ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೇತಾಜಿ ಬ್ರಿಗೇಡ್ ನಿಂದ ಸಹಾಯಧನ ವಿತರಣೆ
Sunday, January 8, 2023
ಮೂಡುಬಿದಿರೆ: ಇಲ್ಲಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಹಿತ ಹಲವು ಕಡೆ ವೇಷ ಧರಿಸಿ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಧನವನ್ನು ಸಂಗ್ರಹಿಸಿರುವ ಮೂಡುಬಿದಿರೆಯ ಸ್ವಯಂ ಸೇವಾ ಸಂಸ್ಥೆ "ನೇತಾಜಿ ಬ್ರಿಗೇಡ್" ಅಸಹಾಯಕರಾಗಿರುವ 8 ಜನರಿಗೆ ಒಟ್ಟು ರೂ 2,2,576 ನ್ನು ಭಾನುವಾರ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಉಮಾನಾಥ ಎ.ಕೋಟ್ಯಾನ್ ಜ್ಯೋತಿನಗರ ಶಾಲೆಯಲ್ಲಿ ಸಹಾಯಧನವನ್ನು ಹಸ್ತಾಂತರಿಸಿ ಮಾತನಾಡಿ ಜಾತ್ರೆ, ಕಂಬಳ ಸಹಿತ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೀಕ್ಷಣೆ ಮಾಡುವ ಬದಲು ವಿಶೇಷ ರೀತಿಯ ವೇಷಭೂಷಣಗಳನ್ನು ಧರಿಸಿ ಡಬ್ಬಗಳನ್ನು ಹಿಡಿದು ದಾನಿಗಳಿಂದ ಸಹಕಾರ ಪಡೆದು ಅದನ್ನು ವಿವಿಧ ರೀತಿಯ ಅನಾರೋಗ್ಯ ಪೀಡಿತ ಅಶಕ್ತ ಕುಟುಂಬಗಳಿಗೆ ನೀಡಿ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸಿ ಕಣ್ಣೀರನ್ನು ಒರೆಸಿ ಶಕ್ತಿ ತುಂಬುವಂತಹ ಕೆಲಸವನ್ನು "ನೇತಾಜಿ ಬ್ರಿಗೇಡ್" ಮಾಡುತ್ತಿರುವುದು ಶ್ಲಾಘನೀಯ.
ನೇತಾಜಿ ಬ್ರಿಗೇಡ್ ನ ರಾಹುಲ್‌ಕುಲಾಲ್ ಮಾತನಾಡಿ ಆಶಕ್ತರ ಚಿಕಿತ್ಸೆಗಾಗಿ ಈವರೆಗೆ ನಾವು 49 ಕುಟುಂಬಗಳಿಗೆ ರೂ 13,8303 ವನ್ನು ಹಸ್ತಾಂತರಿಸಿದ್ದೇವೆ. ಇತ್ತೀಚೆಗೆ ಮೂಡುಬಿದಿರೆಯಲ್ಲಿ ನಡೆದ 20 ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ನಮ್ಮ 9 ನೇ ಸೇವಾ ಯೋಜನೆಗಾಗಿ ರೂ 2,2,576ನ್ನು ಸಂಗ್ರಹಿಸಿ 8 ಜನರ ಚಿಕಿತ್ಸೆಗೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಒಂದು ಅಂಬ್ಯುಲೆನ್ಸ್ ನ್ನು ಖರೀದಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು.
ಧನ ಸಂಗ್ರಹಕ್ಕಾಗಿ ವೇಷ ಹಾಕಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕ್ಯಾನ್ಸರ್ ಸಹಿತ ವಿವಿಧ ರೋಗಗಳ ಚಿಕಿತ್ಸೆಗಾಗಿ ಈ ಸಹಾಯಧನವನ್ನು ನೀಡಲಾಗಿದೆ.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಗುರುಸ್ವಾಮಿ ರಾಘು ಪೂಜಾರಿ, ಸಂತೋಷ್ ಶೆಟ್ಟಿ, ಪುರಸಭಾ ನಾಮ ನಿರ್ದೇಶಿತ ಸದಸ್ಯ ರಾಜೇಶ್ ಮಲ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೇತಾಜಿ ಬ್ರಿಗೇಡ್ ನ ಸದಸ್ಯರು ಈ ಸಂದರ್ಭದಲ್ಲಿದ್ದರು.