದರೂ ಟ್ವೀಟ್ ಆದರೂ ಮಾಡುತ್ತಿದ್ದಾರೆ. ಉಳಿದಂತೆ ನಾವೆಲ್ಲಾ ಒಂದೇ ಶವಗಳಾಗಿದ್ದೇವೆ ಇಲ್ಲ ಸಾಮೂಹಿಕ ಆತ್ಮಹತೆಯ್ಗೆ ತಯಾರಿ ಮಾಡುತ್ತಿದ್ದೇವೆ ಇಲ್ಲವೇ ಪ್ರಚೋದನೆ ನೀಡುತ್ತಿದ್ದೇವೆ.

ಅಂದಹಾಗೆ ಈ ಬರಹದ ಕಾಮೆಂಟ್ ಬಾಕ್ಸಿಗೆ ಬಂದು ನಾನು ಕೊಟ್ಟಿರುವ ಅಂಕಿ-ಸಂಖ್ಯೆಗಳ ಮೂಲ ಯಾವುದು,, ಎಲ್ಲಿಂದ, ಹೇಗೆ ಎಂದು ಕೇಳುವ ಎರಡ್ರುಪಾಯಿ ಭಕ್ತರಿಗೆ ಮೊದಲೇ ಹೇಳುತ್ತೇನೆ. ನಾನು ಮೂಲ ಹೇಳಿ ಆಗಿದೆ. ಬೇಕಾದರೆ ನೀವೇ ಹೋಗಿ ಹುಡುಕಿಕೊಳ್ಳಿ ಯಾಕೆಂದರೆ ನಾನು ಮೂಲ ಅಲ್ಲ, ಇಡಿ ಬ್ರಹ್ಮಾಂಡವನ್ನೇ ಕೊಟ್ಟರೂ ನೀವಂತೂ ನಂಬಲ್ಲ. ಅಷ್ಟಾದಮೇಲೆ ಮೂಲ ಕೇಳುವ ಮೂಲವ್ಯಾಧಿ ಯಾಕೆ?

ಲೇಖಕರು: ಗ್ಲ್ಯಾಡ್ಸನ್ ಅಲ್ಮೇಡಾ, ಚಿಂತಕರು

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99