ಕ್ಷುಲ್ಲಕ ಕಾರಣಕ್ಕೆ ಕಿರಿಕ್: ಮಾಡೆಲ್‌ಗೆ ಹಿಗ್ಗಾಮುಗ್ಗ ಥಳಿಸಿದ ಬಸ್ ಸಿಬ್ಬಂದಿ
ಬೆಂಗಳೂರು: ಅವನು ಮಾಡೆಲ್. ಅವನಿಗೆ ತನ್ನ ದೇಹ ಮತ್ತು ಮುಖದ ಸೌಂದರ್ಯವೇ ದೊಡ್ಡ ಆಸ್ತಿ. ಅದನ್ನು ಕಾಪಾಡಿಕೊಳ್ಳಲು ಹರಸಾಹಸವನ್ನೇ ಮಾಡುತ್ತಾನೆ. ಆದರೆ ಅದೊಂದು ಸಣ್ಣ ಕಾರಣಕ್ಕೆ ಬಸ್ ಸಿಬ್ಬಂದಿ ಈತನ ಮೇಲೆ ಎರಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಹಲ್ಲೆಗೈದು, ದೇಹದ ವಿವಿಧೆಡೆ ಪರಚಿ ಬಾಸುಂಡೆ ಬರುವಂತೆ ರಾಡು, ದೊಣ್ಣೆಗಳಿಂದ ಥಳಿಸಿದ್ದು, ಬೆಲೆ ಬಾಳುವ ವಸ್ತು ದೋಚಿರುವ ಆರೋಪ ಕೇಳಿ ಬಂದಿದೆ.
ಮಾಡೆಲ್ ಆಗಿರುವ ಧ್ರುವ್ ನಾಯ್ಕ್ ಎಂಬಾತ ಥೈಲ್ಯಾಂಡ್ಗೆ ಹೋಗಿ ಜುಲೈ 1ರಂದು ಬೆಳಗ್ಗೆ ಬೆಂಗಳೂರಿಗೆ ಬಂದಿದ್ದರು. ಹಾಗೆ ಬಂದವರು ಖಾಸಗಿ ಹೋಟೆಲ್ನಲ್ಲಿ ಉಳಿದುಕೊಂಡಿದ್ದು, ರಾತ್ರಿ 11.30ಕ್ಕೆ ಬೆಂಗಳೂರಿನಿಂದ ತಮ್ಮ ಊರು ಹುಬ್ಬಳ್ಳಿಗೆ ಹೋಗಲು ಸೀ ಬರ್ಡ್ ಬಸ್ ಬುಕ್ ಮಾಡಿದ್ದಾರೆ. ರಾತ್ರಿ ಬಸ್ ಏರಲು ಬಂದವರು ನರಕ ಕಾಣುವಂತಾಗಿದೆ.
ರಾತ್ರಿ 1ಗಂಟೆಗೆ ತನ್ನ ಸ್ನೇಹಿತರೊಂದಿಗೆ ಊರಿಗೆ ತೆರಳಲು ಆನಂದ್ ರಾವ್ ಸರ್ಕಲ್ ಬಳಿಗೆ ಧ್ರುವ್ ನಾಯ್ಕ್ ಬಂದಿದ್ದರು. ಹೀಗೆ ಬಂದವರು ಬಸ್‌ನಿಂದ ಇಳಿದು ಓರ್ವ ಸ್ನೇಹಿತನೊಂದಿಗೆ ನಿಂತು ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಬಸ್ ಬಾಗಿಲು ಬಂದ್ ಮಾಡಿದ ಚಾಲಕ ಬಸ್ ನಿಧಾನವಾಗಿ ಮೂವ್ ಮಾಡಿದ್ದಾನೆ. ಆಗ ಧ್ರುವ್ ನಾಯ್ಕ್ ಕೈ ಅಡ್ಡಗಟ್ಟಿ ನಾನು ಬರೋದಿದೆ ಬಸ್ ನಿಲ್ಲಿಸಿ ಎಂದಿದ್ದಾರೆ. ಈ ವೇಳೆ ಸೀ ಬರ್ಡ್ ಸಿಬ್ಬಂದಿ ಮತ್ತು ಧ್ರುವ್ ನಾಯ್ಕ್ ಮಧ್ಯೆ ಗಲಾಟೆ ಉಂಟಾಗಿದೆ.
ಇದೇ ವೇಳೆ ಸಿಬ್ಬಂದಿ ಸೇರಿ ಧ್ರುವ್ ನಾಯ್ಕ್ ಮೇಲೆ ಹಲ್ಲೆ ಮಾಡಿದ್ದಾರೆ. ಮುಖ, ಕತ್ತು, ಎದೆ, ಭಾಗಕ್ಕೆ ಪರಚಿದ ಗುರುತಾಗಿದ್ದು, ಬೆನ್ನು ಮತ್ತು ಭುಜದ ಮೇಲೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ. ಇದೇ ವೇಳೆ ದುಬಾರಿ ಬೆಲೆಯ ಶೂ, ಏರ್ ಬರ್ಡ್ಸ್, 44 ಸಾವಿರ ರೂ. ಬೆಲೆಯ ಸನ್ ಗ್ಲಾಸ್, 1.85 ಲಕ್ಷ ರೂ ಬೆಲೆಯ ಪ್ಲಾಟಿನಂ ಪೆಂಡೆಂಟ್ ಇರುವ ಸಿಲ್ವರ್ ಚೈನ್, ಪಾಸ್ ಪೋರ್ಟ್, 45 ಸಾವಿರ ರೂ ಬೆಲೆಯ ವಾಚ್, 40 ಸಾವಿರ ರೂ ಮೌಲ್ಯದ ಪ್ಲಾಟಿನಂ ರಿಂಗ್ ಸೇರಿದಂತೆ ಪರ್ಸ್ನಲ್ಲಿದ್ದ 10 ಸಾವಿರ ರೂ ಹಣ ಕದ್ದಿರುವುದಾಗಿ ಧ್ರುವ್ ನಾಯ್ಕ್ ಆರೋಪಿಸಿದ್ದಾರೆ.
ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೆ ಪೊಲೀಸರು ಮಾತ್ರ ತನಿಖೆ ಆರಂಭಿಸದೇ, ಸಿಸಿಟಿವಿ ಪರಿಶೀಲನೆ ಕೂಡ ನಡೆಸದೇ ಬೇಜವಾಬ್ದಾರಿ ತೋರಿದ್ದಾರೆ ಎಂದು ಧ್ರುವ್ ನಾಯ್ಕ್ ಪರ ವಕೀಲರು ಆರೋಪಿಸಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.
ಅದೇನೆ ಹೇಳಿ ಕೇವಲ ಸಿಗರೇಟ್ ಸೇದುತ್ತಾ, ಬಸ್ ಹತ್ತುವ ವಿಚಾರಕ್ಕೆ ಗಲಾಟೆ ಆಯ್ತೋ ಅಥವಾ ಧ್ರುವ್ ನಾಯ್ಕ್ ಕೂಡ ಬಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೊ ಅನ್ನೋ ಸತ್ಯಾ ಸತ್ಯತೆ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಹಾಗಾಗಿ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಬೇಕಿದೆ.