ಕಾರ್ಕಳ : ಭುವನೇಂದ್ರ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ
Saturday, January 7, 2023
ಕಾರ್ಕಳ: ಆತ್ಮ ವಿಶ್ವಾಸವೊಂದೇ ನಮ್ಮನ್ನು ಸದಾ ಗೆಲ್ಲಿಸುವುದು. ಅದು ಪರೀಕ್ಷಾ ಸಂದರ್ಭದಲ್ಲಿ ಮಾತ್ರವಲ್ಲ ಜೀವನದಲ್ಲೂ ಯಶಸ್ಸು ಗಳಿಸಲು ಜೊತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಲು ಕಾರಣ. ಸಮಾಜದಲ್ಲಿ ಓದುವುದರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಪ್ರಶ್ನಿಸಿ ಮಾತಾಡುವವರಿರುತ್ತಾರೆ. ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದೆ ಗುರಿಯನ್ನು ತಲುಪುವಲ್ಲಿ ಪ್ರಯತ್ನ ಮಾಡುತ್ತಲೇ ಇರಬೇಕು. ನಮ್ಮ ಸ್ವಭಾವಗಳಲ್ಲಿ ಬದಲಾವಣೆ ಮಾಡಿಕೊಳ್ಳದೆ ಛಲದಿಂದ ಸಾಧನೆಯ ಕಡೆಗೆ ಮುನ್ನುಗ್ಗುವಂತಿರಬೇಕು. ಅದು ನಮಗೆ ಗೆಲುವನ್ನು ತಂದುಕೊಡುತ್ತದೆ ಎಂದು ಕಾಂತಾರ ಸಿನಿಮಾ ಗುರುವ ಪಾತ್ರದ ಸ್ವರಾಜ್ ಶೆಟ್ಟಿ ಹೇಳಿದರು.
ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸಿ.ಎ. ಶಿವಾನಂದ ಪೈ ಮಾತನಾಡಿ, ಇಂದಿನ ಆಧುನಿಕ ಜೀವನಕ್ರಮದಲ್ಲಿ ಪತ್ಯೇತರ ಚಟುವಟಿಕೆಗಳ ಕುರಿತಾಗಿ ವಿರೋದಾಭಾಸಗಳಿವೆ. ನಿಜವಾಗಲೂ ಪತ್ಯೇತರ ಚಟುವಟಿಕೆಗಳು ಬದುಕಿಗೆ ಸಮತೋಲಿತ ಭಾವವನ್ನು ನೀಡುತ್ತವೆ. ವಿದ್ಯಾರ್ಥಿಗಳು ಮತ್ತು ಹೆತ್ತವರು ಇದನ್ನು ಗಮನಿಸಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಸೋಲು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಸಾಧಿಸುವ ದಾರಿಗೆ ಸೋಲೇ ಗೆಲುವಿನ ಮೆಟ್ಟಲಾಗುತ್ತವೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ ಜೀವನದಲ್ಲಿ ಜಾಳ್ಮೆಯಿಂದ ಎಲ್ಲವನ್ನು ನಿಭಾಯಿಸಿದರೆ ಯಶಸ್ಸು ಕಾಣುವುದು ಸುಲಭವಾಗುತ್ತದೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸೌಲಭ್ಯಗಳನ್ನು ಬಳಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು.