
ಬರ್ತಡೇ ಪಾರ್ಟಿಯಿಂದ ನರ್ತಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ
Friday, February 17, 2023
ಲಖನೌ: ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ನರ್ತಕಿಯೊಬ್ಬಳ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ಪ್ರಾಪರ್ಟಿ ಡೀಲರ್‌ನ ಬರ್ತಡೇ ಪಾರ್ಟಿಯಲ್ಲಿ ಪ್ರದರ್ಶನ ನೀಡಿದ ನಂತರ ಆರೋಪಿಗಳು ನರ್ತಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ನರ್ತಕಿ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ತನ್ನ ಮೂವರು ನರ್ತಕಿಯರ ತಂಡವನ್ನು ಪ್ರಾಪರ್ಟಿ ಡೀಲರ್‌ನ ಹುಟ್ಟುಹಬ್ಬದ ಪಾರ್ಟಿಯಲ್ಲಿ 6,000 ರೂ.ಗೆ ಪ್ರದರ್ಶನ ನೀಡಲು ಹೇಳಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.
ಆದರೆ, ನರ್ತಕಿಯೊಬ್ಬಳು ತನ್ನ ಪ್ರದರ್ಶನವನ್ನು ಮುಗಿಸಿ ಕಾರ್ಯಕ್ರಮದಿಂದ ವಾಪಾಸ್ ಆಗುತ್ತಿದ್ದಾಗ, ಆರು ಜನರು ಅವಳನ್ನು ಕಾರಿನಲ್ಲಿ ಅಪಹರಿಸಿ ಹತ್ತಿರದ ಕಾಡಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಗ್ಯಾಂಗ್‌ರೇಪ್‌ನಿಂದ ಬದುಕುಳಿದ ಮಹಿಳೆ ತನ್ನ ದೂರಿನಲ್ಲಿ ಆರೋಪಿಗಳು ಮದ್ಯ ಸೇವಿಸಿದ್ದರು ಎಂದು ಆರೋಪಿಸಿದ್ದಾರೆ.
ನರ್ತಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆರೋಪಿಗಳು ಪರಾರಿಯಾಗಿದ್ದಾರೆ. ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸಾಮೂಹಿಕ ಅತ್ಯಾಚಾರ ಆರೋಪಿಗಳ ಪತ್ತೆಗೆ ಉನ್ನಾವೋ ಪೊಲೀಸರು ಶೋಧ ಆರಂಭಿಸಿದ್ದಾರೆ.