ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆ- ಬ್ಯಾಂಕ್ನ ಮ್ಯಾನೇಜರ್, ಕ್ಯಾಶಿಯರ್, ಸಿಬ್ಬಂದಿಯನ್ನು ಕಟ್ಟಿ 8 ಕೋಟಿ 50 ಕೆ.ಜಿ.ಗೂ ಅಧಿಕ ಚಿನ್ನಾಭರಣ ಕಳವು
Wednesday, September 17, 2025
ವಿಜಯಪುರ: ಇಲ್ಲಿನ ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆ ನಡೆದಿದ್ದು, ದರೋಡೆಕೋರರು 8 ಕೋಟಿ ನಗದು, ಸುಮಾರು 50 ಕೆ.ಜಿ.ಗೂ ಅಧಿಕ ಚಿನ್ನಾಭರಣವನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಿಸ್ತೂಲ್, ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಐದಕ್ಕೂ ಅಧಿಕ ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ. ಬ್ಯಾಂಕ್ನ ಮ್ಯಾನೇಜರ್, ಕ್ಯಾಶಿಯರ್, ಸಿಬ್ಬಂದಿಯ ಕೈಕಾಲುಗಳನ್ನು ಕಟ್ಟಿಹಾಕಿ, ಅವರನ್ನು ರೂಂನಲ್ಲಿ ಕೂಡಿ ಹಾಕಿ ದರೋಡೆ ನಡೆಸಿದ್ದಾರೆ.
ಮಹಾರಾಷ್ಟ್ರದ ದರೋಡೆಕೋರರ ಗ್ಯಾಂಗ್ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಪೊಲೀಸರು ಮಹಾರಾಷ್ಟ್ರವನ್ನು ಸಂಪರ್ಕಿಸುವ ರಸ್ತೆಗಳಿಗೆ ನಾಕಾ ಬಂಧಿ ಹಾಕಿದ್ದಾರೆ. ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಹಾಗೂ ಆಧಿಕಾರಿಗಳು ಆ ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಪೊಲೀಸರು ಬ್ಯಾಂಕ್‌ನಲ್ಲಿದ್ದ ಸಿಸಿ ಕ್ಯಾಮರಾಗಳ ದೃಶ್ಯ ಪರಿಶೀಲಿಸಿದ್ದಾರೆ.
ಹಣ ಮತ್ತು ಚಿನ್ನ ಕಳ್ಳತನವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಹಕರು ಇಂದು ಸಂಜೆಯವರೆಗೂ ಎಸ್‌ಬಿಐ ಬ್ಯಾಂಕ್ ಮುಂಭಾಗ ಜಮಾಯಿಸಿದ್ದಾರೆ. ಜನರನ್ನು ಚದುರಿಸಲು ಪೊಲೀಸರು ಪರದಾಡಬೇಕಾಯಿತು. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ಆಧಿಕಾರಿಗಳು ನಿಖರವಾಗಿ ಮಾಹಿತಿ ನೀಡಿದ ಬಳಿಕವಷ್ಟೇ ದರೋಡೆಯಾದ ನಗದು ಹಾಗೂ ಚಿನ್ನಾಭರಣ ಮಾಹಿತಿ ಲಭ್ಯವಾಗಲಿದೆ. ಬ್ಯಾಂಕ್ ನಲ್ಲಿದ್ದ ಸಿಸಿ ಕ್ಯಾಮೆರಾ ಹಾರ್ಡ್ ಡಿಸ್ಕ್ ವಶಕ್ಕೆ ಪಡೆದ ಪೊಲೀಸರು ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಈ ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳನ್ನು ಕರೆಸಲು ಸೂಚಿಸಲಾಗಿದೆ.
ಚಡಚಣ ಪಟ್ಟಣದಿಂದ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ಮಂಗಳವೇಡ ತಾಲೂಕಿನ ಹುಲಿಜಂತಿ ಗ್ರಾಮದ ಮಾರ್ಗವಾಗಿ ಹೋಗಿರುವ ದರೋಡೆಕೋರರ ಗುಂಪು ಚದುರಿಕೊಂಡು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹುಲಿಜಂತಿ ಗ್ರಾಮದ ಬಳಿ ದರೋಡೆಕೋರರು ಪ್ರಯಾಣ ಮಾಡುತ್ತಿದ್ದ ಕಾರು ಕುರಿಗಳಿಗೆ ಡಿಕ್ಕಿಯಾಗಿದೆ. ಕುರಿಗಳಿಗೆ ಡಿಕ್ಕಿಯಾದದ್ದನ್ನ ಪ್ರಶ್ನಿಸಿದ ಗ್ರಾಮಸ್ಥರಿಗೆ ಕಾರಿನಲ್ಲಿದ್ದ ಓರ್ವ ದರೋಡೆಕೋರ ಕೈಯಲ್ಲಿ ಪಿಸ್ತೂಲ್ ಹಿಡಿದು ಬೆದರಿಕೆ ಹಾಕಿ ಪರಾರಿಯಾಗಿರುವುದು ತಿಳಿದುಬಂದಿದೆ. KA 24 DH 2456 ನಂಬರಿನ ಕಾರಿನಲ್ಲಿ ಬಂದಿದ್ದ ಓರ್ವ ದರೋಡೆಕೋರನ ಕಾರಿನಲ್ಲಿ ಅಲ್ಪಸ್ವಲ್ಪ ಚಿನ್ನಾಭರಣ ಬಿದ್ದಿತ್ತು. ಇನ್ನುಳಿದ ದರೋಡೆಕೋರರು ಪ್ರತ್ಯೇಕವಾಗಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.