-->
ಎಂಬಿಎ ವಿದ್ಯಾರ್ಥಿನಿಗೆ ಕಾರ್ ಡ್ರೈವರ್ ಮೇಲೆ ಪ್ರೀತಿ-ಪ್ರಣಯ: ವಿವಾಹವಾದ ಒಂದೇ ವರ್ಷದಲ್ಲಿ ಆಕೆ ಅನುಮಾನಾಸ್ಪದವಾಗಿ ಮೃತ್ಯು

ಎಂಬಿಎ ವಿದ್ಯಾರ್ಥಿನಿಗೆ ಕಾರ್ ಡ್ರೈವರ್ ಮೇಲೆ ಪ್ರೀತಿ-ಪ್ರಣಯ: ವಿವಾಹವಾದ ಒಂದೇ ವರ್ಷದಲ್ಲಿ ಆಕೆ ಅನುಮಾನಾಸ್ಪದವಾಗಿ ಮೃತ್ಯು



ಬೆಂಗಳೂರು: ಒಂದು ವರ್ಷದ ಹಿಂದೆಷ್ಟೇ ಪ್ರೀತಿಸಿ ಮದುವೆಯಾಗಿದ್ದ ಈ ಮುದ್ದಾದ ಜೋಡಿ. ಆದರೆ ಅದೇನಾಯ್ತೋ ಗೊತ್ತಿಲ್ಲ, ಆಕೆ ಮಾತ್ರ ಭೀಮನ ಅಮಾವಾಸ್ಯೆಯ ಮರುದಿನ ನೇಣಿಗೆ ಶರಣಾಗಿದ್ದಾಳೆ. ಇದೀಗ ಆಕೆಯ ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ನಡೆದಿರುವುದು‌ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ.

ಸ್ಪಂದನಾ (24) ಮೃತಪಟ್ಟ ಯುವತಿ. ಯಲಹಂಕದ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಕನಕಪುರದ ನಿವಾಸಿ ಸ್ಪಂದನಾಗೆ ಇನ್‌ಸ್ಟಾಗ್ರಾಂನಲ್ಲಿ ಅಭಿಷೇಕ್ ಪರಿಚಯವಾಗಿದ್ದಾನೆ. ಆತ ಕಾರ್ ಡ್ರೈವರ್. ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಬಳಿಕ ಕಾಡಿಬೇಡಿ ಮನೆಯವರ ವಿರೋಧದ ನಡುವೆಯೂ ಸ್ಪಂದನಾಳನ್ನು ವಿವಾಹವಾಗಿದ್ದ.  ಮಾದನಾಯಕನಹಳ್ಳಿಯ ಅಂಚೆ ಪಾಳ್ಯದಲ್ಲಿ ಅಭಿಷೇಕ್ - ಸ್ಪಂದನಾ ವಾಸವಾಗಿದ್ದರು. ಆದರೆ ವಿವಾಹವಾದ ಒಂದೂವರೆ ವರ್ಷಕ್ಕೇ ಸ್ಪಂದನಾ ದುರಂತ ಸಾವು ಕಂಡಿದ್ದಾಳೆ.

