ಅಜ್ಜಿಯ ಹುಟ್ಟುಹಬ್ಬಕ್ಕೆ ಎಐ ಚಳಕದಿಂದ ಸ್ವರ್ಗಸ್ಥರಾದ ಅಜ್ಜನನ್ನು ಭೂಮಿಗಿಳಿಸಿದ ಮೊಮ್ಮಗಳು
ಈ ಹಿಂದೆ ನಮ್ಮೊಂದಿಗಿದ್ದ ನಮ್ಮವರು, ಆತ್ಮೀಯ ವ್ಯಕ್ತಿಗಳು ದೈಹಿಕವಾಗಿ ಜೊತೆಗಿಲ್ಲ ಎನ್ನುವ ನೋವು ಯಾರಿಗಾದರೂ ಜೀವನ ಪರ್ಯಂತ ಕಾಡುತ್ತಲೇ ಇರುತ್ತದೆ. ವರುಷಗಳೆಷ್ಟೇ ಆದರೂ ಅಗಲಿದ ಆತ್ಮೀಯ ವ್ಯಕ್ತಿಯ ಫೋಟೋ, ವೀಡಿಯೋ ನೋಡಿದಾಗ ಕಣ್ಣಂಚಿನಲ್ಲಿ ನೀರೂ ಬರುವುದು ಸಹಜ. ಆದರೆ ಇನ್ಫ್ಲುಯೆನ್ಸರ್ ಅಪೂರ್ವ ವಿಜಯ್ ಕುಮಾರ್ ಎಂಬವರು ತಮ್ಮ ಅಜ್ಜಿಯ ಹುಟ್ಟುಹಬ್ಬಕ್ಕೆ ಊಹೆ ಮಾಡಲಾಗದ ಉಡುಗೊರೆಯನ್ನು ನೀಡಿ ಅಜ್ಜಿಯನ್ನು ಭಾವುಕರನ್ನಾಗಿಸಿದ್ದಾರೆ. ಎಐ ತಂತ್ರಜ್ಞಾನ ಬಳಸಿ ಅವರು ಅಗಲಿದ ಅಜ್ಜನು ಅಜ್ಜಿಯ ಕೈ ಹಿಡಿದು ನಡೆಯುವ ವಿಡಿಯೋವನ್ನು ಮರುಸೃಷ್ಟಿಸಿ ಅಜ್ಜಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಳಕೆದಾರರು ಮೊಮ್ಮಗಳ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಪೂರ್ವ ವಿಜಯ್ ಕುಮಾರ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಐ ರಚಿತ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಅಜ್ಜಿಗೆ ಪ್ರೀತಿಯ ಹುಟ್ಟುಹಬ್ಬದ ಶುಭಾಶಯಗಳನ್ನು ಮೊಮ್ಮಗಳು ಕೋರಿದ್ದಾರೆ. ಜನ್ಮದಿನದ ಶುಭಾಶಯಗಳು ಅಮ್ಮು, ಅಪ್ಪುಪನ್ ಇಲ್ಲದೇ ಬದುಕುವುದು ಕಷ್ಟ ಎಂದು ನನಗೆ ತಿಳಿದಿದೆ. ಆದರೆ ಪ್ರತಿ ಕ್ಷಣ ಹಾಗೂ ಪ್ರತಿ ಸಂತೋಷದಲ್ಲಿ ಅವ್ರು ಇದ್ದಾರೆ. ನೀವು ಅವರನ್ನು ನೋಡದೇ ಇರಬಹುದು. ಆದರೆ ಅವರು ನಿಮ್ಮನ್ನು ಸದಾ ನೋಡುತ್ತಾರೆ. ನಿಮ್ಮನ್ನು ರಕ್ಷಿಸುತ್ತಾರೆ. ನಿಮ್ಮ ಪಕ್ಕದಲ್ಲಿ ಸದಾ ನಡೆಯುತ್ತಾರೆ ಎಂದಿದ್ದಾರೆ.
ಮೊಮ್ಮಗಳು ಹಂಚಿಕೊಂಡ ವಿಡಿಯೋದಲ್ಲಿ ಅಜ್ಜಿಯೂ ಡೈನಿಂಗ್ ಟೇಬಲ್ ಮೇಲೆ ಕುಳಿತುಕೊಂಡಿದ್ದು, ಈ ವೇಳೆಯಲ್ಲಿ ಎಐ ರಚಿತ ವಿಡಿಯೋವೊಂದು ಪ್ಲೇ ಆಗುತ್ತದೆ. ಅಜ್ಜಿಯು ತನ್ನ ಪತಿಯ ಜೊತೆಗೆ ಕೈ ಹಿಡಿದುಕೊಂಡು ಹೋಗುವ ದೃಶ್ಯವನ್ನು ಮೊಮ್ಮಗಳು ಮರುಸೃಷ್ಟಿಸಿದ್ದಾರೆ. ಈ ದೃಶ್ಯ ನೋಡುತ್ತಿದ್ದಂತೆ ಅಜ್ಜಿಯ ಮುಖದಲ್ಲಿ ನಗು ಮೂಡಿದರೂ ಆ ಬಳಿಕ ಭಾವುಕರಾಗುವುದನ್ನು ಕಾಣಬಹುದು.
ಈ ವಿಡಿಯೋ 1.8 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ನೀವು ಅವರ ದಿನವನ್ನಷ್ಟೇ ಖುಷಿಯಾಗಿಸಲಿಲ್ಲ, ನನ್ನ ಈ ದಿನವು ಅರ್ಥಪೂರ್ಣವನ್ನಾಗಿಸಿದೆ ಎಂದಿದ್ದಾರೆ. ಮತ್ತೊಬ್ಬರು, ತಂತ್ರಜ್ಞಾನವು ಎಲ್ಲವನ್ನು ಸಾಧ್ಯವಾಗಿಸಿದೆ. ನಮ್ಮವರು ಮತ್ತೆ ನಮ್ಮೊಂದಿಗೆ ಇದ್ದಾರೆ ಎನ್ನುವುದನ್ನು ಸಾಧ್ಯವಾಗಿಸಲು ಎಐಯಿಂದ ಮಾತ್ರ ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇನ್ಸ್ಟಾಗ್ರಾಮ್‌ನಲ್ಲಿ ಅಪರಿಚಿತರಿಗಾಗಿ ಅಳುವುದು ನನ್ನ ದಿನಚರಿಯಾಗಿದೆ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ಹಾರ್ಟ್ ಸಿಂಬಲ್ ಕಳುಹಿಸಿ ಈ ಮೊಮ್ಮಗಳ ಈ ಉಡುಗೊರೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.