ಭಾರತದ ಗಡಿ ದಾಟಿ ಅಕ್ರಮವಾಗಿ ಬರಲು ಯತ್ನಿಸಿದ ಪಾಕ್‌ನ ಅಪ್ರಾಪ್ತ ಜೋಡಿ: ನೀರಿಲ್ಲದೆ ರಾಜಸ್ತಾನದ ಮರುಭೂಮಿಯಲ್ಲಿ ದುರಂತ ಸಾವು
Tuesday, July 1, 2025
ರಾಜಸ್ತಾನ: ಅಕ್ರಮವಾಗಿ ಗಡಿದಾಟಿ ಭಾರತಕ್ಕೆ ಬರಲು ಯತ್ನಿಸಿದ ಅಪ್ರಾಪ್ತ ನವ ದಂಪತಿ ನೀರಿಲ್ಲದೆ (ನಿರ್ಜಲೀಕರಣದಿಂದ) ಮೃತಪಟ್ಟಿರುವ ಮನಕಲಕುವ ಘಟನೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದಿದೆ.
ಪಾಕಿಸ್ತಾನ ಮೂಲದ ರವಿ ಕುಮಾರ್ (17) ಹಾಗೂ ಶಾಂತಿ ಬಾಯಿ (15) ಎಂಬ ಹಿಂದೂ ಅಪ್ರಾಪ್ತ ಜೋಡಿ ವಿವಾಹವಾಗಿ ಭಾರತದಲ್ಲಿ ನೆಮ್ಮದಿಯ ಜೀವನ ನಡೆಸುವ ಕನಸು ಕಂಡಿತ್ತು. ಆದರೆ ವೀಸಾ ಸಿಗದ ಕಾರಣ ದಂಪತಿ ಅಕ್ರಮವಾಗಿ ಭಾರತದ ಗಡಿಯನ್ನು ದಾಟಲು ಯತ್ನಿಸಿತ್ತು. ಈ ವೇಳೆ ಕುಡಿಯಲು ನೀರಿಲ್ಲದೇ ರಾಜಸ್ಥಾನದ ಜೈಸಲ್ಮೇರ್ ಮರಭೂಮಿಯಲ್ಲಿ ದುರಂತ ಅಂತ್ಯಕಂಡಿದೆ.
ಮದುವೆಯಾಗಿ ಭಾರತದಲ್ಲಿ ನೆಮ್ಮದಿಯ ಜೀವನ ನಡೆಸುವ ಕನಸು ಹೊತ್ತಿದ್ದ ಈ ಜೋಡಿ, ವೀಸಾಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಘರ್ಷಣೆಯಿಂದ ಅವರಿಗೆ ವೀಸಾ ದೊರಕಿರಲಿಲ್ಲ. ವೀಸಾ ಬಾರದ ಹಿನ್ನೆಲೆಯಲ್ಲಿ ಅವರು ಅಕ್ರಮವಾಗಿ ಭಾರತ-ಪಾಕಿಸ್ತಾನ ಗಡಿಯನ್ನು ದಾಟಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಈ ಅಪ್ರಾಪ್ತ ವಯಸ್ಕ ಜೋಡಿ ನಿರ್ಜಲೀಕರಣದಿಂದ ಮೃತಪಟ್ಟಿದೆ.
ಈ ಬಗ್ಗೆ ಪೊಲೀಸ್ ಅಧಿಕಾರಿ ಸುಧೀರ್ ಚೌಧರಿ ಪ್ರತಿಕ್ರಿಯಿಸಿದ್ದು, ಅಪ್ರಾಪ್ತ ದಂಪತಿಯ ಮೃತದೇಹ ಭಿಭಿಯಾನ್ ಮರುಭೂಮಿಯಲ್ಲಿ ಪತ್ತೆಯಾಗಿವೆ. ವೀಸಾ ದೊರಕದ ಕಾರಣ ಭಾರತದಲ್ಲಿ ಹೊಸ ಜೀವನವನ್ನು ಪ್ರಾರಂಭಿಸಲು ರವಿ ಕುಮಾರ್ ಮತ್ತು ಶಾಂತಿ ಬಾಯಿ ಅಕ್ರಮವಾಗಿ ಗಡಿ ದಾಟಲು ಯತ್ನಿಸಿದ್ದರು. ಒಂದು ವಾರದ ಹಿಂದೆ ಗಡಿ ದಾಟಿದ ಬಳಿಕ, ಅವರು ದಾರಿ ತಪ್ಪಿ ನಿರ್ಜನ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು. ಆ ವೇಳೆ ಕುಡಿಯಲು ನೀರಿಲ್ಲದೆ ಬಾಯಾರಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಅವರ ಬಳಿ ಖಾಲಿ ಜರ್ರಿ ಬಾಟಲ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸದ್ಯ ರವಿ ಕುಮಾರ್‌ಮತ್ತು ಶಾಂತಿ ಬಾಯಿ ಮೃತದೇಹ ಮರಣೋತ್ತರ ಪರೀಕ್ಷೆ ನಡೆದಿದೆ. ಸಾವಿಗೆ ನಿಖರವಾದ ಕಾರಣವೇನು ಎನ್ನುವುದು ತಿಳಿದುಬರಬೇಕಿದೆ ಎಂದು ಎಸ್ಪಿ ಸುಧೀರ್ ಚೌಧರಿ ತಿಳಿಸಿದ್ದಾರೆ.
ಇನ್ನು ಭಾರತ ಸರ್ಕಾರವು ಅನುಮತಿ ನೀಡಿದ ಮೃತದೇಹಗಳನ್ನು ಜೈಸಲ್ಮೇರ್‌ನಲ್ಲಿರುವ ಸಂಬಂಧಿಕರು ಸ್ವೀಕರಿಸಲು ಸಿದ್ಧರಿದ್ದಾರೆ. ಹಾಗೆಯೇ ಒಂದು ವೇಳೆ ಮೃತದೇಹಗಳನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ, ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ಸಿದ್ಧರಿದ್ದೇವೆ ಎಂದು ಹಿಂದೂ ಪಾಕಿಸ್ತಾನಿ ಡಿಸ್ಪ್ಲೇಸ್ಡ್ ಯೂನಿಯನ್ ಮತ್ತು ಬಾರ್ಡರ್ ಪೀಪಲ್ ಆರ್ಗನೈಸೇಶನ್‌ನ ಜಿಲ್ಲಾ ಸಂಯೋಜಕ ದಿಲೀಪ್ ಸಿಂಗ್ ಸೋಧಾ ಹೇಳಿದ್ದಾರೆ.
ಒಟ್ಟಿನಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಹೊಸ ಸಂಸಾರ ಕಟ್ಟಿಕೊಂಡು ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಂಡಿತ್ತು. ಆದ್ರೆ ರೀತಿಯ ಸಾವು ಕಂಡಿದ್ದು ನಿಜಕ್ಕೂ ಬೇಸರ ತರಿಸಿದೆ.