ಜುಲೈ 24ರ ಭೀಮನ ಅಮವಾಸ್ಯೆಯ ದಿನ ಬೆಳಗ್ಗೆ 10 ಗಂಟೆಗೆ ಪತಿಗೆ ಖುಷಿಯಿಂದಲೇ ಪೂಜೆ ಮಾಡಿದ್ದಳು ಸ್ಪಂದನಾ. ಆದರೆ ಇದು  ಕ್ಷಣಮಾತ್ರದ ಖುಷಿಯಾಗಿತ್ತು. ರಾತ್ರಿ 11ಗಂಟೆಗೆ ಅಭಿಷೇಕ್‌ಗೆ ಆತನ ಆಫೀಸ್‌ನಲ್ಲಿದ್ದ ಯುವತಿ ಮಾಡಿದ ಫೋನ್ ಕರೆಯಿಂದ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಮೊದಲೇ ಪತಿಯ ಮೇಲೆ ಅನುಮಾನದಲ್ಲಿದ್ದ ಸ್ಪಂದನಾ ಮಾನಸಿಕವಾಗಿ ಕುಗ್ಗಿದ್ದಳು. ಆದ್ದರಿಂದ ರಾತ್ರಿ 12:45 ಸ್ಪಂದನಾ ಮನೆಯ ಕಿಟಕಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆಗೂ ಮುನ್ನ ಸ್ಪಂದನಾ, ತನ್ನ ತಂಗಿಗೆ ಮೆಸೇಜ್ ಮಾಡಿದ್ದು, ನನ್ನ ಸಾವಿಗೆ ಅಭಿಷೇಕ್, ಅವರ ತಾಯಿ ಹಾಗೂ ಅವರ ಕಚೇರಿಯಲ್ಲಿದ್ದವರು ಕಾರಣ ಎಂದು ಮೆಸೇಜ್ ಮಾಡಿ ನೇಣಿಗೆ ಶರಣಾಗಿದ್ದಾಳೆ.

ಮತ್ತೊಂದೆಡೆ ಮದುವೆಯಾದ ಬಳಿಕ ಸ್ಪಂದನಾಳಿಗೆ ಅಭಿಷೇಕ್​ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿದೆ. ಅಭಿಷೇಕ್​ ಕುಟುಂಬ ಕಿರುಕುಳ ನೀಡುತ್ತಿದ್ದರ ಬಗ್ಗೆ ಸ್ಪಂದನಾ ತಂದೆಗೆ ಹೇಳಿದ್ದರಿಂದ 5ಲಕ್ಷ ಹಣವನ್ನು ಕೊಟ್ಟು ರಾಜಿ ಸಂಧಾನ ಮಾಡಿಸಿದ್ದರಂತೆ. ಮತ್ತೆ ನಿನ್ನೆ ತಂದೆಗೆ ಕರೆ ಮಾಡಿ ಅತ್ತೆ ಮಾತನ್ನು ಕೇಳಿ ನನ್ನ ಪತಿ ಕಿರುಕುಳ ಕೊಡ್ತಿದ್ದಾನೆಂದು ಕಣ್ಣೀರಿಟ್ಟಿದ್ದಳಂತೆ ಸ್ಪಂದನಾ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕರೆ ಮಾಡಿ ಸ್ಪಂದನಾ ಸಾವನ್ನಪ್ಪಿದ್ದಾಳೆ ಎಂಬ ವಿಚಾರ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ಹೋಗಿ ನೋಡಿದಾಗ ಆಕೆ ಪ್ರಾಣ ಬಿಟ್ಟಿದ್ದಳು.

ನೇಣು ಬಿಗಿದ ಸ್ಥಿತಿಯಲ್ಲಿದ್ದ ಸ್ಪಂದನಾ ಮೃತದೇಹವನ್ನು ಯಾರಿಗೂ ಮಾಹಿತಿ ಕೊಡದೇ ತಾವೇ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದ್ದರು ಅಭಿಷೇಕ್ ಕುಟುಂಬ. ಸ್ಪಂದನಾ ಮೈಮೇಲೆ ಗಾಯದ ಗುರುತುಗಳಿವೆ ಅನ್ನುವ ಆರೋಪವೂ ಇದೆ. ಹೀಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಿಕ ಸ್ಪಂದನಾ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು.

ಈ ಘಟನೆಗೆ ಸಂಬಂಧಿಸಿದಂತೆ ಪತಿ ಅಭಿಷೇಕ್ ಮತ್ತು ಅತ್ತೆ ಲಕ್ಷ್ಮಮ್ಮ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಬಳಿಕ ಸ್ಪಂದನಾ ಸಾವಿಗೆ ಅಸಲಿ ಕಾರಣ ಏನು ಎನ್ನುವುದು ತಿಳಿದುಬರಲಿದೆ.

Ads on article

Advertise in articles 1

advertising articles 2

Advertise under the article