-->
 ಒಂದೇ ಸೀರೆಗೆ ಕೊರಳೊಡ್ಡಿದ ತಾಯಿ-ಮಗಳು; ಡೆತ್ ನೋಟ್‌ನಲ್ಲಿ ಬಯಲಾಯ್ತು ಸತ್ಯ!

ಒಂದೇ ಸೀರೆಗೆ ಕೊರಳೊಡ್ಡಿದ ತಾಯಿ-ಮಗಳು; ಡೆತ್ ನೋಟ್‌ನಲ್ಲಿ ಬಯಲಾಯ್ತು ಸತ್ಯ!


ಮಂಡ್ಯ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ತಾಯಿಯೊಬ್ಬರು ತಮ್ಮ ಒಂಬತ್ತು ವರ್ಷದ ಮಗಳಿಗೆ ನೇಣು ಬಿಗಿದು ಕೊಂದು, ನಂತರ ಅದೇ ಸೀರೆಯಿಂದ ತಾವೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹಗಳ ಪಕ್ಕದಲ್ಲಿ ದೊರೆತ ಡೆತ್ ನೋಟ್‌ನಲ್ಲಿ ಪತಿಯಿಂದ ತಮಗಾದ ಕಿರುಕುಳದ ಕುರಿತು ವಿವರವಾಗಿ ಬರೆಯಲಾಗಿದೆ.

ಸಕ್ಕರೆ ನಾಡು ಮಂಡ್ಯದಲ್ಲಿ ಜುಲೈ 2 ರಂದು ನಡೆದ ಈ ದುರಂತ ಪ್ರಕರಣ ಎಲ್ಲರನ್ನೂ ತಲ್ಲಣಗೊಳಿಸಿದೆ. "ನನಗೆ ಈ ಜೀವನ ಬೇಡ. ಮದುವೆಯಾಗಿ ಯಾವುದೇ ಸುಖವಿಲ್ಲ," ಎಂದು ಡೆತ್ ನೋಟ್ ಬರೆದಿಟ್ಟಿರುವ ರಶ್ಮಿ (28) ಮತ್ತು ಅವರ ಮಗಳು ದಿಶಾ (9) ಮೃತ ದುರ್ದೈವಿಗಳು. ತಾಯಿ-ಮಗಳ ಈ ಅನಿರೀಕ್ಷಿತ ಸಾವಿನಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

ಮಂಡ್ಯದ ನೆಹರು ನಗರದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ರಶ್ಮಿ ಮತ್ತು ದಿಶಾ ಚನ್ನಪಟ್ಟಣ ಮೂಲದವರು. ರಶ್ಮಿ ಕಳೆದ ಐದು ವರ್ಷಗಳಿಂದ ಪತಿಯಿಂದ ದೂರವಾಗಿ, ಮಂಡ್ಯ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಕೆಲಸ ನಿರ್ವಹಿಸುತ್ತಿದ್ದರು. ಜೀವನದಲ್ಲಿ ಎದುರಿಸಿದ ಕಷ್ಟಗಳಿಂದ ಮನನೊಂದ ರಶ್ಮಿ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೃತರ ಮನೆಯಲ್ಲಿ ಸಿಕ್ಕಿರುವ ಡೆತ್ ನೋಟ್‌ನಲ್ಲಿ, "ನನಗೆ ಈ ಜೀವನ ಇಷ್ಟ ಇಲ್ಲ‌. ಮದುವೆಯಾಗಿಯೂ ಏನು ಸುಖವಿಲ್ಲ. ಒಂಟಿಯಾಗಿ 5 ವರ್ಷದಿಂದ ಜೀವನ ಮಾಡ್ತಿದ್ದೇನೆ. ಆದರೂ ಗಂಡ ಬೇರೆ ಮದುವೆ ಆಗುತ್ತೇನೆ, ನನ್ನ ನಿನ್ನ ಸಂಬಂಧ ಇಲ್ಲವೆಂದು ಬರೆದುಕೊಡುವಂತೆ ಒತ್ತಾಯಿಸುತ್ತಿದ್ದಾನೆ. ನನಗೆ ಈ ಜೀವನ ಸಾಕಾಗಿದೆ. ಅಮ್ಮನನ್ನ ಚೆನ್ನಾಗಿ ನೋಡಿಕೊ ಅಣ್ಣ..." ಎಂದು ಬರೆಯಲಾಗಿದೆ. ಘಟನಾ ಸ್ಥಳಕ್ಕೆ ಮಂಡ್ಯ ಪೂರ್ವ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article