ಬೆಂಗಳೂರು ಟ್ರಾಫಿಕ್: ಸ್ನೇಹಿತೆ ದುಬೈ ತಲುಪಿದ್ದಳು, ನಾನಿನ್ನೂ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದೇನೆ- ಪೋಸ್ಟ್ ವೈರಲ್
Tuesday, July 22, 2025
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಬಂದಿದೆ. ಟ್ರಾವೆಲ್ ಬ್ಲಾಗರ್ ಒಬ್ಬರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೋ ಮತ್ತು ತಮಾಷೆಯ ಟಿಪ್ಪಣಿಯು ವೈರಲ್ ಆಗಿದೆ. ಇದಕ್ಕೆ ನೂರಾರು ಬಳಕೆದಾರರು ತಮ್ಮದೇ ಆದ ಟ್ರಾಫಿಕ್ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಕಿಕ್ಕಿರಿದ ರಸ್ತೆಯ ದೃಶ್ಯವೊಂದನ್ನು ಪೋಸ್ಟ್ ಮಾಡಿದ ಅವರು, "ನಾನು ಇನ್ನೂ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದೇನೆ. ಏರ್‌ಪೋರ್ಟ್‌ನಲ್ಲಿ ಡ್ರಾಪ್ ಮಾಡಿ ಬಂದ, ನನ್ನ ಸ್ನೇಹಿತೆ ದುಬೈ ತಲುಪಿಯಾಗಿದೆ'' ಎಂದು ಪೋಸ್ಟ್ ಮಾಡಿದ್ದರು. ಇವರ ಈ ಪೋಸ್ಟ್‌ಗೆ ನಾಲ್ಕು ದಿನಗಳಲ್ಲಿ ಸಾವಿರಾರು ಲೈಕ್ ಮತ್ತು ಕಾಮೆಂಟ್‌ಗಳು ಬಂದಿದೆ.
ಬ್ಲಾಗರ್‌ನ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಿವಾಸಿಯೊಬ್ಬರು, ತಮಗಾದ ಇದೇ ರೀತಿಯ ಅನುಭವವನ್ನು ಹಂಚಿಕೊಂಡಿದ್ದಾರೆ. “ನಾನು ಮಾಲೆ(ಮಾಲ್ಡೀವ್ಸ್)ಯಿಂದ ವಿಮಾನ ನಿಲ್ದಾಣಕ್ಕೆ ಹೊರಟಿದ್ದೆ. ಚೆಕ್ ಇನ್ ಆದ ಬಳಿಕ ನಾನು ಸ್ನೇಹಿತೆಗೆ ಕರೆ ಮಾಡಿದ್ದೆ, ಆಗ ಅವಳು ಮನೆಯಿಂದ ಹೊರಟಿದ್ದಳು. ನಾನು ಬೆಂಗಳೂರಿನಲ್ಲಿ ವಿಮಾನದಿಂದ ಇಳಿದು ಬ್ಯಾಗ್ ತೆಗೆದುಕೊಂಡು ಹೊರಬಂದೆ, ಆದರೆ ಅವಳು ಇನ್ನೂ ಟ್ರಾಫಿಕ್‌ನಲ್ಲಿದ್ದಳು,” ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಅನುಭವವನ್ನು ಹಂಚಿಕೊಂಡಿರುವ ಇನ್ನೊಬ್ಬ ಬಳಕೆದಾರು, "ನನ್ನ ಪೋಷಕರು ನನ್ನನ್ನು ಏರ್ ಪೋರ್ಟ್ ಡ್ರಾಪ್ ಮಾಡಿ ಹೋಗಿದ್ದರು. ನಾನು ದಿಲ್ಲಿಯಲ್ಲಿ ಇಳಿದಾಗ, ಅವರು ಆಗಷ್ಟೇ ಮನೆಗೆ ತಲುಪಿದ್ದರು," ಎಂದು ಹೇಳಿಕೊಂಡಿದ್ದಾರೆ.
ಮತ್ತೊಬ್ಬರು 'ಈ ಸಮಸ್ಯೆಯು ಕೇವಲ ಬೆಂಗಳೂರಿನದ್ದಲ್ಲ. ಎಲ್ಲ ನಗರಗಳೂ ಹೀಗೆಯೇ ಎಂದು ಕಮೆಂಟ್ ಮಾಡಿದ್ದಾರೆ. ಅವರು ಹೈದರಾಬಾದ್ ನ ಅನುಭವನ್ನು ಹಂಚಿಕೊಂಡಿದ್ದಾರೆ. "ಒಂದು ಇಂಟರ್-ಆಫೀಸ್ ಬಸ್ 6:30ಕ್ಕೆ ಹೊರಟು ಕೇವಲ 1.9 ಕಿ.ಮೀ ದೂರದ ಕಚೇರಿಗೆ 7:10ಕ್ಕೆ ತಲುಪಿತು. ನಾವು ಕೆಲವರು ನಡೆದು 20 ನಿಮಿಷದಲ್ಲಿ ತಲುಪಿದ್ದೆವು. ಇದು ಎಲ್ಲ ನಗರಗಳ ಕಥೆ," ಎಂದು ಅವರು ಪೋಸ್ಟ್ ಮಾಡಿದ್ದಾರೆ.